ಕಲಬುರಗಿ: ಉನ್ನತ ಸಾಧನೆ ಮಾಡಿದ ಶಿಷ್ಯರು ಗುರುವಿಗೆ ಕಾಣಿಕೆ ನೀಡುವುದು ಸಾಮಾನ್ಯ. ಆದರೆ, ಈ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಕೈಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳ ಶಿಕ್ಷಣಕ್ಕೆ ಸೌಲಭ್ಯ ಕಲ್ಪಿಸಿದ್ದಾರೆ.
ನಗರದ ಅಣತಿ ದೂರದಲ್ಲಿರುವ ತಾಜಸುಲ್ತಾನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಒಗ್ಗೂಡಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದ್ದಾರೆ. ಇಲ್ಲಿ ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಶಾಲೆಯಿದ್ದು, ಸುಮಾರು 320ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶಾಲೆಯಲ್ಲಿ 10 ಶಿಕ್ಷಕರಿದ್ದು, ತಲಾ ಒಬ್ಬರು ₹5 ಸಾವಿರದಿಂದ ₹8 ಸಾವಿರದವರೆಗೆ ಖರ್ಚು ಮಾಡಿ ತರಗತಿಗಳ ಪಠ್ಯಕ್ರಮದಂತೆ 14 ಕೋಣೆಗಳಲ್ಲಿ ಗೋಡೆ ಬರಹಗಳನ್ನು ಬರೆಯಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಂತೆ ಅಭ್ಯಾಸ ಮಾಡಲು ಅನುಕೂಲವಾಗಿದೆ.
ಎಲ್‌ಕೆಜಿ ಮಕ್ಕಳಿಗೂ ಅನುಕೂಲವಾಗುಂತೆ ವಿವಿಧ ಬಗೆಯ ಗೋಡೆ ಬರಹಗಳನ್ನು ಬರೆಯಲಾಗಿದೆ. ನೆಲದ ಮೇಲೆ ಕುಳಿತ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಪ್ರಭಾರ ಮುಖ್ಯಶಿಕ್ಷಕರೇ ಸ್ವತಃ ಹಣ ಹಾಕಿ 50 ಕುರ್ಚಿಗಳನ್ನು ತಂದಿದ್ದಾರೆ. ಬಡ ಮಕ್ಕಳಿಗೆ ಅನುಕೂಲವಾಗುಬೇಕು ಎಂಬ ಉದ್ದೇಶದಿಂದ ಎಲ್ಲ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಡಿಕ್ಷನರಿಗಳನ್ನೂ ನೀಡಿದ್ದಾರೆ.
ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಬರುವ ರೈಮ್ಸ್ ಸೇರಿ ವಿವಿಧ ವಿಷಯಗಳನ್ನು ಕಲಿಯಲು ನೆರವಾಗುವಂತೆ ಶಾಲಾ ಶಿಕ್ಷಕಿ ವಿಜಯಲಕ್ಷಿ ಬಿರಾದಾರ ಅವರು ₹39 ಸಾವಿರ ನೀಡಿ ಟಿವಿಯನ್ನು ಖರೀದಿಸಿ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.
ಸಹ ಶಿಕ್ಷಕರಾದ ಮಲ್ಲೇಶಿ ಅವರು ₹25 ಸಾವಿರ ಮೌಲ್ಯದ ಟೇಬಲ್ ಹಾಗೂ ಕುರ್ಚಿಗಳು, ಜಯಶ್ರೀ ಸಜ್ಜನ ಅವರು ₹15 ಸಾವಿರ ಮೌಲ್ಯದ ಡ್ರಮ್‌ಸೆಟ್ ನೀಡಿದ್ದು, ಚಂದಮ್ಮ, ಹೇಮಲತಾ, ಮೋತಿಬಾಯಿ, ಅರವಿಂದ ಸಿತಾಳೆ ಅವರು ತಮ್ಮ ಬಳಿ ಹಣವನ್ನು ನೀಡಿ ಶಾಲೆಯ ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ.
ವಿಠ್ಠಲ ವಗ್ಗನ
ಶಾಲೆಯ ಸಿಆರ್‌ಪಿ ಜಗನ್ನಾಥ ಬಡಿಗೇರ್ ಅವರು ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಶೂ ಹಾಗೂ ಸಾಕ್ಸ್‌ಗಳನ್ನು ತಮ್ಮ ಸ್ವಂತ ಹಣದಿಂದ ಕೊಡಿಸಿದ್ದಾರೆ. ಮುಖ್ಯಶಿಕ್ಷಕ ಹಾಗೂ ಸಹ ಶಿಕ್ಷಕರು ಸೇರಿ ಸುಮಾರು ₹30 ಸಾವಿರ ಹಣ ಸಂಗ್ರಹ ಮಾಡಿ ಪ್ರತಿ ವಿದ್ಯಾರ್ಥಿಗಳಿಗೆ ಅಗತ್ಯ ನೋಟ್‌ಬುಕ್‌ಗಳು, ಪೆನ್ಸಿಲ್ ಹಾಗೂ ರಬ್ಬರ್‌ಗಳನ್ನು ನೀಡಿದ್ದಾರೆ. ಅವುಗಳನ್ನು ಮುಖ್ಯಶಿಕ್ಷಕರ ಕೋಣೆಯಲ್ಲಿ ಸಂಗ್ರಹಿಸಿ ಇಟ್ಟಿದ್ದು, ಅಗತ್ಯ ಇರುವ ವಿದ್ಯಾರ್ಥಿಗಳು ತೆಗೆದುಕೊಂಡು ಹೋಗುತ್ತಾರೆ.
ಶಾಲೆಯ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಿದ್ದು, 40ಕ್ಕೂ ಹೆಚ್ಚು ವಿವಿಧ ಬಗೆಯ ಮರಗಳನ್ನು ಬೆಳೆಸಿದ್ದಾರೆ. ಶಾಲೆಯ ಒಳ ಆವರಣದಲ್ಲಿ ವಿವಿಧ ಬಗೆಯ ಹೂವು ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಬಿಸಿಯೂಟಕ್ಕೆ ಬೇಕಾಗುವ ಕರಿಬೇವು, ಕೊತ್ತಂಬರಿ, ಕುಂಬಳಕಾಯಿ ಸಸಿಗಳನ್ನು ನೆಟ್ಟಿದ್ದಾರೆ. ಅಲ್ಲಿ ಬೆಳೆದ ವಸ್ತುಗಳನ್ನೇ ಬಳಕೆ ಮಾಡುತ್ತಿರುವುದು ಮತ್ತೊಂದು ವಿಶೇಷ.
ವಿದ್ಯಾಶ್ರೀ ಪುಂಡಲೀಕ
ಕೆಕೆಆರ್‌ಡಿಬಿಯಿಂದ ಸ್ಮಾರ್ಟ್‌ಕ್ಲಾಸ್
ಡಿಜಿಟಲ್ ಕಲಿಕೆಗೆ ನೆರವಾಗುವಂತೆ ಕೆಕೆಆರ್‌ಡಿಬಿ ಸಹಾಯಧನ ಅನುದಾನದಲ್ಲಿ ಸ್ಮಾರ್ಟ್‌ಕ್ಲಾಸ್ ನಿರ್ಮಾಣ ಮಾಡಿದ್ದು, ಅದನ್ನು ವಿದ್ಯಾರ್ಥಿಗಳೇ ಬಳಕೆ ಮಾಡುತ್ತಾರೆ.
‘ಗಣಿತ ವಿಷಯದ ಗ್ರಾಫ್ ಸೇರಿ ಹಲವು ವಿಷಯಗಳನ್ನು ತಿಳಿದುಕೊಳ್ಳಲು ನೆರವಾಗಿದೆ. ತರತಿಗಳ ಒಂದು ಪಾಠ ಮುಗಿದ ನಂತರ ಆನ್‌ಲೈನ್‌ನಲ್ಲಿ ಬರುವ ಪಾಠವನ್ನು ಇಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಕೇಳಿಸಲಾಗುತ್ತದೆ. ಬಳಿಕ ಟೆಸ್ಟ್ ತೆಗೆದುಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಇದರಿಂದ ಉತ್ತಮ ಗಳಿಸಲು ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ಶಾಲಾ ಶಿಕ್ಷಕ ಅರವಿಂದ ಸಿತಾಳೆ.
ಅಧಿಕಾರಿಗಳ ಭೇಟಿ
ಶಾಲೆಯ ಕಲಿಕಾ ವಾತಾವರಣ ಗಮನಿಸಿದ್ದ ಹಿಂದಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ಆಕಾಶ ಶಂಕರ ಅವರು ಬಂದು ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ್ದರು. ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಿತೀಶ್‌ಕುಮಾರ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.