ADVERTISEMENT

ಕಲಬುರಗಿ | ಮತ್ತೆ ಜಿಲ್ಲೆಯ ಏಳು ಪ್ರವಾಸಿ ತಾಣಗಳ ಸೇರ್ಪಡೆ: ಎಸ್.ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 8:01 IST
Last Updated 1 ಅಕ್ಟೋಬರ್ 2025, 8:01 IST
ಕಲಬುರಗಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಉದ್ಘಾಟಿಸಿದರು
ಕಲಬುರಗಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಉದ್ಘಾಟಿಸಿದರು   

ಕಲಬುರಗಿ: ‘ಜಿಲ್ಲೆಯಲ್ಲಿ ಈ ಹಿಂದೆ 30 ಪ್ರವಾಸಿ ತಾಣಗಳಿದ್ದವು. ರಾಜ್ಯ ಸರ್ಕಾರ ಕಳೆದ 15 ದಿನಗಳ ಹಿಂದೆ ಮತ್ತೆ 7 ಪ್ರವಾಸಿ ತಾಣಗಳನ್ನು ಸೇರ್ಪಡೆ ಮಾಡಿದೆ. ಅವು ಯಾವುವು ಎಂಬ ಮಾಹಿತಿ ಶೀಘ್ರದಲ್ಲಿ ಪ್ರಕಟಿಸಲಾಗುವುದು. ಒಟ್ಟು 37 ಪ್ರವಾಸಿ ತಾಣಗಳ ಪರಿಚಯ ಪತ್ರಗಳನ್ನು ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಸಿದ್ಧಪಡಿಸಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಎಸ್. ತಿಪ್ಪೇಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಸಹಯೋಗದೊಂದಿಗೆ ನಗರದ ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ‘ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ’ ಸಂದೇಶದಡಿ ವಿಶೇಷ ಉಪನ್ಯಾಸ ನೀಡಿದರು.

‘ಪ್ರವಾಸೋದ್ಯಮ ಅಭಿವೃದ್ಧಿಯ ಹೊಸ ಸಮಿತಿ ರಚನೆ ಮಾಡಿದ ಮೇಲೆ ಅನೇಕ ಗಣ್ಯರೊಂದಿಗೆ ಪ್ರವಾಸಿ ತಾಣಗಳ ಸಾಧಕ–ಬಾಧಕಗಳನ್ನು ಚರ್ಚಿಸಲಾಗಿದೆ. ನನ್ನ ಪ್ರಕಾರ ಇನ್ನೂ 60ಕ್ಕೂ ಹೆಚ್ಚು ಪ್ರವಾಸಿ ತಾಣಗಳು ಸೇರ್ಪಡೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು.

ADVERTISEMENT

‘ಭಾರತೀಯ ಪುರಾತತ್ವ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರತಿನಿಧಿಗಳಾದರೂ ಕಾರ್ಯಕ್ರಮಕ್ಕೆ ಬರದಿರುವುದು ಬೇಸರದ ಸಂಗತಿ. ಆದರೂ ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಬರವಣಿಗೆ ಮೂಲಕ ಕೇಳಿ, ಪ್ರಸ್ತಾವಗಳನ್ನು ತರಿಸಿಕೊಳ್ಳಲಾಗುವುದು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿ, ಈ ಭಾಗದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹ ಮಾದರಿ ಕಟ್ಟಡ ಕಲಬುರಗಿಯಲ್ಲಿ ನಿರ್ಮಿಸಲು ಕೆಕೆಆರ್‌ಡಿಬಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಕಾರ್ಯಕ್ರಮ ಉದ್ಘಾಟಿಸಿ, ‘ನಮ್ಮ ಮಕ್ಕಳು ಕೇವಲ ಹಂಪಿ, ಮೈಸೂರು, ಬೇಲೂರು, ಹಳೇಬೀಡು ಅಷ್ಟೇ ಪ್ರವಾಸಿ ತಾಣಗಳೆಂದು ತಿಳಿದುಕೊಂಡಿದ್ದಾರೆ. ಕಾಳಗಿ, ಚಿಂಚೋಳಿ, ಮಳಖೇಡ, ಸೇಡಂ, ಅಫಜಲಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಐತಿಹಾಸಿಕ ಪ್ರವಾಸಿ ತಾಣಗಳಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸಂಪದ್ಭರಿತ ಮತ್ತು ಭವ್ಯ ಇತಿಹಾಸ ಹೊಂದಿದ ಈ ನೆಲದ ಪರಂಪರೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು’ ಎಂದರು.

ರಾಷ್ಟ್ರೀಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಹ್ಮದ್‌ ಅಯಾಜುದ್ದೀನ್‌ ಪಟೇಲ್‌ ಮಾತನಾಡಿ, ‘ಬಹಮನಿ ಕೋಟೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕೀ ಬಾತ್‌ನಲ್ಲಿ ಪಸ್ತಾಪಿಸಿದ್ದಾರೆ. ಈ ಕೋಟೆಯಲ್ಲಿ 29 ಅಡಿ ಉದ್ದದ ಜಗತ್ತಿನ ಅತಿ ದೊಡ್ಡ ಬಾರಾ ಗಾಜಿ ತೋಪು ಇದೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಲು ಬಹಮನಿ ಕೋಟೆ ಮತ್ತು ಸಾಥ್‌ ಗುಂಬಜ್‌ 2014ರಿಂದ ಕಾಯುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಬೇಬಿ ಮೊಗೇರ ಅಧ್ಯಕ್ಷತೆ ವಹಿಸಿದ್ದರು. ವಿಜನ್ ಪ್ಲೈ ತರಬೇತಿ ಸಂಸ್ಥೆಯ ವಾದಿರಾಜ ಮಾತನಾಡಿದರು.

ಪ್ರಮುಖರಾದ ರೆಹಮಾನ್‌ ಸಿದ್ದಿಕಿ, ಸಾಮ್ಯುವೆಲ್‌ ಸಂಧ್ಯಾರಾಜ್‌, ಧರ್ಮಣ್ಣ ಧನ್ನಿ ಉಪಸ್ಥಿತರಿದ್ದರು. ಲಿಂಗಮೂರ್ತಿ ಸ್ವಾಗತಿಸಿದರು. ಸಂದೀಪ್‌ ಸಿಂಗ್‌ ನಿರೂಪಿಸಿದರು.

5 ಜನ ಮಹಿಳೆಯರು ಸೇರಿ 17 ಪ್ರವಾಸಿ ಮಾರ್ಗದರ್ಶಿಗಳಿಗೆ ಇಲಾಖೆಯಿಂದ ತರಬೇತಿ ನೀಡಲಾಗಿದೆ. ಅವರು ಗುರುತಿನ ಚೀಟಿಯೊಂದಿಗೆ ಪ್ರವಾಸಿ ತಾಣಗಳಲ್ಲಿದ್ದು ಉಚಿತವಾಗಿ ಗೈಡ್‌ ಮಾಡಬೇಕು
ಎಸ್.ತಿಪ್ಪೇಸ್ವಾಮಿ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ಪ್ರವಾಸಿ ತಾಣಗಳ ಛಾಯಾಚಿತ್ರ ಪ್ರದರ್ಶನ
ಮಹ್ಮದ್‌ ಅಯಾಜುದ್ದೀನ್‌ ಪಟೇಲ್‌ ಚಂದ್ರಶೇಖರ್‌ ಬ್ಯಾಕೋಡ್‌ ಮಲ್ಲಿನಾಥ ಚನ್ನಪ್ಪಗೋಳ್‌ ರಾಘವೇಂದ್ರ ಬುರ್ಲಿ ನಾಗೇಂದ್ರ ಸಕ್ಕರಗಿ ಮುಜಿಬ್‌ ಅಲಿ ಖಾನ್‌ ನಾರಾಯಣ ಎಂ.ಜೋಶಿ ಶಾಹೇದ್‌ ಪಾಷಾ ಖಾಜಾ ಪಟೇಲ್‌ ಶಿವಶರಣ ಡೊಣ್ಣೂರಕರ್‌ ಬಸವರಾಜ ಸಿ.ತೋಟದ್‌ ಶ್ರೀನಿವಾಸ ಅಕ್ಷಯ ಎಸ್‌.ಪೂಜಾರಿ ಶರಿಯಾರ್‌ ಉಸ್ತಾದ್‌ ಶರಣಬಸವ ಆದರ್ಶ ಅವರು ಜಿಲ್ಲೆಯ ಪ್ರವಾಸಿ ತಾಣಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.