ಚಿತ್ತಾಪುರ: ‘ಸಂಪ್ರದಾಯ ಎಂದು ಶಿವಲಿಂಗದ ಮೇಲೆ ಪಾದ ಇಡಬಾರದು. ಲಿಂಗದ ಮೇಲೆ ಪಾದ ಇಟ್ಟು ಪೂಜೆ ಮಾಡಿದ ಘಟನೆಯಿಂದ ಶಿವಭಕ್ತರ ಭಾವನೆಗೆ ಧಕ್ಕೆಯಾಗಿದೆ’ ಎಂದು ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೇಡಂ ತಾಲ್ಲೂಕಿನ ಕಲಕಂಬ ಗ್ರಾಮದಲ್ಲಿ ಶಿವಲಿಂಗ ಪ್ರತಿಷ್ಠಾಪನೆಗೆ ಮುಂಚೆ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಸಿದ್ಧವೀರ ಶಿವಾಚಾರ್ಯರು ಶಿವಲಿಂಗದ ಮೇಲೆ ಪಾದ ಇರಿಸಿ ಪೂಜೆ ಮಾಡಿಸಿಕೊಂಡಿರುವ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದರು.
‘ತಪ್ಪು ಯಾರೇ ಮಾಡಲಿ ಅದು ತಪ್ಪೆ. ಶಿವಲಿಂಗ ಪರಮಾತ್ಮನ ಸ್ವರೂಪ. ಪ್ರತಿಷ್ಠಾಪನೆಗೆ ಮುಂಚೆ ಶಿವಲಿಂಗದ ಶುದ್ಧೀಕರಣ ಹಸ್ತಗಳಿಂದ ಮಾಡಬೇಕೆ ಹೊರತು ಪಾದಗಳಿಂದಲ್ಲ. ಶಿವಭಕ್ತರಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡಿದ್ದು ಅಹಂಕಾರದ ಪ್ರತೀಕ’ ಎಂದು ಹೇಳಿದರು.
‘ದೇವರು ಮತ್ತು ಶಿವಲಿಂಗಕ್ಕಿಂತ ದೊಡ್ಡವರು ಯಾರೂ ಇಲ್ಲ. ಅಂತಹ ಲಿಂಗದ ಮೇಲೆ ಜಗದ್ಗುರುಗಳು ಪಾದ ಇಟ್ಟರೂ ತಪ್ಪೇ ಆಗುತ್ತದೆ. ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಆ ವ್ಯಕ್ತಿ ತನ್ನ ತಂದೆ–ತಾಯಿಗೆ ಮಗನಾಗಿಯೇ ಇರುತ್ತಾನೆ. ಅದೇ ರೀತಿ ಧಾರ್ಮಿಕವಾಗಿ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ದೇವರಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ’ ಎಂದರು.
‘ಶಿವಲಿಂಗದ ಮೇಲೆ ಪಾದ ಇಟ್ಟು ಪೂಜೆ ಮಾಡಿಸಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ರಾಜ್ಯದ ವಿವಿಧ ಭಾಗಗಳಿಂದ ಶಿವಭಕ್ತರು, ಅನೇಕ ಮುಖಂಡರು ನಮಗೆ ದೂರವಾಣಿ ಕರೆ ಮಾಡಿ ಬಹಳ ಕೋಪ ವ್ಯಕ್ತ ಪಡಿಸುತ್ತಿದ್ದಾರೆ’ ಎಂದು ಅವರು ಹೇಳಿದರು.
‘ನಿಮ್ಮಲ್ಲಿ ಕೇಳುವವರು ಹೇಳುವವರು ಯಾರೂ ಇಲ್ಲವೇ ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ. ಶಿವಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಕ್ಕೆ ಆಕ್ರೋಶ ಹೊರಹಾಕುತ್ತಿದ್ದಾರೆ. ಪಾದಪೂಜೆ ಮಾಡಿಸಿಕೊಂಡವರನ್ನೇ ಕೇಳಿರಿ ಎಂದು ನಾವು ಶಿವಭಕ್ತರಿಗೆ ಉತ್ತರಿಸಿದ್ದೇವೆ. ಘಟನೆಯಿಂದ ನಮ್ಮ ಭಾಗಕ್ಕೆ ಧಾರ್ಮಿಕವಾಗಿ ಕೆಟ್ಟ ಹೆಸರು ಬಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.