ADVERTISEMENT

ಶಿವರಾತ್ರಿ ಪೂಜೆಗೆ ದರ್ಗಾ ಪ್ರವೇಶಕ್ಕೆ ಅನುಮತಿ; ಬಿಕೊ ಎನ್ನುತ್ತಿದೆ ಆಳಂದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 8:21 IST
Last Updated 18 ಫೆಬ್ರುವರಿ 2023, 8:21 IST
ಆಳಂದದ ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಮುಂಭಾಗ
ಆಳಂದದ ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಮುಂಭಾಗ   

ಆಳಂದ (ಕಲಬುರಗಿ ಜಿಲ್ಲೆ): ಇಲ್ಲಿನ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಶಿವರಾತ್ರಿ ಅಂಗವಾಗಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಶ್ರೀರಾಮ ಸೇನೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಮಧ್ಯಾಹ್ನ 2ರ ಬಳಿಕ ದರ್ಗಾ ಪ್ರವೇಶಕ್ಕೆ ಅನುಮತಿ ನೀಡಿದೆ.

ಇದಕ್ಕೂ ಮುನ್ನ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ‌ಸಮುದಾಯದ 15 ಜನರಿಗೆ ಅವಕಾಶ ನೀಡಿದ್ದು, 11.43ಕ್ಕೆ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸಿ ಹೊರಬಂದರು.

ಪೊಲೀಸ್ ಸರ್ಪಗಾವಲು: ಕಳೆದ ವರ್ಷ ರಾಘವ ಚೈತನ್ಯ ‌ಲಿಂಗಕ್ಕೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದು ಹಲವರಿಗೆ ಗಾಯಗಳಾಗಿದ್ದವು. ಹಲವು ಮುಸ್ಲಿಂ ಸಮುದಾಯದ ಯುವಕರ ಮೇಲೆ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ADVERTISEMENT

ಈ ಬಾರಿಯೂ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ‌ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ‌ಆಂದೋಲಾ‌ ಸಿದ್ಧಲಿಂಗ ಸ್ವಾಮೀಜಿ ವಕ್ಫ್ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ದರ್ಗಾದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಷರತ್ತಿನ ಮೇಲೆ 15 ಜನರಿಗೆ ಮಾತ್ರ ಒಳಗೆ ಹೋಗಿ ಪೂಜೆ ಸಲ್ಲಿಸಲು ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿ ಎರಡೂ ಕೋಮಿನವರಿಗೆ ಬೇರೆ ಸಮಯದಲ್ಲಿ ಪೂಜೆಗೆ ಅವಕಾಶ ನೀಡುವಂತೆ ಸೂಚನೆ ನೀಡಿತ್ತು.

ಆಳಂದದ ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಮುಂಭಾಗ

ಹೈಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.

ನಗರದ ಎಲ್ಲ ಅಂಗಡಿ, ವಾಣಿಜ್ಯ ‌ಚಟುವಟಿಕೆಗಳು ಸ್ತಬ್ದಗೊಂಡಿವೆ. ವಾಹನ ಸಂಚಾರ ವಿರಳವಾಗಿದೆ.

ಎಸ್ಪಿ ಇಶಾ ಪಂತ್ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಭದ್ರತೆಗೆ 1400ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರಾರ್ಥನೆ ಮುಗಿಸಿಕೊಂಡು ವಾಪಸಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಗಾದ ಕಾರಭಾರಿ ಮೊಹಮ್ಮದ್ ಸಾದತ್ ಅನ್ಸಾರಿ, ಇಲ್ಲಿ ಎಲ್ಲರೂ ಒಂದಾಗಿ ಸೌಹಾರ್ದದಿಂದ ಬದುಕುತ್ತಿದ್ದೇವೆ. ನಮ್ಮ ಮಧ್ಯೆ ಒಡಕನ್ನುಂಟು ಮಾಡುವ ಯಾವುದೇ ಪ್ರಯತ್ನವನ್ನು ಮಾಡಬಾರದು. ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದರು.

ಇತ್ತೀಚೆಗೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಆಳಂದ ಪಟ್ಟಣದಲ್ಲಿ ಪಥಸಂಚಲನ ನಡೆದಿತ್ತು.

***

ಹೈಕೋರ್ಟ್ ಆದೇಶವನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಎರಡೂ ಕೋಮಿನ ತಲಾ 15 ಜನರಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 2ರ ಬಳಿಕ ಹಿಂದೂ ಸಮುದಾಯದವರು ಪೂಜೆ ಸಲ್ಲಿಸಲು ಅವಕಾಶವಿದೆ. ಪಟ್ಟಣದಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ ಅಂಗಡಿ ಮುಚ್ಚುವಂತೆ ಯಾರಿಗೂ ಸೂಚನೆ ನೀಡಿಲ್ಲ.
–ಇಶಾ ಪಂತ್, ಎಸ್ಪಿ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.