ADVERTISEMENT

ಕಲಬರಗಿ: ಕಲಾ ತಂಡಗಳ ಸಾಂಸ್ಕೃತಿಕ ದರ್ಶನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:25 IST
Last Updated 16 ಸೆಪ್ಟೆಂಬರ್ 2022, 4:25 IST
ಕಲಬುರಗಿ ನಗರದಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಮೆರವಣಿಗೆಯಲ್ಲಿ ಲಂಬಾಣಿ ನೃತ್ಯ ಪ್ರದರ್ಶಿಸಿದ ಬಂಜಾರ ಕಲಾವಿದಾರು
ಕಲಬುರಗಿ ನಗರದಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಮೆರವಣಿಗೆಯಲ್ಲಿ ಲಂಬಾಣಿ ನೃತ್ಯ ಪ್ರದರ್ಶಿಸಿದ ಬಂಜಾರ ಕಲಾವಿದಾರು   

ಕಲಬರಗಿ: ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ), ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಗುರುವಾರ ನಗರದಲ್ಲಿ ನಡೆದ ಕಲಾ ತಂಡಗಳ ಮೆರವಣಿಗೆಯಲ್ಲಿ ರಾಜ್ಯದ ಜನಪದ ಕಲೆ, ಸಂಸ್ಕೃತಿ ಅನಾವರಣಗೊಂಡಿತು.

ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆ ಆವರಣದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮಾರ್ಕೆಟ್, ಜಗತ್ ವೃತ್ತ, ನ್ಯೂ ಜೇವರ್ಗಿ ರಸ್ತೆ ವೃತ್ತ ಮಾರ್ಗವಾಗಿ ಕೇಂದ್ರ ಬಸ್‌ ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು.

ರಸ್ತೆ ಉದ್ದಕ್ಕೂ ಕಲಾ ತಂಡಗಳು ತಮ್ಮ ಕಲೆಗಳನ್ನು ಪ್ರದರ್ಶಿಸುತ್ತಿದ್ದರೆ ರಸ್ತೆಯ ಎರಡೂ ಬದಿಯಲ್ಲಿ ಅಪಾರ ಸಂಖ್ಯೆಯಲ್ಲಿ ಮಂದಿ ವೀಕ್ಷಿಸಿ, ತಮ್ಮ ಮೊಬೈಲ್‌ಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದರು. ವಿವಿಧ ಶಾಲೆಗಳು ನೂರಾರು ಮಕ್ಕಳು ಮೆರವಣಿಗೆಯಲ್ಲಿ ಸಾಗಿದರು.

ADVERTISEMENT

ವಿಜಯನಗರದ ಮರಗಾಲು ಕುಣಿತ, ಮೈಸೂರಿನ ನಗಾರಿ, ಧಾರವಾಡದ ಜಗ್ಗಲಿಗೆ, ಮಂಡ್ಯದ ಪೂಜಾ ಕುಣಿತ, ಮದ್ದೂರಿನ ಪಟ ಕುಣಿತ, ವಿಜಯಪುರದ ಸತ್ತಿಗೆ ಕುಣಿತ, ಚಿಕ್ಕಮಗಳೂರಿನ ಮಹಿಳಾ ವೀರಗಾಸೆ, ಲಂಬಾಣಿ ನೃತ್ಯ, ಖಣಿಹಲಗಿ, ಹಲಗೆ ವಾದನ, ಡೊಳ್ಳು ಕುಣಿತ, ಚಿಟ್ಟಹಲಗೆ ಮೇಳ, ಹೆಜ್ಜೆ ಮೇಳ, ಚಿಲಿಪಿಲಿ ಗೊಂಬೆ, ಪುರವಂತಿಕೆ, ಮಹಿಳಾ ತಮಟೆ, ಚಂಡೆ ವಾದನ(ಸಿಂಗಾರಿ ಮೇಳ), ತಾಸೇರಾಮ ಡೋಲು, ಹಗಲು ವೇಶಗಳ ವರ್ಣರಂಜಿತ ಕಲಾ ಪ್ರದರ್ಶನವನ್ನು ನೋಡಿ ಅಪಾರ ಸಂಖ್ಯೆಯಲ್ಲಿ ಜನರು ಕಣ್ತುಂಬಿಕೊಂಡರು.

ಕಲ್ಯಾಣ ಕರ್ನಾಟಕ ಪ್ರದೇಶ ಸೇರಿದಂತೆ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಧಾರವಾಡ, ವಿಜಯಪುರ ಒಳಗೊಂಡು ಹೊರ ರಾಜ್ಯಗಳ 24 ಕಲಾ ತಂಡಗಳ ಸುಮಾರು 200 ಕಲಾವಿದರು ನಾಡಿನ ಸಿರಿವಂತಿಕೆಯ ಕಲೆಗಳನ್ನು ಪ್ರದರ್ಶಿಸಿದರು. ಮೆರವಣಿಗೆ ಮಧ್ಯೆ ಹಲಗೆ, ಡೊಳ್ಳು, ತಮಟೆ, ಚಂಡೆ ವಾದ್ಯಕ್ಕೆ ಹೆಜ್ಜೆ ಹಾಕಿದರು. ಕಲಾವಿದರ ಪ್ರದರ್ಶನಗಳ ಮಧ್ಯೆಯೂ ಜನರು ಮುಗಿಬಿದ್ದು ಮೊಬೈಲ್‌ ವಿಡಿಯೊ ಸೆರೆಹಿಡಿಯುವ ದೃಶ್ಯ ಕಂಡುಬಂತು.

ಸ್ತಬ್ಧ ಚಿತ್ರಗಳ ಮೆರವಣಿಗೆ: ಕಲಾ ತಂಡಗಳ ಮೆರವಣಿಗೆಯ ಹಿಂಬದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರವಾಸಿ ತಾಣಗಳ, ಕೃಷಿ ಇಲಾಖೆ, ವಿಮೋಚನಾ ಹೋರಾಟಗಾರರ ವೇಷಧಾರಿಗಳ ಹೊತ್ತ ಸ್ತಬ್ಧ ಚಿತ್ರ ವಾಹನಗಳು ಸಾಗಿದವು.

ಮೆರವಣಿಗೆ ಸಾಗುವ ರಸ್ತೆಯಲ್ಲಿ ಕೆಲಹೊತ್ತು ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು. ಕೆಲಹೊತ್ತು ಸಂಚಾರ ದಟ್ಟಣೆ ಕಂಡುಬಂತು.

ಮೆರವಣಿಗೆ ಚಾಲನೆಯಲ್ಲಿ ಸಂಸದ ಉಮೇಶ ಜಾಧವ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.