ADVERTISEMENT

ಕನ್ಹಯ್ಯಕುಮಾರ್‌ ಉಪನ್ಯಾಸಕ್ಕೆ ಷರತ್ತುಬದ್ಧ ಅನುಮತಿ

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಗುಲಬರ್ಗಾ ವಿ.ವಿ. ಸಿಂಡಿಕೇಟ್‌ ಸದಸ್ಯರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 19:30 IST
Last Updated 14 ಅಕ್ಟೋಬರ್ 2019, 19:30 IST
ಕನ್ಹಯ್ಯಕುಮಾರ್‌ ಉಪನ್ಯಾಸಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ನೇತೃತ್ವದಲ್ಲಿ ಸಿಂಡಿಕೇಟ್‌ ಸಭೆ ನಡೆದ ಸಭಾಂಗಣದ ಎದುರು ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಕನ್ಹಯ್ಯಕುಮಾರ್‌ ಉಪನ್ಯಾಸಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ನೇತೃತ್ವದಲ್ಲಿ ಸಿಂಡಿಕೇಟ್‌ ಸಭೆ ನಡೆದ ಸಭಾಂಗಣದ ಎದುರು ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಸಿಂಡಿಕೇಟ್‌ ಸದಸ್ಯರು ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮಾಜಿ ನಾಯಕ, ಸಿಪಿಐ ಸದಸ್ಯ ಕನ್ಹಯ್ಯಕುಮಾರ್‌ ಅವರಿಗೆ ಇದೇ 15ರಂದು ಉಪನ್ಯಾಸ ನೀಡಲು ಷರತ್ತುಬದ್ಧ ಅನುಮತಿ ನೀಡಿತು.

ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಡಾ.ಬಿ.ಆರ್‌.ಅಂಬೇಡ್ಕರ್‌ರವರು ಕಂಡ ಆಧುನಿಕ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ’ ವಿಷಯ ಕುರಿತು ಅವರು ಮಾತನಾಡಲಿದ್ದಾರೆ.

ಕಾರ್ಯಕ್ರಮ ನಿಗದಿಯಾಗುತ್ತಿದ್ದಂತೆಯೇ ಬಿಜೆಪಿ ಮುಖಂಡರು ಹಾಗೂ ಶ್ರೀರಾಮಸೇನೆ ಸದಸ್ಯರು ಕನ್ಹಯ್ಯಕುಮಾರ್‌ ಭಾಷಣಕ್ಕೆ ಅವಕಾಶ ನೀಡಕೂಡದು ಎಂದು ವಿ.ವಿ. ಕುಲಪತಿಗಳನ್ನು ಒತ್ತಾಯಿಸಿದ್ದರು. ಕಾರ್ಯಕ್ರಮ ನಡೆಸಿಯೇ ಸಿದ್ಧ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಹೀಗಾಗಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಸೋಮವಾರ ತುರ್ತು ಸಿಂಡಿಕೇಟ್‌ ಸಭೆ ನಡೆಸಿದರು. ಸಭೆ ನಡೆಯುವ ಮಾಹಿತಿ ಪಡೆದ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ವಿ.ವಿ.ಯ ಆಡಳಿತ ಕಚೇರಿಗೆ ಧಾವಿಸಿ ಪ್ರತಿಭಟನೆ ನಡೆಸಲು ಆರಂಭಿಸಿದರು. ಒಳಗೆ ಸಭೆ ನಡೆಯುತ್ತಿದ್ದರೆ ಹೊರಗೆ ವಿದ್ಯಾರ್ಥಿಗಳು ಘೋಷಣೆ ಕೂಗಲಾರಂಭಿಸಿದರು.

ADVERTISEMENT

ಒಂದೂವರೆ ತಾಸಿಗಿಂತ ಅಧಿಕ ಸಮಯ ನಡೆದ ಸಿಂಡಿಕೇಟ್ ಸಭೆಯಲ್ಲಿ ಕೆಲ ಷರತ್ತುಗಳನ್ನು ವಿಧಿಸಿ ಉಪನ್ಯಾಸಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಿತು. ಸಭೆಯ ನಿರ್ಣಯವನ್ನು ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಗಮನಕ್ಕೆ ತಂದರು.

ಷರತ್ತುಗಳೇನು? ಕನ್ಹಯ್ಯಕುಮಾರ್‌ ತಮಗೆ ವಹಿಸಿದ ವಿಷಯದ ಕುರಿತು ಮಾತ್ರ ಮಾತನಾಡಬೇಕು. ಯಾವುದೇ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಬಾರದು. ವಿದ್ಯಾರ್ಥಿಗಳನ್ನು ಯಾರ ವಿರುದ್ಧವೂ ಎತ್ತಿಕೊಟ್ಟುವಂತಹ ಪ್ರಚೋದನಾತ್ಮಕ ಮಾತುಗಳನ್ನಾಡಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಈ ಷರತ್ತುಗಳನ್ನು ಪಾಲಿಸುವುದಾಗಿ ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಒಪ್ಪಿಕೊಂಡಿದ್ದಾರೆ ಎಂದು ಪ್ರೊ.ಪರಿಮಳಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.