ಪೊಲೀಸ್
(ಸಾಂದರ್ಭಿಕ ಚಿತ್ರ)
ಕಲಬುರಗಿ: ದಾಲ್ ಮಿಲ್ ಮಾಲೀಕರಿಂದ ತೊಗರಿ ಬೇಳೆ ಖರೀದಿಸಿ ಹಣ ಕೊಡದೆ ವಂಚಿಸಿದ ಆರೋಪದಡಿ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಪವನ್ ಪ್ರೋಟಿನ್ಸ್ ದಾಲ್‌ಮಿಲ್ ಮಾಲೀಕ ಗಿರೀಶ್ ದಾಮೋದರ್ ಗಿಲ್ಡಾ ಅವರು ನೀಡಿದ ದೂರಿನ ಅನ್ವಯ ಪ್ರಕಾಶ ಹೆಡ್ಡಾ ವಿರುದ್ಧ ಬಿಎನ್ಎಸ್ ಸೆಕ್ಷನ್ 316(2), 318(4) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಿರೀಶ್ ಅವರಿಗೆ ಪರಿಚಯಸ್ಥರಾಗಿದ್ದ ಪ್ರಕಾಶ ಹೈದರಾಬಾದ್‌ನ ಸಗಟು ವ್ಯಾಪಾರಿಯಾದ ಸತೀಶ ಕುಮಾರ್ ಬಾಹಿತಿ ಅವರಿಗೆ ತೊಗರಿ ಬೇಳೆ ಮಾರುವಂತೆ ಹಲವು ಬಾರಿ ಕೋರಿದ್ದರು. ಅವರ ಮಾತು ನಂಬಿದ ಗಿರೀಶ್ ಹಂತ– ಹಂತವಾಗಿ ₹ 32.38 ಲಕ್ಷ ಮೌಲ್ಯದ 210 ಕ್ವಿಂಟಲ್ ತೊಗರಿ ಬೇಳೆಯನ್ನು ಕಳುಹಿಸಿದ್ದರು. ಈ ಪೈಕಿ ₹ 4.50 ಲಕ್ಷ ಮಾತ್ರ ಪಾವತಿಸಿದ್ದರು. ಉಳಿದ ಹಣವನ್ನು ಕೊಡದೆ ಸತಾಯಿಸುತ್ತಿದ್ದರು. ಹೈದರಾಬಾದ್‌ಗೆ ತೆರಳಿ ಸತೀಶ ವಿಚಾರಿಸಿದಾಗ, ಪ್ರಕಾಶ ಅವರು ಸತೀಶ್ ಹೆಸರಿನಲ್ಲಿ ತಾವೇ ಬೇಳೆಯನ್ನು ಪಡೆದು, ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ತೊಗರಿ ಬೇಳೆಯ ₹ 27.87 ಲಕ್ಷ ಕೊಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
5 ಕ್ವಿಂಟಲ್ ಪಡಿತರ ಜಪ್ತಿ
ನಗರದ ಸಂತ್ರಾಸವಾಡಿಯ ಖಬರಸ್ಥಾನ ಕಾಂಪೌಂಡ್ ಸಮೀಪದ ಮನೆಯೊಂದರಲ್ಲಿ ಅಕ್ರಮವಾಗಿ ಇರಿಸಿದ್ದ 5 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಎಂ.ಬಿ.ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಯಲ್ಲಾಲಿಂಗ ಹಾಗೂ ಸಿಬ್ಬಂದಿ ದಾಳಿ ನಡೆಸಿ ₹ 17,500 ಮೌಲ್ಯದ 5 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿದ್ದಾರೆ. ದಾಳಿ ವೇಳೆ ಮನೆ ಮಾಲೀಕ ಮಹಮದ್ ಅಯ್ಯೂಬ್ ಪರಾರಿಯಾಗಿದ್ದಾನೆ.
ದಾಳಿಯಲ್ಲಿ ಆಹಾರ ಇಲಾಖೆ ಸಿಬ್ಬಂದಿ ಶಿವುಕುಮಾರ ಪೂಜಾರಿ, ಪೊಲೀಸ್ ಸಿಬ್ಬಂದಿ ಸಂತೋಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.