
ಕಲಬುರಗಿ: ‘ಕಡಿಮೆ ದರದಲ್ಲಿ ಉನ್ನತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಯುನೈಟೆಡ್ ಆಸ್ಪತ್ರೆ ಮಹತ್ತರ ಪಾತ್ರ ವಹಿಸಿದೆ. ಕಲಬುರಗಿಯನ್ನು ಪ್ರಾದೇಶಿಕ ಆರೋಗ್ಯ ಹಬ್ ಆಗಿ ರೂಪಿಸುವಲ್ಲಿ ಆಸ್ಪತ್ರೆಯ ಕೊಡುಗೆ ಮಹತ್ವವಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಹೇಳಿದರು.
ನಗರದ ಯುನೈಟೆಡ್ ಆಸ್ಪತ್ರೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಆಸ್ಪತ್ರೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಮೆಗಾ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದಶಕದ ಹಿಂದೆ ಗಂಭೀರ ಚಿಕಿತ್ಸೆಗಾಗಿ ಜನರು ಕಲಬುರಗಿಯಿಂದ ಬೇರೆ ನಗರಗಳಿಗೆ ಹೋಗುತ್ತಿದ್ದರು. ಈಗ ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ಯುನೈಟೆಡ್ ಆಸ್ಪತ್ರೆಯಲ್ಲಿಯೇ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಹಾಗೂ ತೀವ್ರ ನಿಗಾ ಸೇವೆಗಳು ಲಭ್ಯವಿರುವುದರಿಂದ ಜನ ಬೇರೆಡೆ ಹೋಗುವುದು ತಪ್ಪಿದೆ’ ಎಂದರು.
‘ಕಳೆದ 14 ವರ್ಷಗಳಲ್ಲಿ ಸುಮಾರು 40,000 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿರುವುದು ಆಸ್ಪತ್ರೆಯ ಮೇಲೆ ಜನ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಆಸ್ಪತ್ರೆ ಇನ್ನಷ್ಟು ಸೇವೆಗಳೊಂದಿಗೆ ಮತ್ತಷ್ಟು ಹೆಸರು ಮಾಡಲಿ’ ಎಂದು ಆಶಿಸಿದರು.
‘ವೈದ್ಯರು ರೋಗಗಳ ವಿರುದ್ಧ ಹೋರಾಡಿ ಜೀವಗಳನ್ನು ಉಳಿಸಿದರೆ, ಪೊಲೀಸರು ಅಪರಾಧಗಳ ವಿರುದ್ಧ ಹೋರಾಡಿ ಸಮಾಜವನ್ನು ರಕ್ಷಿಸುತ್ತೇವೆ. ಎರಡೂ ವೃತ್ತಿಗಳು ಆರೋಗ್ಯಕರ ಹಾಗೂ ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಅಗತ್ಯವಾದವು’ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ‘ಯುನೈಟೆಡ್ ಆಸ್ಪತ್ರೆಯು ಆರೋಗ್ಯ ಸೇವೆ ಜೊತೆಗೆ ರಸ್ತೆ ಸುರಕ್ಷತೆ ಜಾಗೃತಿ, ಪ್ರಥಮ ಚಿಕಿತ್ಸೆ ಕಿಟ್ ಮತ್ತು ಹೆಲ್ಮೆಟ್‌ಗಳನ್ನು ವಿತರಿಸುವುದು ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಪೊಲೀಸ್ ಸಿಬ್ಬಂದಿಗೂ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ’ ಎಂದರು.
ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ ಸಿದ್ದಾರೆಡ್ಡಿ ಮಾತನಾಡಿ, ‘20 ಹಾಸಿಗೆಗಳ ಸಣ್ಣ ಆಸ್ಪತ್ರೆಯಿಂದ ಆರಂಭವಾದ ಈ ಸಂಸ್ಥೆ ಇಂದು ಕಲ್ಯಾಣ ಕರ್ನಾಟಕದ ಪ್ರಮುಖ ಬಹುವಿಶೇಷತೆಗಳ ಆಸ್ಪತ್ರೆಯಾಗಿ ಬೆಳೆದಿದೆ. 14 ವರ್ಷಗಳ ಹಿಂದೆ ಹಿರಿಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಆ ಸಮಯ ಜಿಲ್ಲೆಯಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳ ಕೊರತೆಯ ಬಗ್ಗೆ ಪ್ರಸ್ತಾಪಿಸಿ, ಯುನೈಟೆಡ್ ಆಸ್ಪತ್ರೆಯನ್ನು ಗುಣಮಟ್ಟದ ಚಿಕಿತ್ಸೆಗಳನ್ನು ಅಗ್ಗದ ದರದಲ್ಲಿ ಒದಗಿಸುವಂತೆ ಸೂಚಿಸಿದ್ದರು. ಕೆಲವೇ ವರ್ಷಗಳಲ್ಲಿ ನಾವು ಆ ಗುರಿಯನ್ನು ಸಾಧಿಸಿದ್ದೇವೆ. ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಯಿಂದ ನಾವು ಜನರ ನಂಬಿಕೆ ಗಳಿಸಿದ್ದೇವೆ’ ಎಂದು ಹೇಳಿದರು.
ಉತ್ಕೃಷ್ಟ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುತ್ತಿರುವ ಹೆಮ್ಮೆ ಇದೆ. ಎಲ್ಲರೂ ಆರೋಗ್ಯ ಕಾಳಜಿ ವಹಿಸಲಿ ಎಂಬ ಆಶಯದೊಂದಿಗೆ ಮೆಗಾ ಆರೋಗ್ಯ ಶಿಬಿರ ಹಮ್ಮಿಕೊಳ್ಳುತ್ತಿದ್ದೇವೆ’ ಎಂದರು.
ಆಸ್ಪತ್ರೆಯ ಹಿರಿಯ ನೇತ್ರ ತಜ್ಞೆ ಹಾಗೂ ನಿರ್ದೇಶಕಿ ಡಾ.ವೀಣಾ ಸಿದ್ದಾರೆಡ್ಡಿ, ತಜ್ಞರಾದ ಡಾ.ರಾಜು ಕುಲಕರ್ಣಿ, ಡಾ.ನಿಶಾಂತ ಜಾಜಿ, ಡಾ.ಮೊಹಮ್ಮದ್ ಅಬ್ದುಲ್ ಬಷೀರ್, ಡಾ.ಅನಿಲ್ ಪಾಟೀಲ, ಡಾ.ವೀರೇಶ ಸಲಗಾರ, ಡಾ.ರಾಜು ಕುಲಕರ್ಣಿ, ಡಾ.ದಯಾನಂದ ರೆಡ್ಡಿ, ಡಾ.ವಹೀದ್ ಅಲಿ, ಡಾ.ಪ್ರಶಾಂತ ಕುಲಕರ್ಣಿ, ಡಾ.ವಿನಯಸಾಗರ ಶರ್ಮಾ, ಸೇರಿದಂತೆ ಅನೇಕರಿದ್ದರು.
2200 ಜನರ ತಪಾಸಣೆ
ಇಡೀ ದಿನ ನಡೆದ ಮೆಗಾ ಆರೋಗ್ಯ ಶಿಬಿರದಲ್ಲಿ 2200ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಕೊಂಡರು. ತಜ್ಞ ವೈದ್ಯರು ಮತ್ತು ವಿಶೇಷತಜ್ಞರು ಜನರ ಆರೋಗ್ಯ ತಪಾಸಣೆ ಮಾಡಿದರು. ಆಸ್ಪತ್ರೆ ನೀಡಿದ ಮಾಹಿತಿಯಂತೆ ಎಂಆರ್‌ಐ ಸಿಟಿ ಸ್ಕ್ಯಾನ್ 2ಡಿ ಎಕೊ ಇಸಿಜಿ ಯುಎಸ್‌ಜಿ ಎಕ್ಸ್‌ರೇ ಹಾಗೂ ರಕ್ತ ಪರೀಕ್ಷೆ ಸೇರಿದಂತೆ ವಿವಿಧ ತನಿಖೆಗಳನ್ನು ಉಚಿತವಾಗಿ ಮಾಡಿಲಾಯಿತು. ಶಿಬಿರದಲ್ಲಿ ವೈದ್ಯರು ಸೂಚಿಸಿದ ಔಷಧಗಳನ್ನು ಸಹ ಉಚಿತವಾಗಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.