
ಕಲಬುರಗಿ: ಜಿಲ್ಲೆಯ ಜನತೆಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ನಾಟಕಗಳ ರಸಗವಳ ಉಣಬಡಿಸಲು ಮುಂದಾಗಿರುವ ಜಿಲ್ಲಾಡಳಿತ ಅಧೀನದ ಕಲಬುರಗಿ ನೆಕ್ಸ್ಟ್ ಪ್ರತಿಷ್ಠಾನವು ರಂಗಶಂಕರದ ಸಹಯೋಗದಲ್ಲಿ ಇದೇ 21ರಿಂದ 28ರವರೆಗೆ ‘ಕಲಬುರಗಿ ನಾಟಕೋತ್ಸವ’ನ್ನು ಆಯೋಜಿಸಿದೆ.
ಬೆಂಗಳೂರು, ಪುಣೆ, ಮುಂಬೈನಂತಹ ಮೆಟ್ರೊ ನಗರಗಳಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿದ್ದ ಈ ನಾಟಕಗಳು ಕಲಬುರಗಿಯ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 7ಕ್ಕೆ ಸರಿಯಾಗಿ ಶುರುವಾಗಲಿವೆ.
ಉದ್ಘಾಟನಾ ನಾಟಕವಾಗಿ ಇದೇ 21ರಂದು ಸಂಜೆ 7ಕ್ಕೆ ಬೆಂಗಳೂರಿನ ಸ್ಪಂದನ ತಂಡದ ‘ಕರಿಮಾಯಿ’ ನಾಟಕ ಪ್ರದರ್ಶನಗೊಳ್ಳಲಿದೆ. ಚಂದ್ರಶೇಖರ ಕಂಬಾರರ ಕಾದಂಬರಿ ಆಧರಿಸಿದ ಈ ಸಂಗೀತ ನಾಟಕವನ್ನು ಬಿ.ಜಯಶ್ರೀ ಅವರು ನಿರ್ದೇಶಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ‘ಕಲಬುರಗಿ ಜಿಲ್ಲೆಯ ಜನತೆಯ ಸಾಂಸ್ಕೃತಿಕ ಅಭಿರುಚಿಯನ್ನು ಉದ್ದೀಪನಗೊಳಿಸುವ ಉದ್ದೇಶದಿಂದ ಕಲಬುರಗಿ ನೆಕ್ಸ್ಟ್ ಪ್ರತಿಷ್ಠಾನವು ಮೊದಲ ಬಾರಿಗೆ ಈ ನಾಟಕೋತ್ಸವ ಆಯೋಜಿಸಿದೆ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಿತ್ಯ ಸಂಜೆ 7 ಗಂಟೆಗೆ ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದೇ 22ರಿಂದ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಾಟಕ ಸಂವಾದ ಆಯೋಜಿಸಲಾಗಿದೆ. 22ರಂದು ‘ಕರ್ನಾಟಕದ ಕಂಪನಿ ನಾಟಕಗಳು–ಪರಂಪರೆ ಮತ್ತು ಪ್ರಸ್ತುತಿ’ ಕುರಿತು ಬಿ.ಜಯಶ್ರೀ ಅವರು ಸಂವಾದ ನಡೆಸಿಕೊಡಲಿದ್ದಾರೆ. ಫೆ 23ರಂದು ರಂಗಾಭಿನಯದ ಸೂಕ್ಷ್ಮಗಳು ಕುರಿತು ಎಚ್.ಕೆ.ಶ್ವೇತಾರಾಣಿ, ಫೆ 24ರಂದು ನಾಟಕ ಮತ್ತು ಜಾನಪದ ಕಲೆಗಳು ಕುರಿತು ಕೃಷ್ಣಮೂರ್ತಿ ಹನೂರು, ಫೆ 25ರಂದು ನಿರ್ದೇಶನದ ಟಿಪ್ಪಣಿಗಳ ಕುರಿತು ನಟರಾಜ್ ಹೊನ್ನಳ್ಳಿ, ಫೆ 26ರಂದು ಭಾರತದ ಅಭಿಜಾತ ರಂಗಭೂಮಿ ಕುರಿತು ಜಿ.ಶ್ರೀನಿವಾಸಮೂರ್ತಿ, ಫೆ 27ರಂದು ರಂಗಪಠ್ಯವನ್ನು ತಯಾರಿಸಿಕೊಳ್ಳುವುದರ ಕುರಿತು ಲಕ್ಷ್ಮಣ ಕೆ.ಪಿ. ಭಾಗವಹಿಸಲಿದ್ದಾರೆ’ ಎಂದರು.
ಕಲಬುರಗಿಯ ರಂಗಾಯಣ ಆವರಣದಲ್ಲಿ ಮಕ್ಕಳಿಗಾಗಿ ನಾಟಕಗಳನ್ನು ಆಯೋಜಿಸಲಾಗಿದೆ. ಫೆ 22, 23ರಂದು ಬೆಳಿಗ್ಗೆ 11ಕ್ಕೆ ಸರ್ಕಲ್ ಆಫ್ ಲೈಫ್ ಗೊಂಬೆ ಪ್ರದರ್ಶನ ನಡೆಯಲಿದೆ. 24, 25ರಂದು ಜಾಬ್‌ಲೆಸ್ ಜಾಬ್, 26, 27ರಂದು ಚಿಪ್ಪಿ, ದಿ ಚಿಪ್ಕಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.
ಕಲಬುರಗಿ ನಾಟಕೋತ್ಸವವನ್ನು ಇದೇ 21ರಂದು ಸಂಜೆ 5.30ಕ್ಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸಲಿದ್ದಾರೆ ಎಂದರು.
ನಾನು ಮತ್ತು ಶಂಕರ್ ಮುಂಬೈನಲ್ಲಿದ್ದಾಗ ಕ್ರಮವಾಗಿ 16, 18 ವರ್ಷದವರಿದ್ದಾಗಲೇ ನಾಟಕ ನೋಡಲು ಹೋಗುತ್ತಿದ್ದೆವು. ಅಂದಿನಿಂದಲೇ ನಾಟಕ ಆಸಕ್ತಿ ಬೆಳೆಯಿತು. ಜನರಲ್ಲಿ ಸದಭಿರುಚಿಯ ನಾಟಕ ಆಸಕ್ತಿ ಬೆಳೆಸಲು ಕಲಬುರಗಿ ನಾಟಕೋತ್ಸವ ಆಯೋಜನೆಯಾಗಿದೆಅರುಂಧತಿ ನಾಗ್ ರಂಗಶಂಕರ ಮುಖ್ಯಸ್ಥೆ
ನಾಟಕಗಳಿಗೆ ₹ 100 ಪ್ರವೇಶ ದರ
ಪ್ರತಿದಿನ ಸಂಜೆ 7ಕ್ಕೆ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯಲಿರುವ ನಾಟಕೋತ್ಸವದಲ್ಲಿ ಪ್ರದರ್ಶನವಾಗುವ ಪ್ರತಿ ನಾಟಕಗಳಿಗೆ ಒಬ್ಬರಿಗೆ ₹ 100 ಪ್ರವೇಶ ದರ ನಿಗದಿಪಡಿಸಲಾಗಿದೆ. ಟಿಕೆಟ್‌ಗಳನ್ನು ಬುಕ್ ಮೈ ಶೋ ಮೂಲಕ ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು ಅಥವಾ ಪಂಡಿತ ರಂಗಮಂದಿರದಲ್ಲಿ ತೆರೆದಿರುವ ಕೌಂಟರ್‌ನಲ್ಲಿಯೂ ಟಿಕೆಟ್ ಖರೀದಿಸಬಹುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ರಂಗಕರ್ಮಿ ಅರುಂಧತಿ ನಾಗ್ ತಿಳಿಸಿದರು.
ಕಲಾವಿದರು ತಿಂಗಳಾನುಗಟ್ಟಲೇ ತಾಲೀಮು ನಡೆಸಿ ದೂರದ ಊರುಗಳಿಂದ ಬಸ್ ಮಾಡಿಕೊಂಡು ನಾಟಕದ ಸಾಮಾನು ಸರಂಜಾಮು ಹೇರಿಕೊಂಡು ಬರುತ್ತಾರೆ. ಹೀಗಾಗಿ ಸಹೃದಯರಲ್ಲಿ ಹಣ ಕೊಟ್ಟು ನೋಡುವ ಸಂಸ್ಕೃತಿ ಬೆಳೆಯಬೇಕು ಎಂಬ ಉದ್ದೇಶದಿಂದ ಟಿಕೆಟ್ ದರ ನಿಗದಿಪಡಿಸಲಾಗಿದೆ. ಇದು ಆರಂಭವಷ್ಟೇ. ಪ್ರತಿ ವರ್ಷ ಇನ್ನಷ್ಟು ವಿಭಿನ್ನ ನಾಟಕಗಳನ್ನು ಕಲಬುರಗಿ ನಾಟಕೋತ್ಸವದಲ್ಲಿ ಪ್ರದರ್ಶಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.