ಅಫಜಲಪುರ: ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿ ಗ್ರಾಮ ಮಾಶಾಳಕ್ಕೆ ₹19 ಲಕ್ಷದಂತೆ ಶುದ್ಧ ಕುಡಿಯುವ ನೀರಿನ 4 ಘಟಕವನ್ನು ಮಂಜೂರು ಮಾಡಲಾಗಿತ್ತು. ಹಿರಿಯಾಳ ಬ್ಯಾರೇಜ್ ಮತ್ತು ಉಡಚಾಣ ಗ್ರಾಮದಿಂದ ಸುಮಾರು ₹7 ಕೋಟಿ ವೆಚ್ಚದಲ್ಲಿ ಮಾಶಾಳ ಗ್ರಾಮಕ್ಕೆ ಕುಡಿಯುವ ನೀರಿನ ಕಾಮಗಾರಿ ಮಾಡಲಾಗಿತ್ತು. ಈ ಎಡರಡೂ ಯೋಜನೆಗಳು ನಿರ್ವಹಣೆ ಇಲ್ಲದೆ ಹಾಳಾಗಿ ಹೋಗಿವೆ.
ಭಾನುವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಯ ಇಲಾಖೆಯ ಉಪ ವಿಭಾಗದ ವತಿಯಿಂದ ನಡೆಯುವ ₹4 ಕೋಟಿ ವೆಚ್ಚದ ಜೆಜೆಎಂ ಕಾಮಗಾರಿಗೆ ಶಾಸಕ ಎಂ.ವೈ.ಪಾಟೀಲ ಅಡಿಗಲ್ಲು ನೆರವೇರಿಸಲಿದ್ದಾರೆ.
ಮಾಶಾಳ ಗ್ರಾಮದ ಬಾಳು ತಾಂಡಾ, ಮಾಶಾಳ ವಾಡಿ ಪರಿಶಿಷ್ಟ ಓಣಿಯಲ್ಲಿ ಮತ್ತು ಪರಿಶಿಷ್ಟ ದೇವಸ್ಥಾನದ ಹತ್ತಿರ 4 ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಾಗಿದೆ. ಇದರಲ್ಲಿ ಬಸವೇಶ್ವರ ದೇವಸ್ಥಾನದ ಹತ್ತಿರದ ಘಟಕಗಳ ಯಂತ್ರಗಳು ಕಳುವಾಗಿವೆ, ವಿವಿಧ ಯೋಜನೆಯಡಿಯಲ್ಲಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ಪ್ಲೊರೈಡ್ ಅಂಶ ಇರುವದರಿಂದ ಜನರಿಗೆ ಕಿಡ್ನಿ ಸಮಸ್ಯೆ, ಮೊಳಕಾಲು ಸಮಸ್ಯೆ ಬರುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
‘ಶುದ್ಧ ಕುಡಿಯುವ ನೀರಿನ ಘಟಕಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ಮಾಡಿ ಜನರಿಗೆ ಉಪಯೋಗವಾಗುವಂತೆ ಮಾಡಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಗಿರೀಶ ತಿಳಿಸಿದರು.
‘ಜನಪ್ರತಿನಿಧಿಗಳು ಅನುದಾನ ನೀಡಿದ ಮೇಲೆ ಅದು ಯಾವ ರೀತಿ ಬಳಕೆಯಾಗಿದೆ ಎಂಬುದನ್ನು ನೋಡಬೇಕು. ಅಂದಾಗ ಮಾತ್ರ ಯೋಜನೆ ಫಲಕಾರಿಯಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು.
ಕೆಡಿಪಿ ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಮಾಡುವಂತೆ ಸೂಚಿಸಲಾಗಿದೆ. ಮತ್ತೊಮ್ಮೆ ಸಭೆ ಕರೆದಾಗ ವಿಚಾರಣೆ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು
-ಎಂ.ವೈ.ಪಾಟೀಲ ಶಾಸಕ
ಮಳೆಗಾಲ ಆರಂಭವಾಗಿದೆ ಜನರಿಗೆ ನೀರಿನಿಂದ ಹೆಚ್ಚಿನ ಕಾಯಿಲೆಗಳು ಬರುತ್ತವೆ. ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕು
-ಶಿವು ಪ್ಯಾಟಿ ಮಾಶಾಳ ಗ್ರಾ.ಪಂ ಸದಸ್ಯ
ಈಗಾಗಲೇ ಮಾಶಾಳ ಗ್ರಾಮದಲ್ಲಿ ನಿರ್ವಹಣೆ ಮತ್ತು ಜಲಮೂಲ ಸಮಸ್ಯೆಯಿಂದ ಕುಡಿಯುವ ನೀರಿನ ಯೋಜನೆಗಳು ಹಾಳಾಗಿವೆ. ಮತ್ತೆ ಜೆಜೆಎಂ ಕಾಮಗಾರಿಗೆ ಅಡಿಗಲ್ಲು ಹಾಕುತ್ತಿರುವುದು ಸ್ವಾಗತ. ಆದರೆ ಅದಕ್ಕೆ ಜಲಮೂಲ ವ್ಯವಸ್ಥೆ ಮಾಡಬೇಕು
- ಸುರೇಶ ಸಿಂಗೆ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.