ADVERTISEMENT

ಶಿಕ್ಷಕರ ಮತದಾರರ ಪಟ್ಟಿ ಪರಿಷ್ಕರಣೆ: ನೋಂದಣಿ ಹೆಚ್ಚಾಗಲಿ; ಪ್ರಾದೇಶಿಕ ಆಯುಕ್ತೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:09 IST
Last Updated 18 ಅಕ್ಟೋಬರ್ 2025, 7:09 IST
ಕಲಬುರಗಿಯಲ್ಲಿ ಶುಕ್ರವಾರ ಜಿಲ್ಲೆಯ ಈಶಾನ್ಯ ಶಿಕ್ಷಕರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಮಾತನಾಡಿದರು
ಕಲಬುರಗಿಯಲ್ಲಿ ಶುಕ್ರವಾರ ಜಿಲ್ಲೆಯ ಈಶಾನ್ಯ ಶಿಕ್ಷಕರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಮಾತನಾಡಿದರು   

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ವಿಭಾಗದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಶಿಕ್ಷಕ ಮತದಾರರು ನೋಂದಣಿಯಾಗುವಂತೆ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಳೆದ ಬಾರಿ ಜಿಲ್ಲೆಯಲ್ಲಿ 41 ಮತದಾನ ಕೇಂದ್ರ ಸ್ಥಾಪಿಸಿದ್ದು, 9,529 ಮತದಾರರು ನೋಂದಣಿ ಮಾಡಿಕೊಂಡಿದ್ದರು ಎಂದರು.

ಕಲಬುರಗಿ ನಗರದಲ್ಲಿಯೇ ಶೇ 75ರಷ್ಟು ಜಿಲ್ಲೆಯ ಮತದಾರರಿರುವುದರಿಂದ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಹಾಯಕ ಆಯುಕ್ತರು ಸ್ಥಳೀಯರು ಹೆಚ್ಚು ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ದಿನದಿಂದ ದಿನಕ್ಕೆ ಶಾಲಾ-ಕಾಲೇಜುಗಳ ಸಂಖ್ಯೆ ಹೆಚ್ಚಿದ್ದರಿಂದ ಮತದಾರರ ಸಂಖ್ಯೆ ಸಹ ಹೆಚ್ಚಾಗಬೇಕಲ್ಲವೇ? ವಿಶೇಷವಾಗಿ ಶಾಲಾ–ಕಾಲೇಜಿಗೆ ಹೋಗಿ ಅ.27 ಮತ್ತು 30 ಹಾಗೂ ನವೆಂಬರ್ 3ರಂದು ಮಿಂಚಿನ ನೋಂದಣಿ ಅಭಿಯಾನ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಕೇವಲ ಪ್ರೌಢಶಾಲೆ, ಪಿ.ಯು ಕಾಲೇಜು, ಪದವಿ ಕಾಲೇಜು ಕೇಂದ್ರಿಕರಿಸದೆ ಡಿ.ಪಿ.ಎ.ಆರ್ ಇಲಾಖೆ ಅಧಿಸೂಚಿಸಿರುವ 12 ವಿಭಾಗದಲ್ಲಿನ ವಿವಿಧ ಶಾಲೆ–ಕಾಲೇಜುಗಳನ್ನು ಸಂಪರ್ಕಿಸಿ ಶಿಕ್ಷಕರಿಂದ ಅರ್ಜಿ ಭರ್ತಿ ಮಾಡಿಸಿಕೊಳ್ಳಬೇಕು. ನರ್ಸಿಂಗ್ ಕಾಲೇಜು, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸಹ ಹೆಚ್ಚಾಗಿರುವುದರಿಂದ ಈ ಕಡೆಯೂ ಗಮನ ಹರಿಸಬೇಕು. ಇನ್ನು ಸ್ವೀಕೃತ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕಿರುವುದರಿಂದ ನೋಂದಣಿಗೆ ಕೊನೆ ದಿನವಾದ ನವೆಂಬರ್ 6ರ ವರೆಗೆ ಕಾಯದೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ 875 ಪ್ರೌಢ ಶಾಲೆ ಮತ್ತು 268 ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಮತ್ತು ಅನುದಾನಿತ 32 ಪದವಿ ಕಾಲೇಜುಗಳಿವೆ. ಡಿಡಿಪಿಐ, ಡಿಡಿಪಿಯು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಈ ಸಂಸ್ಥೆಗಳಲ್ಲಿ ಮತದಾರರ ನೋಂದಣಿಗೆ ಹೆಚ್ಚಿನ ಜವಾಬ್ದಾರಿ ಹೂರಬೇಕು. ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಇಒ ಹಾಗೂ ಬಿಇಒ ಶಾಲಾ–ಕಾಲೇಜಿಗೆ ಭೇಟಿ ನೀಡಿ ನೋಂದಣಿ ಕಾರ್ಯ ಚುರುಕಾಗುವಂತೆ ನೋಡಿಕೊಳ್ಳಬೇಕು. ನರ್ಸಿಂಗ್, ಮೆಡಿಕಲ್ ಕಾಲೇಜಿಗೆ ಪಿಡಿಒಗಳನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪವಿಭಾಗಾಧಿಕಾರಿಗಳಾದ ಸಾಹಿತ್ಯ, ಪ್ರಭುರೆಡ್ಡಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಡಿಡಿಪಿಐ ಸೂರ್ಯಕಾಂತ ಮದಾನೆ, ಡಿಡಿಪಿಯು ಸುರೇಶ ಅಕ್ಕಣ್ಣ, ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಂದ್ರ ಶಿಂಧೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ ಸೇರಿದಂತೆ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಇಒಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.