ADVERTISEMENT

‘ಕನ್ನಡ ಬಳಸದಿದ್ದರೆ ಶಿಸ್ತು ಕ್ರಮ’

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಾಕೀತು

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 13:29 IST
Last Updated 19 ಜನವರಿ 2021, 13:29 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನ್ನಡ ಅನುಷ್ಠಾನ ಕುರಿತ ಪರಿಶೀಲನಾ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿದರು. ಕಾರ್ಯದರ್ಶಿ ಮುರಳಿಧರ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಇದ್ದರು
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನ್ನಡ ಅನುಷ್ಠಾನ ಕುರಿತ ಪರಿಶೀಲನಾ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿದರು. ಕಾರ್ಯದರ್ಶಿ ಮುರಳಿಧರ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಇದ್ದರು   

ಕಲಬುರ್ಗಿ: ಎಲ್ಲ ಇಲಾಖೆಗಳ ಆದೇಶಗಳು, ಸುತ್ತೋಲೆಗಳು ಕನ್ನಡದಲ್ಲಿಯೇ ಇರುವಂತೆ ಗಮನ ಹರಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಅನಿವಾರ್ಯವಾಗಲಿದೆ. ಮೊದಲ ಬಾರಿಗೆ ಉಲ್ಲಂಘಿಸಿದರೆ ವಾಗ್ದಂಡನೆ, ಎರಡನೇ ಬಾರಿಯ ತಪ್ಪಿಗೆ ವೇತನ ಹೆಚ್ಚಳಕ್ಕೆ ತಡೆ, ಮೂರನೇ ಬಾರಿ ನಿಯಮ ಉಲ್ಲಂಘನೆಗೆ ಹಿಂಬಡ್ತಿ ನೀಡಲು ಶಿಫಾರಸು ಮಾಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಎಚ್ಚರಿಕೆ ನೀಡಿದರು.

ಮಂಗಳವಾರ ಇಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವಿಧ ಇಲಾಖೆಗಳ ಮುಖ್ಯಸ್ಥರಾಗಿದ್ದು, ಕನ್ನಡ ಬಳಕೆಯ ಅನುಷ್ಠಾನದ ಬಗ್ಗೆ ಖುದ್ದು ಪರಿಶೀಲನೆ ನಡೆಸಬೇಕು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 2020ರ ನವೆಂಬರ್‌ 1ರಿಂದ 2021ರ ಅಕ್ಟೋಬರ್‌ 31ರವರೆಗೆ ಕನ್ನಡ ಕಾಯಕ ವರ್ಷವನ್ನಾಗಿ ಆಚರಿಸಲು ಸೂಚನೆ ನೀಡಿದ್ದಾರೆ. ಸರ್ಕಾರದ ಎಲ್ಲ ಕಚೇರಿಗಳು, ಬ್ಯಾಂಕುಗಳು, ಕೈಗಾರಿಕೆಗಳು, ಆಸ್ಪತ್ರೆಗಳು, ವೈದ್ಯಕೀಯ ವಿಜ್ಞಾನ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು’ ಎಂದರು.

ADVERTISEMENT

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ವಹಿಸುತ್ತಿರುವ ಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು. ಎರಡು ಮೂರು ಕಡೆಗಳಲ್ಲಿ ಈ ನಿಯಮ ಉಲ್ಲಂಘನೆಯಾಗಿದೆ’ ಎಂದು ನಾಗಾಭರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

‘ಉರ್ದು ಮಾಧ್ಯಮ ಶಾಲೆಗಳಲ್ಲಿಯೂ ಎರಡನೇ ಭಾಷೆಯಾಗಿ ಕನ್ನಡ ಕಲಿಸಬೇಕು ಎಂಬ ನಿಯಮವಿದೆ. ಆದರೆ ಕನ್ನಡ ಶಿಕ್ಷಕರಿಲ್ಲ ಎಂಬ ಕಾರಣಕ್ಕೆ ಕನ್ನಡ ಬೋಧನೆ ಆಗುತ್ತಿಲ್ಲ ಎಂಬ ಆರೋಪಗಳಿವೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಕೇಂದ್ರೀಯ ಪಠ್ಯಕ್ರಮವಿರುವ ಶಾಲೆಗಳ ಫಲಕಗಳಲ್ಲಿ ಕನ್ನಡದಲ್ಲಿ ಬರೆದಿಲ್ಲ ಎಂದು ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯರು ಮಾಹಿತಿ ನೀಡಿದ್ದಾರೆ. 2018ರಲ್ಲಿ ಅಂತಹ ಶಾಲೆಗಳಿಗೆ ಅಂದಿನ ಡಿಡಿಪಿಐ ನೋಟಿಸ್‌ ಜಾರಿಗೊಳಿಸಿದ್ದರು. ಮುಂದೇನಾಯಿತು ಎಂಬ ಮಾಹಿತಿ ಕೊಡಿ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಮುರಳಿಧರ ಅವರು ಡಿಡಿಪಿಐ ಎಸ್‌.ಪಿ. ಬಾಡಗಂಡಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ, ‘ನೋಟಿಸ್ ನೀಡಿದ ನಂತರ ಏನಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಮೂರು ದಿನಗಳಲ್ಲಿ ಪ್ರಾಧಿಕಾರಕ್ಕೆ ವರದಿ ನೀಡುತ್ತೇನೆ’ ಎಂದರು.

‘ಪೊಲೀಸರು ದಾಖಲಿಸಿರುವ ಪ್ರಕರಣದ ಮಾಹಿತಿ ಕನ್ನಡದಲ್ಲಿದ್ದರೂ ಅದರ ಮೇಲೆ ಪೊಲೀಸ್‌ ಅಧಿಕಾರಿ ಬರೆಯುವ ಸೂಚನೆ ಇಂಗ್ಲಿಷ್‌ನಲ್ಲಿರುವ ಬಗ್ಗೆ ದೂರುಗಳು ಬಂದಿವೆ. ಕಡ್ಡಾಯವಾಗಿ ಕನ್ನಡದಲ್ಲೇ ಬರೆಯಬೇಕು’ ಎಂದು ಸಭೆಯಲ್ಲಿದ್ದ ಡಿಸಿಪಿ (ಅಪರಾಧ ಮತ್ತು ಸಂಚಾರ) ಶ್ರೀಕಾಂತ ಕಟ್ಟಿಮನಿ ಅವರಿಗೆ ಸೂಚಿಸಿದರು.

ಕನ್ನಡದಲ್ಲೇ ಮರಣೋತ್ತರ ಪರೀಕ್ಷೆ ವರದಿ

ಕನ್ನಡ ಬಳಕೆ ಬಗ್ಗೆ ನಡೆದ ಚರ್ಚೆಗೆ ದನಿಗೂಡಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಂಬಾರಾಯ ರುದ್ರವಾಡಿ ಅವರು ತಾವು ಕನ್ನಡದಲ್ಲೇ ಮರಣೋತ್ತರ ಪರೀಕ್ಷೆಯ ವರದಿಯನ್ನು ಸಲ್ಲಿಸಿರುವುದಾಗಿ ತಿಳಿಸಿದರು. ಮೊದಲಿನಿಂದಲೇ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಕನ್ನಡದಲ್ಲೇ ವ್ಯವಹರಿಸುತ್ತಿದ್ದೇವೆ ಎಂದರು.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಹಾಗೂ ಕಾರ್ಯದರ್ಶಿ ಮುರಳಿಧರ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರುದ್ರವಾಡಿ, ‘ಬರೆದುಕೊಡಬಹುದು. ಆದರೆ, ಅದು ಔಷಧಿ ಅಂಗಡಿಯವರಿಗೆ ಅರ್ಥವಾಗುವುದಿಲ್ಲ’ ಎಂದರು.

‘ಅಂಗಡಿಯವರಿಗೆ ಔಷಧಿ ಮಾರಾಟ ಅನಿವಾರ್ಯವಾಗಿರುವುದರಿಂದ ಅವರು ಅರ್ಥ ಮಾಡಿಕೊಳ್ಳುತ್ತಾರೆ. ಕನ್ನಡದಲ್ಲಿ ಬರೆದರೆ ರೋಗಿಗಳಿಗೆ ಅನುಕೂಲವಾಗಲಿದೆ. ಒಮ್ಮೆ ವೈದ್ಯರು ಕನ್ನಡದಲ್ಲಿ ಚೀಟಿ ಬರೆದುಕೊಟ್ಟರೆ ಆ ವ್ಯಕ್ತಿ ಮತ್ತೆ ವೈದ್ಯರ ಬಳಿ ಹೋಗುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.