ADVERTISEMENT

ಕಾಳಗಿ: ಅತಿಥಿ ಶಿಕ್ಷಕಿಯಿಂದ ಹಸಿರು ಕೊಡುಗೆ

ಕಾಳಗಿ ಕರಿಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:17 IST
Last Updated 21 ಫೆಬ್ರುವರಿ 2026, 5:17 IST
ಕಾಳಗಿ ಕರಿಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ತಲೆ ಎತ್ತಿರುವ ಹಸಿರು ಸಸ್ಯಕಾಶಿ
ಕಾಳಗಿ ಕರಿಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ತಲೆ ಎತ್ತಿರುವ ಹಸಿರು ಸಸ್ಯಕಾಶಿ   

ಕಾಳಗಿ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಅದೆಷ್ಟೊ ಜನ ಸರ್ಕಾರಿ ನೌಕರರ ನಡುವೆ ಕಾಯಂ ಇಲ್ಲದೇ ಇರುವ ಅತಿಥಿ ಶಿಕ್ಷಕಿಯೊಬ್ಬರು ₹40 ಸಾವಿರ ಖರ್ಚು ಮಾಡಿ ತಾನು ಬೋಧಿಸುವ ಶಾಲೆಯ ಮೈದಾನದಲ್ಲಿ ಹಸಿರು ಸಸಿಗಳನ್ನು ನೆಟ್ಟು ಶಾಲಾ ಬೆಳವಣಿಗೆಗೆ ಪಾತ್ರರಾಗಿದ್ದಾರೆ.

ಕಾಳಗಿ ಕರಿಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣವೇ ಅತಿಥಿ ಶಿಕ್ಷಕಿ ಸಾವಿತ್ರಿ ಶ್ರೀನಿವಾಸ ಗುರುಮಠಕಲ್ ಅವರ ಹಸಿರು ಪ್ರೀತಿಯ ಕಾಳಜಿಗೆ ಸಾಕ್ಷಿಯಾಗಿದೆ. ಒಟ್ಟು 1 ರಿಂದ 5ನೇ ತರಗತಿ, ಭಾಷೆ ಸಮಸ್ಯೆಯ 19 ಮಕ್ಕಳು, 4 ಕೊಠಡಿ, ತಕ್ಕ ಮಟ್ಟಿಗೆ ಮೈದಾನ ಹೊಂದಿರುವ ಈ ಶಾಲೆಯಲ್ಲಿ ಒಬ್ಬರು ಸರ್ಕಾರಿ ಶಿಕ್ಷಕರು (ನಿಯೋಜನೆ) ಇನ್ನೊಬ್ಬರು ಅತಿಥಿ ಶಿಕ್ಷಕಿ ಇದ್ದಾರೆ.

ಇದೇ ಅಂಗಳದಲ್ಲಿ ಅಂಗನವಾಡಿ ಕೇಂದ್ರವೂ ಇದ್ದು, ಅಲ್ಲಿ 21 ಮಕ್ಕಳಿದ್ದಾರೆ. ಸ್ಥಳೀಯರ ಮತ್ತು ಇಲಾಖೆಯ ಆಸಕ್ತಿಯಿಂದ ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಉತ್ತಮವಾದ ಡೆಸ್ಕ್‌ಗಳಿವೆ. ಕುಡಿಯುವ ನೀರಿಗಾಗಿ ಬೋರ್‌ವೆಲ್, ಕಾಂಪೌಂಡ್ ಗೋಡೆಗೆ ಗೇಟ್, ಒಳಗಡೆ ಆಟಿಕೆಯ ಒಂದೆರಡು ಪರಿಕರಗಳಿವೆ.

ADVERTISEMENT

ಈ ಮಧ್ಯೆ ಕಳೆದೊಂದು ವರ್ಷದಿಂದ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕಿ ಸಾವಿತ್ರಿ, ತನ್ನ ಸ್ವಂತ ಖರ್ಚಿನಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ಬೆಳೆಸಿ ಕಳೆ ಹೆಚ್ಚಿಸಲು ಮನಸ್ಸು ಮಾಡಿದ್ದಾರೆ. ಡಿಸೆಂಬರ್ 2025ರಲ್ಲಿ ಆಂಧ್ರಪ್ರದೇಶದ ರಾಜಮಂಡ್ರಿ ನರ್ಸರಿಯಿಂದ ಉಜನಿ-200, ಆರ್.ಕೆ.ಫಾರ್ಮ್-10, ಪೋಸ್ಟರ್ ಫಾರ್ಮ್-10, ಕ್ರಿಸ್ ಮಸ್-4 ಸಸಿಗಳನ್ನು ತರಿಸಿದ್ದಾರೆ.

ಜತೆಗೆ ಅರಣ್ಯ ಇಲಾಖೆಯಿಂದ ನೇರಳೆ ಹಣ್ಣಿನ ಗಿಡ, ಮಹಾಗನಿ, ಚೆರಿ ಗಿಡ ತಂದು ಎಲ್ಲಾ ಸಸಿ, ಗಿಡಗಳನ್ನು ಶಾಲಾ ಅಂಗಳದಲ್ಲಿ ಕ್ರಮಬದ್ಧವಾಗಿ ನೆಟ್ಟಿದ್ದಾರೆ. ಅಂದ ಹೆಚ್ಚಿಸಲು 800 ಇಟ್ಟಿಗೆ, 2 ಟ್ರ್ಯಾಕ್ಟರ್ ಕೆಂಪು ಮಣ್ಣು ಬಳಸಿ ಆಕರ್ಷಿಸುವಂತೆ ಮಾಡಿದ್ದಾರೆ.

ಅಂದಿನಿಂದ ಮಕ್ಕಳು, ಶಿಕ್ಷಕರು ಕಲಿಕೆಯೊಂದಿಗೆ ಸಸಿ-ಗಿಡಗಳಿಗೆ ಬೋರವೆಲ್ ನೀರುಣಿಸುತ್ತ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಲವಲವಿಕೆಯ ವಾತಾವರಣ ಸೃಷ್ಟಿಸಿದ್ದಾರೆ. ಇದರಿಂದಾಗಿ ಶಾಲೆ ನೋಡುಗರನ್ನು ಆಕರ್ಷಿಸುತ್ತಿದೆ. ಇದನ್ನು ಗಮನಿಸಿದ ತಾಂಡಾದ ನಿವಾಸಿಗಳು, ಪೋಷಕರು ಅತಿಥಿ ಶಿಕ್ಷಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

ಮಹಾಂತೇಶ ಪಂಚಾಳ ಸರ್ಕಾರಿ ಶಿಕ್ಷಕ ಕರಿಕಲ್ ತಾಂಡಾ
ಸಾವಿತ್ರಿ ಶ್ರೀನಿವಾಸ ಗುರುಮಠಕಲ್ ಅತಿಥಿ ಶಿಕ್ಷಕಿ
ನನ್ನ ಪತಿ ಗಿಡಮರ ಬೆಳೆಸುವ ಆಸಕ್ತಿ ಹೊಂದಿದ್ದಾರೆ. ಆ ಪ್ರೇರಣೆ ನನಗಾಗಿ ನನ್ನ ಶಾಲೆಗೆ ಅಳಿಲು ಸೇವೆ ಮಾಡಿದ್ದೆನೆ. ಮಕ್ಕಳು ಖುಷಿಯಿಂದ ನೀರುಣಿಸುತ್ತಾರೆ
ಸಾವಿತ್ರಿ ಶ್ರೀನಿವಾಸ ಗುರುಮಠಕಲ್ ಅತಿಥಿ ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.