ಕಾಳಗಿ: ಇಲ್ಲಿನ ಪಟ್ಟಣ ಪಂಚಾಯಿತಿಯ ಮೊದಲ ಸಾರ್ವತ್ರಿಕ ಚುನಾವಣೆ ಭಾನುವಾರ ಶಾಂತಿಯುತವಾಗಿ ಜರುಗಿತು.
ಮತದಾರರು ಬೆಳಿಗ್ಗೆ 7ರಿಂದಲೇ ಹುರುಪಿನಿಂದ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಗುರುತಿನ ಚೀಟಿ ತೋರಿಸಿ ಇವಿಎಂ ಯಂತ್ರದಲ್ಲಿ ಹಕ್ಕು ಚಲಾಯಿಸಿದರು.
ಒಟ್ಟು 11 ವಾರ್ಡ್‌ಗಳ 8,455 ಮತದಾರರ ಪೈಕಿ 3,411 ಪುರುಷ ಹಾಗೂ 3,333 ಮಹಿಳೆ ಹೀಗೆ ಒಟ್ಟ 6,744 ಮತದಾರರು (ಶೇ.79.76) ಮತದಾನ ಮಾಡಿದ್ದಾರೆ’ ಎಂದು ಚುನಾವಣಾಧಿಕಾರಿ ಬಸಲಿಂಗಪ್ಪ ಡಿಗ್ಗಿ ತಿಳಿಸಿದ್ದಾರೆ.
ಮತದಾನದ ವಿವರ: ವಾರ್ಡ್ ನಂ.1ರಲ್ಲಿ 959 ಮತದಾರರ ಪೈಕಿ 766 ಮತ ಚಲಾವಣೆಯಾಗಿದೆ. ವಾರ್ಡ್ ನಂ.2ರಲ್ಲಿ 661ರ ಪೈಕಿ 527, ವಾರ್ಡ್ ನಂ.3ರಲ್ಲಿ 573ರ ಪೈಕಿ 413, ವಾರ್ಡ್ ನಂ.4ರ 712ರ ಪೈಕಿ 525, ವಾರ್ಡ್ ನಂ.5ರಲ್ಲಿ 676ರ ಪೈಕಿ 563, ವಾರ್ಡ್ ನಂ.6ರಲ್ಲಿ 849ರ ಪೈಕಿ 607, ವಾರ್ಡ್ ನಂ.903ರಲ್ಲಿ ಪೈಕಿ 726, ವಾರ್ಡ್ ನಂ.8ರ 785ರಲ್ಲಿ ಪೈಕಿ 621, ವಾರ್ಡ್ ನಂ.9ರ 580ರ ಪೈಕಿ 516, ವಾರ್ಡ್ ನಂ.10ರಲ್ಲಿ 630ರ ಪೈಕಿ 541 ಮತ್ತು ವಾರ್ಡ್ ನಂ.11ರಲ್ಲಿ 1127ರ ಪೈಕಿ 939 ಮತ ಚಲಾವಣೆ ಆಗಿದೆ.
ಸಮಯ ಮುಕ್ತಾಯ ನಂತರ ಮತಗಟ್ಟೆ ಸಿಬ್ಬಂದಿ ಇವಿಎಂ ಮತ ಯಂತ್ರಗಳನ್ನು ಜೀಪ್‌ನಲ್ಲಿ ಇರಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭದ್ರತಾ ಕೊಠಡಿಗೆ ತೆರಳಿ ಸಂಗ್ರಹಿಸಿಟ್ಟರು.
ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ್, ಸೇಡಂ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಚುನಾವಣಾಧಿಕಾರಿ ಬಸಲಿಂಗಪ್ಪ ಡಿಗ್ಗಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಂಕಜಾ ಎ. ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮತಕೇಂದ್ರಗಳ ಸುತ್ತ ಹಾಗೂ ಬಸ್ ನಿಲ್ದಾಣ, ಬಜಾರ್, ಅಂಬೇಡ್ಕರ್ ವೃತ್ತ ಎಲ್ಲೆಡೆ ಪೊಲೀಸರು ಕಂಡುಬಂದರು. ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ ಇದ್ದರು.
ಊಟ ಸಿಗದೆ ಪರದಾಡಿದ ಸಿಬ್ಬಂದಿ:
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಊಟ ಸಿಗದೆ ಶಿಕ್ಷಕರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಪರದಾಡಿದ ಪ್ರಸಂಗ ಸರ್ಕಾರಿ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆಯ ಆರು ಮತಕೇಂದ್ರಗಳಲ್ಲಿ ಕಂಡುಬಂತು.
ರಾತ್ರಿವೇಳೆ ಸಾಂಬರ್ ಇಲ್ಲದೆ ಅನ್ನ ಮಾತ್ರ ಕೊಡಲಾಗಿತ್ತು. ಬೆಳಿಗ್ಗೆ ಉಪ್ಪಿಟ್ಟು, ಚಹಾ ಕೊಟ್ಟವರು ಮಧ್ಯಾಹ್ನ 3ರವರೆಗೂ ಊಟ ಕೊಡದಿದ್ದಕ್ಕೆ ಹಸಿವು ತಾಳದೆ ಸಿಬ್ಬಂದಿಯು ತಹಶೀಲ್ದಾರ್ ಎದುರಿಗೆ ಬೇಸರ ವ್ಯಕ್ತಪಡಿಸಿದರು. ಕೆಲವರು ಊಟಕ್ಕೆ ಹೊರಹೋದರೆ, ಇನ್ನು ಕೆಲವರು ಬಿಸ್ಕಿಟ್ ತರಿಸಿ ತಿಂದರು. ನಂತರ ಊಟ ತರಲಾಯಿತು.
ಗೊಂದಲದ ಗೂಡಾದ ಮತದಾರರ ಪಟ್ಟಿ!:
ಚುನಾವಣೆ ಘೋಷಣೆ ಆಗಿದ್ದರೂ ಮತದಾರರ ಪಟ್ಟಿ ಸರಿಯಾಗಿ ಪರಿಷ್ಕರಣೆಯಾಗದೆ ಮತದಾರರು ಮತ್ತು ಅಭ್ಯರ್ಥಿಗಳು ಹೆಸರು ಹುಡುಕಲು ಪರದಾಡಿದ ಪ್ರಸಂಗ ಜರುಗಿತು. ಒಂದೇ ಕುಟುಂಬದ ಮತದಾರರ ಹೆಸರು ಒಂದೆಡೆ ಇರದೆ ಬೇರೆ ಬೇರೆ ವಾರ್ಡಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು. ಕೈಯಲ್ಲಿ ಗುರುತಿನ ಚೀಟಿ ಹಿಡಿದುಕೊಂಡು ಮತದಾರರು ಅತ್ತಂದಿತ್ತ ಅಲೆದಾಡಿದರು. ಕೊನೆಗೆ ಹೆಸರಿದ್ದ ಮತದಾರರ ಪಟ್ಟಿಯ ಮತಗಟ್ಟೆಯತ್ತ ತೆರಳಿ ಮತದಾನ ಮಾಡಿ ಹಿಂದಿರುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.