ADVERTISEMENT

ಕೆನಡಾದಲ್ಲಿ ಕನ್ನಡದ ಕಂಪು...

ವ್ಯಾಂಕೋವರ್ ಕನ್ನಡ ಕೂಟದಲ್ಲಿ ಇಂದು 1100 ಸದಸ್ಯರು; ಕಲಬುರಗಿಯ‘ವರೂ ಸಕ್ರಿಯ

ಮನೋಜ ಕುಮಾರ್ ಗುದ್ದಿ
Published 1 ಮೇ 2022, 4:51 IST
Last Updated 1 ಮೇ 2022, 4:51 IST
ಕೆನಡಾದ ವ್ಯಾಂಕೋವರ್‌ ಕನ್ನಡ ಕೂಟದಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡಿಗರು
ಕೆನಡಾದ ವ್ಯಾಂಕೋವರ್‌ ಕನ್ನಡ ಕೂಟದಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡಿಗರು   

ಕಲಬುರಗಿ:ಕೆನಡಾದ ವ್ಯಾಂಕೋವರ್‌ನಲ್ಲಿ ಕನ್ನಡದ ಕಂಪು ಹರಡುತ್ತಿದೆ. ಭಾಷೆಯನ್ನು ಬೆಳೆಸುವ ಕೈಂಕರ್ಯದಲ್ಲಿ ತೊಡಗಿರುವವರಲ್ಲಿ ಕಲಬುರಗಿ ಜಿಲ್ಲೆಯವರೂ ಇರುವುದು ವಿಶೇಷ.

ಸಾಫ್ಟ್‌ವೇರ್ ಕ್ಷೇತ್ರವು ಬೆಳೆಯುತ್ತಿದ್ದಂತೆಯೇ ವಿದೇಶಗಳಿಗೆ ವಲಸೆ ಆರಂಭವಾಯಿತು. ಹಲವರು ಅಮೆರಿಕಕ್ಕೆ ತೆರಳಿದರೆ, ಇನ್ನು ಕೆಲವರು ಅಮೆರಿಕದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕೆನಡಾಕ್ಕೆ ವಲಸೆ ಹೋಗಿದ್ದಾರೆ. ಪಾಶ್ಚಿಮಾತ್ಯರ ಆಚರಣೆಗಳನ್ನು ನೋಡುತ್ತಲೇ ತಮ್ಮದೇ ನಾಡಿನ ಭಾಷೆ, ಹಬ್ಬ, ಹರಿದಿನಗಳನ್ನು ಉಳಿಸಿಕೊಂಡು ಹೋಗುವ ಬಗ್ಗೆ ಯೋಚನೆ ಬಂದಿದ್ದೇ ತಡ ಕೆನಡಾದ ಪ್ರಮುಖ ರಾಜ್ಯವಾದ ವ್ಯಾಂಕೋವರ್‌ನಲ್ಲಿ ಕನ್ನಡ ಕೂಟವನ್ನು (ವಿಕೆಕೆ) ಆರಂಭಿಸಿದರು.

ವ್ಯಾಂಕೋವರ್ ಎಂಬುದು ಕೆನಡಾದ ಪ್ರಮುಖ ರಾಜ್ಯವಾಗಿದ್ದು, ಸರ್ರೆ, ಲಂಗ್ಲೆ ಅಬೋಟ್ಸ್‌ಫೋರ್ಡ್‌, ರಿಚ್ಮಂಡ್ ಸೇರಿದಂತೆ ಹಲವು ನಗರಗಳಿವೆ. ಒಂದು ನಗರದಿಂದ ಇನ್ನೊಂದಕ್ಕೆ ಸುಮಾರು 40ರಿಂದ 45 ಕಿ.ಮೀ. ದೂರವಿದ್ದು, ಯುಗಾದಿ, ಹೋಳಿ ಹಬ್ಬ, ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಕ್ರಮ ಆಚರಿಸುತ್ತಾರೆ.

ADVERTISEMENT

ಇದರಲ್ಲಿ ಕಲಬುರಗಿ ಜಿಲ್ಲೆಯ ಶ್ರೀನಿವಾಸ ಹುಲಸಗೂಡ ಅವರ ಕುಟುಂಬವೂ ಸರ್ರೆ ಪಟ್ಟಣದಲ್ಲಿ ನೆಲೆಸಿದ್ದು, ಅವರು ವ್ಯಾಂಕೋವರ್ ಕನ್ನಡ ಕೂಟದಲ್ಲಿ ಸಕ್ರಿಯರಾಗಿದ್ದಾರೆ. ಕೆಲವೇ ಕೆಲವರಿಂದ ಆರಂಭವಾದ ಕೂಟದಲ್ಲಿ ಇಂದು 1100ಕ್ಕೂ ಅಧಿಕ ಸದಸ್ಯರಿದ್ದಾರೆ.

ಕನ್ನಡ ಶಾಲೆ: ವಿದೇಶದಲ್ಲಿದ್ದರೂ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಬೇಕು ಎಂಬ ಉದ್ದೇಶದಿಂದ ವ್ಯಾಂಕೋವರ್ ಕನ್ನಡ ಕೂಟದಿಂದಲೇ ಇದೀಗ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿದ್ದಾರೆ. ವಾರದಲ್ಲಿ ಇಂತಿಷ್ಟು ಗಂಟೆಯ ಕಾಲ ಮಕ್ಕಳು ಆ ಶಾಲೆಗೆ ಕಲಿಯಲು ಹೋಗುತ್ತಾರೆ. ಕೂಟದಿಂದಲೇ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ಶಾಲೆ ಆರಂಭವಾದ ಬಗ್ಗೆ ವ್ಯಾಂಕೋವರ್ ರಾಜ್ಯದಾದ್ಯಂತ ಪ್ರಚಾರ ಮಾಡಲಾಗಿದೆ ಎನ್ನುತ್ತಾರೆ ಶ್ರೀನಿವಾಸ ಹುಲಸಗೂರ.

ಕೂಟದ ಸದಸ್ಯರು: ಕಳೆದ 20 ವರ್ಷಗಳಿಂದ ವಿಕೆಕೆ ಸಕ್ರಿಯವಾಗಿದ್ದು, ಇತ್ತೀಚೆಗೆ ಹೆಚ್ಚು ಹೆಚ್ಚು ಕನ್ನಡಿಗರು ಅಲ್ಲಿ ನೆಲೆಸುತ್ತಿರುವುದರಿಂದ ಸದಸ್ಯರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಕರ್ನಾಟಕದವರೇ ಆದ ಅನಂತಕೃಷ್ಣ ಭಟ್, ಪ್ರಸಾದ್ ಹೆಬ್ಬಾಳೆ, ಮುರಳಿ ಕುಲಕರ್ಣಿ, ರವೀಂದ್ರ ಉಪಾಧ್ಯೆ, ಜಯದೇವ ಉಪ್ಪಿನ, ಗಿರೀಶ ಚಂದ್ರ, ಅನಂತನಾರಾಯಣ, ಮಮತಾ ನಾಗರಾಜ, ಜಯಲಕ್ಷ್ಮಿ ರವೀಂದ್ರ, ಅನೀಶ್ ಸೇರಿದಂತೆ ಹಲವರು ಕೂಟದಲ್ಲಿದ್ದು, ನಿರಂತರವಾಗಿ ಕನ್ನಡ ನೆಲದ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿದ್ದಾರೆ.

ಕೂಟದ ಬೆಳವಣಿಗೆ ಕುರಿತು ಮಾಹಿತಿ ನೀಡಿದ ಶ್ರೀನಿವಾಸ ಹುಲಸಗೂಡ, ‘ತಾಯ್ನೆಲದಿಂದ ಸಾವಿರಾರು ಕಿ.ಮೀ. ದೂರದಲ್ಲಿರುವುದರಿಂದ ಒಂದು ಬಗೆಯ ಏಕತಾನತೆ ಕಾಡುತ್ತಿತ್ತು. ಇದೀಗ ಕನ್ನಡದವರೇ ಇಲ್ಲಿ ಸಿಕ್ಕಿದ್ದರಿಂದ ಸಾಕಷ್ಟು ಅನುಕೂಲವೇ ಆಗಿದೆ. ಮುಂಚೆ ನಾನು ಅಮೆರಿಕದಲ್ಲಿದ್ದೆ. ಕೆನಡಾಕ್ಕೆ ಬಂದ ಹೊಸತರಲ್ಲಿ ಇಲ್ಲಿನ ವಲಸೆ ನೀತಿ, ವೀಸಾ ಬಗ್ಗೆ ಮಾಹಿತಿ ಇರಲಿಲ್ಲ. ಕನ್ನಡದವರೇ ನನಗೆ ಸಹಾಯ ಮಾಡಿದರು. ಇಲ್ಲಿ ದೇವಸ್ಥಾನಗಳೂ ಇದ್ದು, ಅಲ್ಲಿನ ಅಡುಗೆ ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳು ಇದ್ದಾಗ ಅಡುಗೆ ಮಾಡಿಸುತ್ತೇವೆ. ಭಾರತೀಯರು, ಅದರಲ್ಲೂ ಪಂಜಾಬ್‌ನವರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಕೆನಡಾ ಸರ್ಕಾರವೂ ನಮಗೆ ಅಗತ್ಯ ಸಹಕಾರ ನೀಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.