ADVERTISEMENT

ಕಲಬುರಗಿ | ‘ಶಕ್ತಿ’ ಯೋಜನೆಗೆ ಎರಡು ವರ್ಷ: ಕೆಕೆಆರ್‌ಟಿಸಿಗೆ ₹ 2,375 ಕೋಟಿ ಆದಾಯ

ಮಲ್ಲಿಕಾರ್ಜುನ ನಾಲವಾರ
Published 23 ಜೂನ್ 2025, 6:27 IST
Last Updated 23 ಜೂನ್ 2025, 6:27 IST
ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್ ಹತ್ತುವಲ್ಲಿ ನಿರತವಾಗಿದ್ದ ಪ್ರಯಾಣಿಕರು (ಸಂಗ್ರಹ ಚಿತ್ರ)
ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್ ಹತ್ತುವಲ್ಲಿ ನಿರತವಾಗಿದ್ದ ಪ್ರಯಾಣಿಕರು (ಸಂಗ್ರಹ ಚಿತ್ರ)   

ಕಲಬುರಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಯಾಗಿ ಎರಡು ವರ್ಷಗಳು ಪೂರೈಸಿವೆ. ಈ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ವ್ಯಾಪ್ತಿಯಲ್ಲಿ ಮಹಿಳೆಯರು 67.91 ಕೋಟಿ ಬಾರಿ ಪ್ರಯಾಣ ಮಾಡಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿದಂತೆ 2023ರ ಜೂನ್‌ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದಿತ್ತು. ಅಂದಿನಿಂದ 2025ರ ಮೇ 31ರವರೆಗೆ ಮಹಿಳೆಯರು 67.91 ಕೋಟಿ ಬಾರಿ ಪ್ರಯಾಣಿಸಿದ್ದಾರೆ. ಅದರ ಟಿಕೆಟ್ ಮೊತ್ತ ₹ 2,375.54 ಕೋಟಿಯಾಗಿದೆ.

ಇದರಲ್ಲಿ ರಾಜ್ಯ ಸರ್ಕಾರವು ₹1,800 ಕೋಟಿಯಷ್ಟು ಪಾವತಿ ಮಾಡಿದ್ದು, ₹ 575 ಕೋಟಿಯಷ್ಟು ಟಿಕೆಟ್ ಹಣವನ್ನು ಬಾಕಿ ಉಳಿಸಿಕೊಂಡಿದೆ.

ADVERTISEMENT

‘ಶಕ್ತಿ’ ಯೋಜನೆಗೂ ಮುನ್ನ 4,028 ಶೆಡ್ಯೂಲ್‌ಗಳು ಇದ್ದವು. ನಂತರ 661 ಶೆಡ್ಯೂಲ್‌ಗಳು ಹೆಚ್ಚಳವಾಗಿ 4,689ಕ್ಕೆ ಏರಿಕೆಯಾಗಿದೆ. 22,214 ಟ್ರಿಪ್‌ಗಳಿಗೆ 5,314 ಟ್ರಿಪ್‌ಗಳು ಸೇರಿ ಒಟ್ಟು 27,528ಕ್ಕೆ ತಲುಪಿದೆ. ನಿತ್ಯ ಮಹಿಳೆಯರು 9.42 ಲಕ್ಷ ಬಾರಿ ಪ್ರಯಾಣಿಸುತ್ತಿದ್ದಾರೆ. 16 ಲಕ್ಷ ಕಿ.ಮೀ.ನಷ್ಟು ಸಂಚಾರ ಜಾಲ ವಿಸ್ತರಿಸಿಕೊಂಡಿದ್ದು, ಪ್ರಯಾಣಿಕರ ಸಂಖ್ಯೆಯಲ್ಲೂ ಏಕೆಯಾಗಿದೆ.

ಕಲಬುರಗಿ, ವಿಜಯಪುರದಲ್ಲಿ ಅತಿಹೆಚ್ಚು ಪ್ರಯಾಣ: ಕೆಕೆಆರ್‌ಟಿಸಿ ವ್ಯಾಪ್ತಿಯಲ್ಲಿ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ವಿಜಯಪುರ ಜಿಲ್ಲೆಗಳು ಬರುತ್ತವೆ. ಇವುಗಳಲ್ಲಿ ಕಲಬುರಗಿ ಮತ್ತು ವಿಜಯಪುರದಲ್ಲಿ ಅತ್ಯಧಿಕ ಕ್ರಮವಾಗಿ 13.55 ಹಾಗೂ 13.09 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ್ದಾರೆ. ಯಾದಗಿರಿಯಲ್ಲಿ 4.95 ಕೋಟಿ ಹಾಗೂ ಬಳ್ಳಾರಿಯಲ್ಲಿ 4.94 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ್ದಾರೆ ಎಂಬುದು ಕೆಕೆಆರ್‌ಟಿಸಿ ನೀಡಿದ ಅಂಕಿ–ಅಂಶಗಳಿಂದ ಗೊತ್ತಾಗಿದೆ.

ಎಂ. ರಾಚಪ್ಪ

Highlights - ಸರ್ಕಾರದಿಂದ ₹ 575 ಕೋಟಿಯಷ್ಟು ಟಿಕೆಟ್ ಹಣ ಬಾಕಿ ಶೆಡ್ಯೂಲ್‌, ಟ್ರಿಪ್‌ಗಳ ಸಂಖ್ಯೆಯಲ್ಲಿ ಏರಿಕೆ ನಿತ್ಯ ಮಹಿಳೆಯರಿಂದ 9.42 ಲಕ್ಷ ಬಾರಿ ಪ್ರಯಾಣ

Cut-off box - ‘ಹೆಚ್ಚಿದ ಟ್ರಿಪ್‌ನಿಂದ ನಿರ್ವಾಹಕರ ಕೊರತೆ’ ‘ಶಕ್ತಿ ಯೋಜನೆಯಿಂದಾಗಿ 22214 ಟ್ರಿಪ್‌ಗಳಿಂದ 27528ಕ್ಕೆ ಏರಿಕೆಯಾಗಿದೆ. ಈಚೆಗೆ ನೇಮಿಸಿಕೊಂಡಿದ್ದ 600 ಚಾಲಕ ಕಂ ನಿರ್ವಾಹಕರ ಪೈಕಿ 500 ಮಂದಿಯನ್ನು ನಿರ್ವಾಹಕರ ಹುದ್ದೆಗೆ ನಿಯೋಜನೆ ಮಾಡಿದ್ದರೂ ನಿರ್ವಾಹಕರ ಕೊರತೆ ಕಾಡುತ್ತಿದೆ’ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಕ್ತಿ ಯೋಜನೆಯು ಸಂಸ್ಥೆಗೆ ವರವಾಗಿ ಪ್ರಯಾಣಿಕರಿಗೂ ಅನುಕೂಲ ಆಗುತ್ತಿದೆ. ಆರ್ಥಿಕ ಸದೃಢತೆಯು ಸಾಧಿಸುತ್ತಿದೆ. ಹೊಸದಾಗಿ ಬಸ್‌ಗಳು ಸೇರ್ಪಡೆಯೂ ಆಗುತ್ತಿವೆ. ಸರ್ಕಾರ ಇನ್ನಷ್ಟು ನಿರ್ವಾಹಕರನ್ನು ನೇಮಕ ಮಾಡಿಕೊಟ್ಟರೆ ಸೇವೆಯನ್ನು ಇನ್ನಷ್ಟು ವಿಸ್ತರಣೆ ಮಾಡಬಹುದು’ ಎಂದರು.

Cut-off box - ಕೆಕೆಆರ್‌ಟಿಸಿಯ ಜಿಲ್ಲಾವಾರು ಪ್ರಯಾಣ ವಿವರ (ಕೋಟಿಗಳಲ್ಲಿ) ಜಿಲ್ಲೆಗಳು;ಪ್ರಯಾಣ; ಟಿಕೆಟ್‌ ಮೊತ್ತ (₹) ಕಲಬುರಗಿ;13.55;458.95 ಯಾದಗಿರಿ;4.95;183.73 ಬೀದರ್;8.19;236.86 ರಾಯಚೂರು;841.88;329.92 ಕೊಪ್ಪಳ;7.78;277.98 ಬಳ್ಳಾರಿ;4.94;189.65 ವಿಜಯನಗರ;6.96;268.39 ವಿಜಯಪುರ;13.09;427.02 ಒಟ್ಟು;67.91;2372.54

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.