ADVERTISEMENT

ಕಲ್ಯಾಣ ಕರ್ನಾಟಕಕ್ಕೆ ‘ಏಕಲವ್ಯ’ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 15:41 IST
Last Updated 3 ನವೆಂಬರ್ 2020, 15:41 IST
ಮಂಜುನಾಥ ಎಸ್.ರಾಠೋಡ
ಮಂಜುನಾಥ ಎಸ್.ರಾಠೋಡ   

ಕಲಬುರ್ಗಿ: ರಾಜ್ಯ ಸರ್ಕಾರದಿಂದ 2017, 2018 ಮತ್ತು 2019ನೆ ಸಾಲಿನ ಏಕಲವ್ಯ, ಕ್ರೀಡಾರತ್ನ ಮತ್ತು ಜೀವಮಾನ ಸಾಧನೆ ಪ್ರಶಸ್ತಿಗಳನ್ನು ನ.2ರಂದು ಪ್ರದಾನ ಮಾಡಲಾಗಿದೆ. ಆದರೆ, ಈ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯಾವ ಕ್ರೀಡಾಪಟುಗಳಿಗೂ ಪ್ರಶಸ್ತಿ ಸಿಕ್ಕಿಲ್ಲ.

ಬೀದರ್‌ನ ಮಾಣಿಕನಗರದ ಮಾಣಿಕಪ್ರಭು ಕ್ರೀಡಾ ಅಕಾಡೆಮಿ ಮಾತ್ರ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಭಾಜನವಾಗಿದೆ.

ಈ ಹಿಂದೆ ರಾಯಚೂರಿನ ಬ್ಯಾಸ್ಕೆಟ್‌ಬಾಲ್ ಆಟಗಾರ ಶ್ರೀನಿವಾಸ ನಾಯ್ಕ್ ಅವರಿಗೆ ಏಕಲವ್ಯ ಪ್ರಶಸ್ತಿ ಸಿಕ್ಕಿತ್ತು. ಆ ನಂತರ ಈ ಭಾಗಕ್ಕೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಈ ಬಾರಿಯೂ ಈ ಭಾಗದವರನ್ನು ಪ್ರಶಸ್ತಿಗೆ ಪರಿಗಣಿಸದಿರುವುದಕ್ಕೆ ಕ್ರೀಡಾಪಟುಗಳು, ತರಬೇತುದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಷ್ಟ್ರಮಟ್ಟ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂರು ವರ್ಷದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಆದರೆ, ಮೂರು ವರ್ಷಗಳಲ್ಲಿ ಈ ಭಾಗದ ಕ್ರೀಡಾಪಟುಗಳಿಂದ ಅಂತಹ ಸಾಧನೆ ಹೊರಹೊಮ್ಮಿಲ್ಲ ಎನ್ನುತ್ತಾರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು.

ಗ್ರಾಮೀಣ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು 2014–15ರಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಸ್ಥಾಪಿಸಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಕ್ರೀಡಾಪಟುಗಳುನ್ನು ಫ್ರೋತ್ಸಾಹಿಸಲು 1992ರಿಂದ ಏಕಲವ್ಯ ಪ್ರಶಸ್ತಿ ನೀಡಲಾಗುತ್ತಿದೆ. ಹಿರಿಯ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತದೆ.

‘ಕಲಬುರ್ಗಿ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಮುಖ್ಯವಾಗಿ ಕೋಚ್‌ಗಳ ಕೊರತೆ ಇದೆ. ಹೀಗಾಗಿ ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಕಲಬುರ್ಗಿ ಜಿಲ್ಲಾ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಸಿ.ಎನ್.ಬಾಬಳಗಾಂವ.

‘ಪ್ರತಿ ವರ್ಷ ಪ್ರಶಸ್ತಿ ಬಂದಾಗಲೂ ಈ ಭಾಗದವರಿಗೆ ನಿರಾಸೆಯಾಗುತ್ತದೆ. ಈ ಭಾಗದಲ್ಲಿ ಪ್ರತಿಭೆಗಳು ಇದ್ದರೂ ಪರಿಗಣಿಸುವುದಿಲ್ಲ. ಕ್ರೀಡೆಯಲ್ಲಿಯೂ ಈ ಭಾಗವನ್ನು ನಿರ್ಲಕ್ಷಿಸಲಾಗಿದೆ’ ಎನ್ನುವುದು ಅವರ ಅಸಮಾಧಾನ.

‘ಇಲ್ಲಿನ ಬಹುತೇಕ ಕ್ರೀಡಾಪಟುಗಳು ಕೃಷಿ ಮತ್ತು ಕೂಲಿಕಾರರ ಕುಟುಂಬಗಳಿಂದ ಬಂದವರು. ಅವರಿಗೆ ಹೆಚ್ಚಿನ ಟೂರ್ನಿಯಲ್ಲಿ ಆಡಲು ಅವಕಾಶ ಸಿಗುವುದಿಲ್ಲ. ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಅದಕ್ಕೆ ಕಾರಣ. ಕಲಬುರ್ಗಿ ಸೇರಿದಂತೆ ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಸೌಲಭ್ಯಗಳ ಕೊರತೆಯೂ ಇದೆ’ ಎಂದೂ ಅವರು ಹೇಳುತ್ತಾರೆ.

‘ಪ್ರಶಸ್ತಿಗೆ ಆಯ್ಕೆ ಮಾಡುವಾಗ ಎಲ್ಲ ಭಾಗದವರಿಗೂ ಸಮಾನ ಅದ್ಯತೆ ನೀಡಬೇಕು. ಈ ಭಾಗದಲ್ಲಿ ಕೆಪಿಎಲ್, ರಣಜಿ ಕ್ರಿಕೆಟ್ ಆಡಿದ ಆಟಗಾರರಿಗದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ರಾಯಚೂರಿನ ವಿದ್ಯಾಧರ ಪಾಟೀಲ ಅವರು ಆಡಿದ್ದಾರೆ. ಯಾರನ್ನೂ ಪ್ರಶಸ್ತಿಗೆ ಪರಿಗಣಿಸದಿರುವುದು ಬೇಸರದ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.