
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರು ನೈಸರ್ಗಿಕವಾಗಿ ಆರ್ಸೆನಿಕ್ ಹಾಗೂ ಫ್ಲೋರೈಡ್ ಅಂಶವನ್ನು ಹೊಂದಿದ ಕಾರಣ ಕುಡಿಯಲು ಯೋಗ್ಯವಾಗಿಲ್ಲ. ಜನರಿಗೆ ಶುದ್ಧ ನೀರೊದಗಿಸಲು ಗ್ರಾಮೀಣ ಭಾಗದಲ್ಲಿ ಸರ್ಕಾರ ಸ್ಥಾಪಿಸಿದ ಘಟಕಗಳು ನಿರ್ವಹಣೆ ಕೊರತೆಯಿಂದ ‘ರೋಗ’ಕ್ಕೆ ತುತ್ತಾಗಿವೆ.
ಇದರಿಂದ ಕಲುಷಿತ ನೀರು ಸೇವಿಸಿ ಸಾವನ್ನಪ್ಪುವವರ ಮತ್ತು ರೋಗಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಟ್ಟು 4,105 ಶುದ್ಧ ನೀರಿನ ಘಟಕಗಳನ್ನು ಸರ್ಕಾರ ಸ್ಥಾಪಿಸಿದೆ. ಇವುಗಳ ನಿರ್ವಹಣೆ ಹೊಣೆಯನ್ನು ಗ್ರಾಮ ಪಂಚಾಯಿತಿ ಹಾಗೂ ಕೆಲ ಕಡೆ ಗುತ್ತಿಗೆದಾರರಿಗೆ ವಹಿಸಲಾಗಿದೆ. ನಿರ್ವಹಣೆ ಕೊರತೆ ಕಾರಣಕ್ಕೆ 1,438 ಘಟಕಗಳು ಸ್ಥಗಿತಗೊಂಡಿವೆ. 2,667 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸ್ಥಗಿತಗೊಂಡ ಘಟಕಗಳಲ್ಲಿ ಲಕ್ಷಾಂತರ ಮೌಲ್ಯದ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಆದ್ದರಿಂದ ಕೆಲವರು ಖಾಸಗಿ ಘಟಕಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವರು ಕಲುಷಿತ ನೀರು ಸೇವಿಸುತ್ತಾರೆ.
ಕಲಬುರಗಿ ಜಿಲ್ಲೆಯಲ್ಲಿಯೇ ಹೆಚ್ಚು ಘಟಕ ಸ್ಥಗಿತ: 2011ರ ಜನಗಣತಿ ಪ್ರಕಾರ 25,66,326 ಜನಸಂಖ್ಯೆ ಹೊಂದಿದ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಘಟಕಗಳು ಸ್ಥಗಿತಗೊಂಡಿವೆ. ಜಿಲ್ಲೆಯಲ್ಲಿ ಸ್ಥಾಪಿಸಿದ 510 ಘಟಕಗಳಲ್ಲಿ 132 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ! ನಿರ್ವಹಣೆ ಕೊರತೆಯಿಂದ ಬರೋಬ್ಬರಿ 378 ಘಟಕಗಳು ರೋಗಗ್ರಸ್ಥತತೆಗೆ ಒಳಗಾಗಿವೆ.
ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಿದ 674 ಘಟಕಗಳಲ್ಲಿ 281 ಘಟಕಗಳು ಸ್ಥಗಿತಗೊಂಡಿವೆ. ವಿಜಯನಗರ 250, ಯಾದಗಿರಿ 247, ರಾಯಚೂರು 155, ಬೀದರ್ 79 ಹಾಗೂ ಬಳ್ಳಾರಿಯಲ್ಲಿ 48 ಘಟಕಗಳಲ್ಲಿ ಯಂತ್ರಗಳು ತುಕ್ಕು ಹಿಡಿಯುತ್ತಿವೆ.
ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೂ ಶುದ್ಧ ನೀರೊದಗಿಸಲು ರಾಜ್ಯಗಳ ಸಹಕಾರದಿಂದ ಜಾರಿಗೆ ತಂದಿರುವ ಜಲಜೀವನ ಮಿಷನ್ ಯೋಜನೆಯ ನಲ್ಲಿಗಳೂ ನೀರೊದಗಿಸುತ್ತಿಲ್ಲ. ಜಲಮೂಲಗಳ ಕೊರತೆ, ಅಸಮರ್ಪಕ ಅನುಷ್ಠಾನ ಹಾಗೂ ಅವೈಜ್ಞಾನಿಕ ಕಾಮಗಾರಿ, ಅನುದಾನ ಕೊರತೆ ಸೇರಿದಂತೆ ವಿವಿಧ ಕಾರಣಗಳು ಈ ಯೋಜನೆಯನ್ನು ಸೊರಗುವಂತೆ ಮಾಡಿವೆ.
ಕಲುಷಿತ ನೀರಿನಿಂದ ರೋಗ: ಹಳ್ಳಿಗಳಲ್ಲಿ ಜನರು ಕಲುಷಿತ ನೀರು ಸೇವಿಸಿ ಡೆಂಗಿ, ಅತಿಸಾರ, ಟೈಫಾಯಿಡ್, ಹೆಪಟೈಟಿಸ್–ಎಯಂಥ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅತಿಸಾರದಿಂದಾಗಿ ಕೆಲ ಜಿಲ್ಲೆಗಳಲ್ಲಿ ಸಾವುಗಳೂ ಸಂಭವಿಸಿವೆ. ಇದನ್ನು ತಡೆಯಲು ಸರ್ಕಾರ ಶುದ್ಧ ನೀರೊದಗಿಸಬೇಕು ಎಂದು ಜನರು ಆಗ್ರಹಿಸುತ್ತಾರೆ.
ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸರ್ಕಾರಕ್ಕೆ ಸವಾಲಾಗಿದ್ದು ಆಯಾ ಗ್ರಾಮ ಪಂಚಾಯಿತಿಗಳಿಂದ ನಿರ್ವಹಣೆ ಮಾಡಲು ಅನುದಾನದ ಕೊರತೆಯಿದೆ. ಅಲ್ಲದೆ ಘಟಕಗಳನ್ನು ಹಸ್ತಾಂತರಿಸದ ಕಾರಣ ಸಮಸ್ಯೆ ಉಂಟಾಗುತ್ತಿದೆಪ್ರಿಯಾಂಕ್ ಖರ್ಗೆ, ವಿಧಾನಸಭೆ ಅಧಿವೇಶನದಲ್ಲಿ ನೀಡಿದ ಹೇಳಿಕೆ
‘ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ’
‘ಗ್ರಾಮೀಣ ಭಾಗದಲ್ಲಿ ಸ್ಥಗಿತಗೊಂಡಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಆದ್ಯತೆ ನೀಡಲಾಗುತ್ತಿದೆ. ಸಣ್ಣ–ಪುಟ್ಟ ದುರಸ್ತಿ ಇದ್ದರೆ ಗ್ರಾಮ ಪಂಚಾಯಿತಿಯಿಂದಲೇ ಮಾಡಿಸಲಾಗುತ್ತಿದೆ. ₹ 1 ಲಕ್ಷಕ್ಕಿಂತ ಹೆಚ್ಚು ವೆಚ್ಚವಾದರೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ’ ಎಂದು ಕಲಬುರಗಿ ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ ತಿಳಿಸಿದರು. ‘ಜಿಲ್ಲೆಯಲ್ಲಿ ದುರಸ್ತಿಗೆ ಹೆಚ್ಚು ವೆಚ್ಚ ತಗಲುವ ಸ್ಥಗಿತಗೊಂಡ ಘಟಕಗಳನ್ನು ಗುರುತಿಸಿ ಮೂರು–ನಾಲ್ಕು ತಿಂಗಳುಗಳ ಹಿಂದೆ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಬಳಿಕ ದುರಸ್ತಿ ಮಾಡಿಸಲಾಗುವುದು’ ಎಂದರು.
ನೋಟಿಸ್ ನೀಡಿದ್ದ ಹೈಕೋರ್ಟ್
2022ರ ಜೂನ್‌ನಲ್ಲಿ ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಸಾವನ್ನಪ್ಪಿದ್ದರು. 2023ರ ಮೇನಲ್ಲಿ ದೇವದುರ್ಗ ತಾಲ್ಲೂಕಿನ ರೇಕಲಮರಡಿ ಗ್ರಾಮದಲ್ಲಿ 3 ವರ್ಷದ ಮಗು ಸಾವನ್ನಪ್ಪಿತ್ತು. ಕಲ್ಯಾಣ ಕರ್ನಾಟಕ ಸೇರಿ ವಿವಿಧ ಜಿಲ್ಲೆಗಳಲ್ಲಿ ಹಲವರು ಅಸ್ವಸ್ಥಗೊಂಡಿದ್ದರು. ಇದೇ ವಿಚಾರವಾಗಿ ರಮೇಶ್ ಎಲ್.ನಾಯಕ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ನೋಟಿಸ್ ಜಾರಿ ಮಾಡಿತ್ತು. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಜಲಮೂಲಗಳ ಸ್ವಚ್ಛತೆ ಹಾಗೂ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಮುಂಸದಾಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.