ಕಲಬುರಗಿ: ಬಣ್ಣ ಬಣ್ಣದ ಬಟ್ಟೆ ಧರಿಸಿದ್ದ ಮಕ್ಕಳು. ಕಣ್ಣಿಗೆ ಕಾಜಲ್ ಹಚ್ಚಿದ್ದ ಯುವಕರು. ಮಹಡಿಗಳ ಮೇಲೆಯೇ ನಿಂತು ಮೆರವಣಿಗೆ ವೀಕ್ಷಿಸುತ್ತಿದ್ದ ಮಹಿಳೆಯರು. ಜಗಮಗಿಸುತ್ತಿದ್ದ ವಿದ್ಯುದ್ದೀಪಗಳು. ತನ್ನ ಕುಣಿತದೊಂದಿಗೆ ನೆರೆದಿದ್ದವರನ್ನೂ ರಂಜಿಸುತ್ತಿದ್ದ ‘ಸುಲ್ತಾನ್’ ಕುದುರೆ. ರಸ್ತೆಯ ತುಂಬಾ ಜಾತ್ರೆಯಂತೆ ಸೇರಿದ್ದ ಜನ... ಇದೆಲ್ಲಾ ಶುಕ್ರವಾರ ಸಂಜೆ ಮುಸ್ಲಿಂ ಚೌಕ್‌ನಲ್ಲಿ ಕಂಡು ಬಂದ ಚಿತ್ರಣ.
ಈದ್ ಮಿಲಾದ್ ಅಂಗವಾಗಿ ಶುಕ್ರವಾರ ಸಂಜೆ ಖಾಜಾ ಬಂದಾನವಾಜ್ ದರ್ಗಾದಿಂದ, ಅಬ್ದುಲ್ ಕಲಾಂ ವೃತ್ತದ ಮಾರ್ಗವಾಗಿ ಮುಸ್ಲಿಂಚೌಕ್‌ವರೆಗೂ ಜನಜಂಗುಳಿ ನೆರೆದಿತ್ತು. ಮುಹಮ್ಮದ್ ಪೈಗಂಬರರ 1500ನೇ ಜನ್ಮದಿನದ ಸಂಭ್ರಮದಲ್ಲಿದ್ದ ಮುಸ್ಲಿಂ ಸಮಾಜದವರು ಪರಸ್ಪರ ಶುಭಾಶಯ ಕೋರುತ್ತಿದ್ದರು. ಹಬ್ಬದ ಸಂಭ್ರಮ ನೋಡಲು ಆಗಮಿಸುತ್ತಿದ್ದವರನ್ನು ರಸ್ತೆಯುದ್ದಕ್ಕೂ ನೀರು, ಪಾನಕ, ಜೂಸ್ ನೀಡಿ ಸ್ವಾಗತಿಸಲಾಗುತ್ತಿತ್ತು. ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳ ಚಿತ್ತಾರ ನೆರೆದವರ ಕಣ್ಮನ ಸೆಳೆಯುತ್ತಿತ್ತು.
ಪ್ರವಾದಿ ಮುಹಮ್ಮದರ ಜನ್ಮದಿನ ಅಂಗವಾಗಿ ಮರ್ಕಜ್ ಸೀರತ್ ಕಮಿಟಿ ಆಯೋಜಿಸಿದ್ದ 46ನೇ ವಾರ್ಷಿಕ ಮೆರವಣಿಗೆ ಕಣ್ತುಂಬಿಕೊಳ್ಳಲು ಸಾವಿರಾರು ಜನ ನೆರೆದಿದ್ದರು. ಮೆಕ್ಕಾ, ಮದೀನಾ, ಖಾಜಾ ಬಂದಾನವಾಜ್ ದರ್ಗಾ, ತೋಪುಗಳ ಪ್ರತಿಕೃತಿ ಸೇರಿದಂತೆ 200ಕ್ಕೂ ಅಧಿಕ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಿದರು. ಟ್ರ್ಯಾಕ್ಟರ್, ಟಂಟಂ, ಟಾಟಾಏಸ್‌ಗಳಲ್ಲಿ ಇರಿಸಿ ಮೆರವಣಿಗೆ ಮಾಡಿದರು. ಡಿಜೆ ನಿಷೇಧಿಸಿದ್ದರಿಂದ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಮೆರವಣಿಗೆ ನಡೆಸಿದರು. ಯುವಕರು ಅಲ್ಲಾ ಹಿರಿಮೆ ಸಾರುವ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರು. ಮಹಿಳೆಯರು, ಮಕ್ಕಳು ಕಟ್ಟಡಗಳ ಮೇಲೆಯೇ ನಿಂತು ಮೆರವಣಿಗೆ ಕಣ್ತುಂಬಿಕೊಂಡರು..
ಸ್ತಬ್ಧ ಚಿತ್ರಗಳ ಭವ್ಯ ಮೆರವಣಿಗೆ ಮುಸ್ಲಿಂ ಚೌಕ್‌ನಿಂದ ಆರಂಭವಾಗಿ ಮಿಜಗುರಿ, ನೆಹರೂ ಗಂಜ್, ಕಿರಾಣಾ ಬಜಾರ್, ಕಪಡಾ ಬಜಾರ್, ಗಣೇಶ್ ಮಂದಿರ, ಬಹಮನಿ ಚೌಕ್ ಮಾರ್ಗವಾಗಿ ಹಫ್ತ್ ಗುಂಬಜ್ ಬಳಿಯ ನ್ಯಾಷನಲ್ ಕಾಲೇಜು ತಲುಪಿ ಮುಕ್ತಾಯವಾಯಿತು.
ಗುಲಬರ್ಗಾ ಸ್ಟಾರ್‌ಬಗಿ ಕುದುರೆ ತಂಡದವರು ಕುದುರೆಗಳ ಮೇಲೆ ಕುಳಿತು ಮೆರವಣಿಗೆ ನಡೆಸಿದರು. ‘ಸುಲ್ತಾನ್’ ಹೆಸರಿನ ಕುದುರೆಯ ಕುಣಿತ ನೆರೆದಿದ್ದವರನ್ನು ರಂಜಿಸಿತು.
ಮೆರವಣಿಗೂ ಮುನ್ನ ವೇದಿಕೆ ಕಾರ್ಯಕ್ರಮ ನಡೆಯಿತು. ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಮುಸ್ಲಿಮರಿಗೆ ಈದ್ ಮಿಲಾದ್ ಶುಭಾಶಯ ತಿಳಿಸುತ್ತಿದ್ದಂತೆ ನೆರೆದವರಿಂದ ಹರ್ಷೋದ್ಗಾರ ಮೊಳಗಿತು. ‘ದೇವರು ನಿಮಗೆ, ನಿಮ್ಮ ಮಕ್ಕಳಿಗೆ ಆರೋಗ್ಯ, ಆಯಸ್ಸು, ಆರ್ಥಿಕ ಸಂಪತ್ತು ನೀಡಲಿ’ ಎಂದು ಹಾರೈಸಿದರು.
ಖಾಜಾ ಬಂದಾನವಾಜ್ ದರ್ಗಾದ ಮುಖ್ಯಸ್ಥ ಸೈಯದ್ ಮುಹಮ್ಮದ್ ಅಲಿ ಅಲ್–ಹುಸೇನಿ, ‘ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಸಲಾಂ ಮಾಡುವುದರಿಂದ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ’ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಫರಾಜ್ ಉಲ್ ಇಸ್ಲಾಂ ಮಾತನಾಡಿ, ‘ಮರ್ಕಜ್ ಸೀರತ್ ಕಮಿಟಿಯಿಂದ ಇಲ್ಲಿ 1981ರಿಂದಲೂ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಇದು 46ನೇ ಉತ್ಸವವಾಗಿದ್ದು, ಇದು ಹೀಗೆಯೇ ಮುಂದುವರಿಯಲಿ. ಇಲ್ಲಿ ಹಿಂದೂ–ಮುಸ್ಲಿಂ ಒಗ್ಗಟ್ಟಿನಿಂದ ಬಾಳುತ್ತಿದ್ದು, ಕಲಬುರಗಿ ಏಕತೆಯ ಬೀಡಾಗಿದೆ’ ಎಂದರು.
ಮುಹಮ್ಮದ್ ಪೈಗಂಬರರ 1500ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪ‍್ರವಾದಿ ಮುಹಮ್ಮದ್‌ರ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅನ್ವರುಲ್ ಹಕ್ ಮೊಟಿ ಸೇಠ್, ಜೈದುಲ್-ಇಸ್ಲಾಂ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್‌ಗಳು ಹಾಗೂ ಸ್ಥಳೀಯ ನಾಯಕರು ಪಾಲ್ಗೊಂಡಿದ್ದರು.
ಇಸ್ಲಾಂ ಧರ್ಮದಲ್ಲಿ ಸಲಾಂ ಎಂದು ಹೇಳುವುದು ಬೇರೆಯವರಿಗಾಗಿ ಅಲ್ಲಾನಲ್ಲಿ ಪ್ರಾರ್ಥಿಸುವುದಾಗಿದೆ. ಪೈಗಂಬರರ ಜೀವನ ನಮಗೆ ದಿಕ್ಸೂಚಿಯಾಗಿದೆಸೈಯದ್ ಮುಹಮ್ಮದ್ ಅಲಿ ಅಲ್–ಹುಸೇನಿ ಖಾಜಾ ಬಂದಾನವಾಜ ದರ್ಗಾದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.