ADVERTISEMENT

ಕಲ್ಯಾಣ ಕರ್ನಾಟಕ ಉತ್ಸವ: ಯಡಿಯೂರಪ್ಪ ಇನ್ನೊಬ್ಬ ಉಕ್ಕಿನ ಮನುಷ್ಯ ಎಂದ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:59 IST
Last Updated 17 ಸೆಪ್ಟೆಂಬರ್ 2021, 4:59 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕದ ವಿಮೋಚನೆಗೆ ಕಾರಣರಾದ ಸರ್ದಾರ್‌ ವಲ್ಲಭಭಾಯಿ ಪಟೇಲರು ಪ್ರಥಮ ಉಕ್ಕಿನ ಮನುಷ್ಯರಾದರೆ, ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಬಿ.ಎಸ್‌. ಯಡಿಯೂರಪ್ಪ ಇನ್ನೊಬ್ಬ ಉಕ್ಕಿನ ಮನುಷ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಶುಕ್ರವಾರ ಇಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಯಡಿಯೂರಪ್ಪ ಅವರು ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದಾರೆ. ಹಲವಾರು ಕಾರ್ಯಕ್ರಮಗಳಿಗೂ ಅವರು ರೂವಾರಿಗಳಾಗಿದ್ದಾರೆ. ಅವರ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ. ಜನರ ಜೀವನ ಮಟ್ಟ ಸುಧಾರಿಸುವ ಮೂಲಕ ಕಲ್ಯಾಣ ಕರ್ನಾಟಕ ಹೆಸರಿಗೆ ಸಾರ್ಥಕತೆ ತುಂಬುವ ಛಲದಿಂದ ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನಮ್ಮ ಈ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದರು.

ಸರ್ದಾರ್‌ ವಲ್ಲಭಭಾಯಿ ಪಟೇಲರು ಭಾರತವನ್ನು ರಿಪಬ್ಲಿಕ್‌ ದೇಶವನ್ನಾಗಿ ಮಾಡಿದ ಪ್ರಥಮ ನಾಯಕರು. ಅವರು ನಮಗೆಲ್ಲ ಆದರ್ಶರು. ಅವರು ತೋರಿಸಿರುವ ತತ್ವ– ಆದರ್ಶಗಳ ಅಡಿಯಲ್ಲಿ ಸ್ವತಂತ್ರ ಭಾರತವನ್ನು ನಾವು ಮುನ್ನಡೆ ಮಾಡುತ್ತಿದ್ದೇವೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕತ್ವ ನಮ್ಮ ದೇಶಕ್ಕೆ ಸಿಕ್ಕಿದೆ. ಇಂದು ಅವರ ಜನ್ಮದಿನವೂ ಹೌದು. ನವ ಕರ್ನಾಟಕ ಮತ್ತು ನವ ಭಾರತ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.