ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಅಧಿಕಾರಿಗಳು
ಕಾಳಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮಲಘಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯದಲ್ಲಿ ಶನಿವಾರವೂ ಏರುಪೇರಾಗಿದ್ದು, ಮತ್ತೆ 17 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ಐವರು ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ತಲೆ ಸುತ್ತು, ಸುಸ್ತು ಸೇರಿ ಇತರೆ ಲಕ್ಷಣಗಳು ಕಂಡು ಬಂದು ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಿಗ್ಗೆ 17 ಮಕ್ಕಳಲ್ಲಿ ಅದೇ ತರಹದ ಲಕ್ಷಣಗಳು ಕಂಡುಬಂದಿವೆ.
ಶಾಲೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಚಿತ್ತಾಪುರ ಬಿಇಒ ಶಶಿಧರ ಬಿರಾದಾರ, ಬಿಸಿಯೂಟ ಅಧಿಕಾರಿ ಪ್ರಕಾಶ ನಾಯಿಕೋಡಿ, ಬಿ.ಆರ್.ಪಿ ರಮೇಶ ಮಠದ, ಗೋಟೂರ ಗ್ರಾ.ಪಂ ಅಧ್ಯಕ್ಷ ಶಿವಕುಮಾರ ಕಮಕನೂರ, ಪಿಡಿಒ ಗುರುನಾಥ ರಾಠೋಡ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಕ್ಕಳ ಆರೋಗ್ಯ ವಿಚಾರಿಸಿದರು.
ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಶಾಲೆಗೆ ಆಗಮಿಸಿ, ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಈ ದಿನ ಮಕ್ಕಳಿಗೆ ಬಿಸಿಯೂಟ ಬಡಿಸದೆ ಬಿಸ್ಕೆಟ್, ಒಆರ್‌ಎಸ್ ನೀಡಿದರು.
ಕಾಳಗಿ ಆಸ್ಪತ್ರೆಯಲ್ಲೇ ಠಿಕಾಣಿ ಹೂಡಿದ ಈ ಎಲ್ಲಾ ಅಧಿಕಾರಿಗಳು ವೈದ್ಯರೊಂದಿಗೆ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಕ್ಕಳಿಗೆ ಇಡ್ಲಿ ಉಪಹಾರ ಕೊಟ್ಟು ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಶುಕ್ರವಾರ ಶಾಲೆಗೆ ಹೋಗದ ಮಕ್ಕಳಲ್ಲೂ ಈ ತೊಂದರೆ ಕಾಣಿಸಿ ಕೊಂಡಿದೆ. ಪೋಷಕರು ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ದಾರೆ.
ಶಾಲೆಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಮೋಟಾರ್ ಸುಟ್ಟಿದ್ದು ಕೆಲದಿನಗಳಿಂದ ನೀರು ಪೂರೈಕೆ ಸ್ಥಗಿತಗವಾಗಿದೆ. ಯಾವ ಕಾರಣಕ್ಕೆ ಈ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂಬುದೇ ತಿಳಿಯದಾಗಿದೆ. ಮುಖ್ಯಶಿಕ್ಷಕ ಗುರುದೇವಪ್ಪ ರಾಮಶೆಟ್ಟಿ ಆತಂಕಕ್ಕೊಳಗಾಗಿ ರಾತ್ರಿಯಿಂದ ಊಟ ಮಾಡದೆ ಮಕ್ಕಳೊಂದಿಗೆ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದಾರೆ. ಮಲಘಾಣ ಗ್ರಾಮಸ್ಥರು ಕುಡಿಯುವ ನೀರು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.