ADVERTISEMENT

ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆ ಯಾವಾಗ?

ಐದು ವರ್ಷದ ಒಂದು ಅವಧಿ ಮುಕ್ತಾಯದ ಸಂದರ್ಭ!

ಗುಂಡಪ್ಪ ಕರೆಮನೋರ
Published 3 ಜನವರಿ 2024, 6:18 IST
Last Updated 3 ಜನವರಿ 2024, 6:18 IST
ಕಾಳಗಿ ಪಟ್ಟಣ ಪಂಚಾಯಿತಿ ಕಚೇರಿ
ಕಾಳಗಿ ಪಟ್ಟಣ ಪಂಚಾಯಿತಿ ಕಚೇರಿ   

ಕಾಳಗಿ: ಸ್ಥಳೀಯರ ಬಹುದಿನಗಳ ತಾಲ್ಲೂಕು ಬೇಡಿಕೆ ಕಲಬುರಗಿ ಜಿಲ್ಲೆಯಲ್ಲಿಯೇ ಮೊದಲಾಗಿ ಅಧಿಕೃತವಾಗಿ ಮಾರ್ಚ್ 10, 2018ರಂದು ಈಡೇರಿದೆ. ಈ ವೇಳೆ ಗ್ರಾಮ ಪಂಚಾಯಿತಿಯಾಗಿದ್ದ ಇಲ್ಲಿಯ ಆಡಳಿತ ಕೇಂದ್ರ ಒಂದುವರೆ ವರ್ಷದಲ್ಲಿ ಅಂದರೆ ಜುಲೈ 29, 2019ರಂದು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ.

ಆದರೆ, ಇಲ್ಲಿವರೆಗೂ ಇದರ ಚುನಾವಣೆ ನಡೆಸದೆ ಮುಂದೂಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದ್ದು ಚುನಾವಣೆ ಯಾವಾಗ? ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಈ ಮೊದಲು 2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬಂದ 26 ಜನಪ್ರತಿನಿಧಿಗಳೇ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳನ್ನಾಗಿ ಮುಂದುವರಿಸಲಾಗಿತ್ತು. ಇವರ ಅಧಿಕಾರ ಅವಧಿ 2020ಕ್ಕೆ ಪೂರ್ಣಗೊಳ್ಳುವ ಮುನ್ನವೇ ಪಿಡಿಒ, ಕಾರ್ಯದರ್ಶಿ ಹುದ್ದೆ ರದ್ದಾಗಿ ಆ ಜಾಗದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುಳಿತುಕೊಂಡಿದ್ದಾರೆ.

ADVERTISEMENT

ಜನವಸತಿ ಪ್ರದೇಶಗಳನ್ನು ಪರಿಷ್ಕೃತಗೊಳಿಸಿ ಸ್ಥಳೀಯವಾಗಿ 08 ಹಾಗೂ ಸುತ್ತಲಿನ ಆರು ತಾಂಡಾಗಳ ನಡುವೆ 03 ಹೀಗೆ ಒಟ್ಟು 11 ವಾರ್ಡ್‌ಗಳ ರಚನೆಯಾಯಿತು. ಪೂರಕವೆಂಬಂತೆ ವಾರ್ಡ್‌ವಾರು ಅಭ್ಯರ್ಥಿಗಳ ಚುನಾವಣಾ ಮೀಸಲಾತಿ ಪ್ರಕಟಿಸಿ ಸಾರ್ವಜನಿಕರ ಆಕ್ಷೇಪಣೆಗಳ ಸಲ್ಲಿಕೆ ಮುಕ್ತಾಯಗೊಂಡು ವರ್ಷ ಮೇಲಾಗಿದೆ. ಆದರೆ ಇಲ್ಲಿವರೆಗೂ ಅದರ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ.

ಈ ಪಂಚಾಯಿತಿ ಅಸ್ತಿತ್ವಕ್ಕೆ ಬಂದು ನಾಲ್ಕುವರೆ ವರ್ಷ ಕಳೆಯುತ್ತ ಐದು ವರ್ಷದ ಒಂದು ಅವಧಿಯೇ ಮುಗಿಯುವ ಹಂತದಲ್ಲಿದೆ. ಇಷ್ಟಾದರೂ ಚುನಾವಣೆ ನಡೆಯದೆ ಒಂದುಕಡೆ ಅಧಿಕಾರಿಗಳ ಮೇಲೆ ಆಡಳಿತದ ಭಾರ ಎನಿಸಿದರೆ, ಈ ನೀತಿ ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ಹೊಸ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿನ ಪಟ್ಟಣ ಪಂಚಾಯಿತಿಗೆ ಆಗಲೇ ಚುನಾವಣೆ ಘೋಷಣೆಯಾಗಿ ಮತದಾನ, ಮತ ಎಣಿಕೆ ನಡೆದು ಫಲಿತಾಂಶವೂ ಪ್ರಕಟಗೊಂಡಿದೆ.

ಆದರೆ, ಹುಣಸಗಿಕ್ಕಿಂತಲೂ ಮೊದಲೇ ರಚನೆಯಾದ ಕಾಳಗಿ ಪಟ್ಟಣ ಪಂಚಾಯಿತಿಗೆ ಚುನಾವಣೆ ಯಾಕೆ ಮುಂದೂಡಲಾಗುತ್ತಿದೆ? ಎಂದು ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಿದೆ.

ವಾರ್ಡ್‌ವಾರು ಮೀಸಲಾತಿ ಪ್ರಕಟಿಸಿ ಆಕ್ಷೇಪಣೆ ಕರೆಯಲಾಗಿತ್ತು ಈ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಆದರೆ ಅಂತಿಮ ಅಧಿಸೂಚನೆ ಪ್ರಕಟಗೊಂಡಿಲ್ಲ.
-ವೆಂಕಟೇಶ ತೆಲಂಗ್, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
ಯಾವುದೇ ಅಡೆತಡೆ ಇಲ್ಲದಿದ್ದರೂ ಈ ಪಟ್ಟಣ ಪಂಚಾಯಿತಿ ಚುನಾವಣೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದು ಅವರಿಗೆ ಬೇಕಾದಂತೆ ಕಾಣುತಿಲ್ಲ.
-ಸಂತೋಷ ಪತಂಗೆ, ಯುವ ಮುಖಂಡ
ಈ ಚುನಾವಣೆ ಬೇಗ ಆಗಬೇಕು ಈಗಲೇ ತಡವಾಗಿದೆ. ಚುನಾವಣೆ ಆಗದಿದ್ದರೆ ಪಂಚಾಯಿತಿ ಅಧಿಕಾರಿಗಳಲ್ಲಿ ಬಿಗು ಇರುವುದಿಲ್ಲ.
-ಪ್ರಶಾಂತ ಕದಂ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ
ಈ ಚುನಾವಣೆ ನಡೆಯದಿರಲು ಕ್ಷೇತ್ರದ ಶಾಸಕರು ನಿರಾಸಕ್ತಿ ವಹಿಸುತ್ತಿದ್ದಾರೆ. ಚುನಾವಣೆ ಮುಂದೂಡಿಕೆಗೆ ಶಾಸಕರ ನಿಷ್ಕಾಳಜಿಯೆ ಕಾರಣ.
-ರಾಘವೇಂದ್ರ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.