
ಜೇವರ್ಗಿ: ಸ್ವಚ್ಛತೆ, ನೈರ್ಮಲ್ಯ, ಕಂದಾಯ ವಸೂಲಿ, ಸಮರ್ಪಕ ಕುಡಿಯುವ ನೀರು ಸರಬರಾಜು ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲ್ಲೂಕಿನ ಕಲ್ಲೂರ.ಕೆ ಗ್ರಾಮ ಪಂಚಾಯಿತಿ ಭಾಜನವಾಯಿತು.
ಪುರಸ್ಕಾರ:
ಕಲ್ಲೂರು.ಕೆ ಗ್ರಾ.ಪಂ 2023-24ನೇ ಸಾಲಿನಲ್ಲಿ ಮನರೇಗಾ ಯೋಜನೆ, ಕುಡಿಯುವ ನೀರಿನ ನಿರ್ವಹಣೆ, ಸ್ವಚ್ಛ ಭಾರತ ಯೋಜನೆ, ತೆರಿಗೆ ಪರಿಷ್ಕರಣೆ, ಬರಗಾಲ ಮತ್ತು ಪ್ರವಾಹ ನಿರ್ವಹಣೆ ಹಾಗೂ ಉತ್ತಮ ಆಡಳಿತಕ್ಕಾಗಿ ಗ್ರಾಮ ಪಂಚಾಯಿತಿಯು ಮಾಡಿರುವ ಉತ್ತಮ ಕೆಲಸಗಳನ್ನು ಪರಿಗಣಿಸಿ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಯಿತು.
ಬೆಂಗಳೂರಿನ ವಿಧಾನಸೌಧ ಬ್ಯಾಂಕೇಟ್ ಹಾಲ್‌ನಲ್ಲಿ ಸೋಮವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಕಲ್ಲೂರ.ಕೆ ಗ್ರಾಪಂ ಅಧ್ಯಕ್ಷ ಪ್ರಕಾಶ ಕೂಡಲಗಿ ಹಾಗೂ ಪಿಡಿಒ ಅವರಿಗೆ ₹5 ಲಕ್ಷ ಪ್ರೋತ್ಸಾಹಧನ, ಪಾರಿತೋಷಕ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
‘ಗ್ರಾಪಂನ ಎಲ್ಲ ಸದಸ್ಯರು ಹಾಗೂ ತಾಲ್ಲೂಕಿನ ಎಲ್ಲ ಅಧಿಕಾರಿಗಳ ಸಹಕಾರದಿಂದ ಗಾಂಧಿ ಗ್ರಾಮ ಪ್ರಶಸ್ತಿ ಲಭಿಸಿದೆ. ಮುಂದೆಯೂ ಇದೇ ರೀತಿ ಎಲ್ಲ ಸದಸ್ಯರೊಟ್ಟಿಗೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತೇವೆ. ಗ್ರಾಮದ ಜನರಿಗೆ ಸಕಲ ರೀತಿಯ ಅನುಕೂಲಗಳನ್ನೂ ಪಂಚಾಯಿತಿಯಿಂದ ಕಲ್ಪಿಸಿಕೊಡಲಾಗುವುದು’ ಎಂದು ಕಲ್ಲೂರ.ಕೆ ಗ್ರಾ.ಪಂ ಅಧ್ಯಕ್ಷ ಪ್ರಕಾಶ ಕೂಡಲಗಿ ಹೇಳಿದರು.
ಕಲ್ಲೂರ.ಕೆ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಸಿಬ್ಬಂದಿ, ಅಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರ ಸಹಕಾರ ಹಾಗೂ ಹಿರಿಯ ಅಧಿಕಾರಗಳ ಮಾರ್ಗದರ್ಶನದಿಂದ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ. ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಮಾಡಲು ಈ ಪ್ರಶಸ್ತಿಯು ಪ್ರೇರಣೆಯಾಗಿದೆ’ ಎಂದು ಪಿಡಿಒ ಶ್ರೀಕಾಂತ ದೊಡ್ಡಮನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.