ವಾಡಿ: ‘ಜಾತಿ, ಧರ್ಮಗಳ ಕಿತ್ತಾಟ ನಡೆಸುತ್ತ, ಸಂಕುಚಿತ ಭಾವದಲ್ಲಿ ಬದುಕುತ್ತಿರುವ ಇಂದಿನ ಸಮಾಜಕ್ಕೆ ಕುಲಪಂಥ ಮೀರಿದ ವ್ಯಕ್ತಿತ್ವ ತನ್ನದಾಗಿಸಿಕೊಂಡ ಭಕ್ತ ಕನಕದಾಸರು ಆದರ್ಶದ ಬೆಳಕಾಗಿದ್ದಾರೆ’ ಎಂದು ರಾವೂರು ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸಿದ್ದಲಿಂಗೇಶ್ವರ ಸಂಸ್ಥಾನಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇತಿಹಾಸದ ಪುಟ ಸೇರಿದ ಶರಣರು, ಸಂತರು, ಸೂಫಿಗಳು ಜಾತಿ, ಧರ್ಮಗಳೇ ಇಲ್ಲದ ಸುಂದರ ಸಮಾಜದ ಕನಸು ಕಂಡಿದ್ದರು’ ಎಂದರು.
‘ಕನಕದಾಸರು ಜಾತಿ, ಮತ, ಪಂಥಗಳನ್ನು ಮೀರಿ ಬೆಳೆದವರಾಗಿದ್ದು, ಇಂದು ಜಾತಿ, ಮತಕ್ಕೆ ಸೀಮಿತಗೊಳಿಸುವ ಪ್ರಯತ್ನ ಆಗಬಾರದು. ತಮ್ಮ ಕೀರ್ತನೆಗಳ ಮೂಲಕ ಸಮಾಜ ಎಚ್ಚರಿಸುವ ಕಾರ್ಯ ಕನಕದಾಸರು ಮಾಡಿದ್ದರು’ ಎಂದು ಹೇಳಿದರು.
ಶಿಕ್ಷಕ ಸಿದ್ದಲಿಂಗ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಡಾ. ಗುಂಡಣ್ಣ ಬಾಳಿ, ಚನ್ನಣ್ಣ ಬಾಳಿ, ಮಲ್ಲಿನಾಥ ತುಮಕೂರ, ಶಿವಶರಣಪ್ಪ ಕೊಳ್ಳಿ, ಸಾಹೇಬಗೌಡ ತುಮಕೂರ, ಅಶೋಕ ವಗ್ಗರ, ಸಂಗಮೇಶ ಪೂಜಾರಿ, ನಿಂಗಣ್ಣ ಕೊಳ್ಳಿ, ಭೀಮು ಮದಗುಣಕಿ, ಚಂದ್ರು ಕೊಳ್ಳಿ, ಶಿವು ಕಂಠಿಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.