
ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ 5,800ರಷ್ಟು ಶಿಕ್ಷಕರು ಹೊಸದಾಗಿ ಸೇವೆಗೆ ನಿಯೋಜನೆಗೊಳ್ಳಲಿದ್ದಾರೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ 51 ಸಾವಿರದಷ್ಟು ಶಿಕ್ಷಕರ ಕೊರತೆಯಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೂ ಶಿಕ್ಷಕರ ಕೊರತೆ ಗಮನಕ್ಕಿದ್ದು, ಬೋಧಕರ ಕೊರತೆ ನೀಗಿಸಲು ಒತ್ತು ನೀಡಲಾಗಿದೆ’ ಎಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ನಮ್ಮ ಸರ್ಕಾರ ಬಂದ ಬಳಿಕ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಸದ್ಯ ಹೊಸದಾಗಿ 11 ಸಾವಿರ ಶಿಕ್ಷಕರ ನೇಮಕಾತಿಗೆ ಸಿದ್ಧತೆ ನಡೆದಿದೆ. ಶೀಘ್ರವೇ ನೇಮಕಾತಿ ಪ್ರಕ್ರಿಯೆ ಮುಗಿಸಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಅವರನ್ನು ಬೋಧನೆಗೆ ಕಳುಹಿಸುವ ಯೋಜನೆ ರೂಪಿಸಲಾಗಿದೆ’ ಎಂದರು.
‘ಕಲ್ಯಾಣ ಕರ್ನಾಟಕದಲ್ಲಿ ಕಲಿಕಾ ಗುಣಮಟ್ಟ ಸುಧಾರಣೆ, ಶಿಕ್ಷಕರ ಕೊರತೆ ನೀಗಿಸಲು, ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಕ್ರಮವಹಿಸಲಾಗಿದೆ. ನಮ್ಮ ಸರ್ಕಾರ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಬಿಗಿ ಕ್ರಮಕೈಗೊಂಡ ಫಲವಾಗಿ ಫಲಿತಾಂಶ ಕುಸಿದಿದೆ. ಆದರೆ, ಮುಂದಿನ ಎರಡ್ಮೂರು ವರ್ಷಗಳಲ್ಲಿ ಫಲಿತಾಂಶ ವೃದ್ಧಿಸಲಿದ್ದು, ಮಕ್ಕಳ ಭವಿಷ್ಯಕ್ಕೂ ಒಳ್ಳೆಯದಾಗಲಿದೆ’ ಎಂದರು.
‘ಕಳೆದ ಎರಡೂವರೆ ವರ್ಷಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಫಲಿತಾಂಶ ವೃದ್ಧಿ, ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಲ್ಯಾಣ ಭಾಗದಲ್ಲಿ ಕೆಕೆಆರ್‌ಡಿಬಿ ನೆರವಿನಿನಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಕಾರ್ಯಗತಗೊಳಿಸಲಾಗಿದೆ’ ಎಂದರು.
‘ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇದಕ್ಕೆ ಪರಿಹಾರವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ನೀತಿ ವಿಜ್ಞಾನ ಪಠ್ಯ ಪರಿಚಯಿಸಲು ತೀರ್ಮಾನಿಸಲಾಗಿದೆ’ ಎಂದು ಸಚಿವರು ಹೇಳಿದರು.
‘ಕಳೆದ ನಾಲ್ಕು ವರ್ಷಗಳಿಂದ ವಿವಿಧ ಹಂತದಲ್ಲಿ ಪದೋನ್ನತಿ, ಬಡ್ತಿಗಳು ಸ್ಥಗಿತಗೊಂಡಿವೆ. ಈ ಸಂಬಂಧಿತ ಸದನ ಸಮಿತಿ ರಚನೆಯಾಗಿದ್ದು, ಅದು ನೀಡುವ ವರದಿ ಜಾರಿಯೊಂದಿಗೆ ಈ ಎಲ್ಲವೂ ಸಮಸ್ಯೆಗಳು ಶೀಘ್ರವೇ ಪರಿಹಾರವಾಗಲಿವೆ’ ಎಂದು ಪ್ರತಿಕ್ರಿಯಿಸಿದರು.
ಮುಖಚರ್ಯೆ ಆಧಾರಿತ ಹಾಜರಾತಿ:
‘ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಮುಖಚರ್ಯೆ ಆಧಾರಿತ ಹಾಜರಾತಿ ಕಡ್ಡಾಯಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದಕ್ಕೆ ತಾಂತ್ರಿಕ ಅನುಮೋದನೆ ಸಿಕ್ಕಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳ್ಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
‘ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ನಕಲಿ ದಾಖಲಾತಿ ತೋರಿಸಿ ಸರ್ಕಾರದ ವಿವಿಧ ಸೌಲಭ್ಯ ಪಡೆಯುತ್ತಿರುವ ಶಾಲೆಗಳ ಕಳ್ಳಾಟ ಹಾಗೂ ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಶಿಕ್ಷಕರ ಮನಸ್ಥಿತಿಗೆ ಕಡಿವಾಣ ಬೀಳಲಿದ್ದು, ಶಿಕ್ಷಣದ ಗುಣಮಟ್ಟ ಸುಧಾರಣೆಯಾಗಲಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಇದ್ದರು.
‘ಕನ್ನಡ ಶಾಲೆಗಳ ಅನುದಾನಕ್ಕೆ ಒಲವು’
‘ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕಾದರೆ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂಬುದು ನನ್ನ ನಿಲುವು’ ಎಂದು ಮಧು ಬಂಗಾರಪ್ಪ ಹೇಳಿದರು.
‘1995ರ ಬಳಿಕ ರಾಜ್ಯದಲ್ಲಿ ಯಾವುದೇ ಶಾಲೆ ಅನುದಾನಕ್ಕೆ ಒಳಪಟ್ಟಿಲ್ಲ. ಈ ಸಂಬಂಧ ಅಧಿವೇಶನದಲ್ಲೂ ಚರ್ಚಿಸಲಾಗಿದೆ. ಅನುದಾನಕ್ಕೆ ಒಳಪಡಿಸಲು ಶಿಕ್ಷಣ ಇಲಾಖೆ ಸಿದ್ಧವಿದೆ. ಅದಕ್ಕೆ ಆರ್ಥಿಕ ಇಲಾಖೆ ನೆರವು ಅಗತ್ಯ. 10 ವರ್ಷಗಳ ಅವಧಿಯಂತೆ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಕಷ್ಟವಾದರೆ ಐದು ವರ್ಷಗಳ ಅವಧಿಯಂತೆ ಅನುದಾನಕ್ಕೆ ಒಳಪಡಿಸಬಹುದು ಎಂಬುದರ ಕುರಿತು ಮುಖ್ಯಮಂತ್ರಿ ಗಮನ ಸೆಳೆಯಲಾಗಿದೆ’ ಎಂದರು.
ಪ್ರಸಕ್ತ ವರ್ಷ ರಾಜ್ಯದಲ್ಲಿ ಶೇ 75ಕ್ಕೂ ಅಧಿಕ ಫಲಿತಾಂಶ ಪಡೆಯುವ ಗುರಿಯೊಂದಿಗೆ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆಮಧು ಬಂಗಾರಪ್ಪ, ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.