ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಕಲಬುರಗಿಯಲ್ಲಿ ಶನಿವಾರ ಜಿಲ್ಲಾ ಮಾಜಿ ಸೈನಿಕರ ಅಭಿವೃದ್ಧಿ ಪರ ಸಂಘ, ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಯುವಕರು ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಸಿದರು
ಪ್ರಜಾವಾಣಿ ಚಿತ್ರ
ಕಲಬುರಗಿ: ನಗರದ ವಿವಿಧೆಡೆ ಶನಿವಾರ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಪಥಸಂಚನ, ಯೋಧರ ಸನ್ಮಾನ ಕಾರ್ಯಕ್ರಮ ನಡೆದವು. ಯೋಧರ ತ್ಯಾಗ, ಬಲಿದಾನದ ಸ್ಮರಣೆ ಮಾಡಲಾಯಿತು.
ಎನ್.ವಿ ಪದವಿ ಮಹಾವಿದ್ಯಾಲಯ: ‘ಭಾರತ ವೈವಿಧ್ಯಮಯ ಸಂಸ್ಕೃತಿಯುಳ್ಳ ರಾಷ್ಟ್ರ. ಈ ವೈವಿಧ್ಯತೆ ನಮ್ಮ ಶಕ್ತಿಯಾಗಬೇಕೆ ಹೊರತು ದೌರ್ಬಲ್ಯವಾಗಬಾರದು. ನಮಗೆ ನಮ್ಮ ಜಾತಿ, ಮತ, ಪಂಥಗಳಿಗಿಂತ ದೇಶ ಮೊದಲಾಗಬೇಕು’ ಎಂದು ನಿವೃತ್ತ ಯೋಧ ಅಶೋಕ ಜಿ. ಕುಲಕರ್ಣಿ ಹೇಳಿದರು.
ನಗರದ ಎನ್.ವಿ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 'ಕಾರ್ಗಿಲ್ ವಿಜಯ ದಿವಸ' ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚಾರ್ಯ ದಯಾನಂದ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಗೋವಿಂದ ಪೂಜಾರ, ಉಪಪ್ರಾಚಾರ್ಯ ಗುರುಮಧ್ವ ನವಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಯಾಕುಬ್, ಬಾಬುರಾವ್ ಹಾಗೂ ಶ್ರೀಕಾರ ಅನಿಸಿಕೆ ವ್ಯಕ್ತಪಡಿಸಿದರು. ರಾಜೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು. ಮಲ್ಲಿನಾಥ ಎಸ್. ತಳವಾರ ಸ್ವಾಗತಿಸಿದರು. ವಿಷ್ಣು ಗುಂಡಗುರ್ಕಿ ನಿರೂಪಿಸಿದರು. ಮಹೇಶಕುಮಾರ ಬಡಿಗೇರ ವಂದಿಸಿದರು.
ಎಸ್‌ಆರ್‌ಎನ್ ಮೆಹತಾ ಸ್ಟೇಟ್ ಶಾಲೆ: ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸವನ್ನು ರಾಷ್ಟ್ರಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಈ ವೇಳೆ 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕಾಗಿ ಜೀವ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ದೇಶಭಕ್ತಿ ನೃತ್ಯದ ಮೂಲಕ ಯೋಧರ ಬಲಿದಾನವನ್ನು ಸ್ಮರಿಸಿದರು. ಶಾಲೆಯ ವ್ಯವಸ್ಥಾಪಕ ಟ್ರಸ್ಟಿ ಚಕೋರ್ ಮೆಹತಾ, ವ್ಯವಸ್ಥಾಪಕ ನಿರ್ದೇಶಕ ಪ್ರೀತಮ್ ಮೆಹತಾ ಹಾಗೂ ಪ್ರಾಂಶುಪಾಲರಾದ ಪ್ರೀತಿ ಮೆಹತಾ ಉಪಸ್ಥಿತರಿದ್ದರು.
ಬಿಜೆಪಿ ಕೆಚೇರಿ: ನಗರದ ಬಿಜೆಪಿ ಕೆಚೇರಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ಆಳಂದ ಸೈನಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಮಲಶೆಟ್ಟಿ, ನಿವೃತ್ತ ಯೋಧ ಶಿವರಾಜ್ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಮೇಶ್ ಪಾಟೀಲ, ಮಹಾದೇವ ಬೆಳಮಗಿ, ಶರಣು ಸಜ್ಜನ್, ರಾಜು ದೇವದುರ್ಗ, ಶ್ರೀನಿವಾಸ ದೇಸಾಯಿ, ಶಾಂತು ದುದನಿ, ಮಹೇಶ್ ಚವ್ಹಾಣ, ಶಿವಲಿಂಗ ಪಾಟೀಲ, ಪ್ರೀತಂ ಪಾಟೀಲ, ಉದಯ ರಶ್ಮಿ, ಗೋಪಾಲ್ ಕೃಷ್ಣ, ಶಿವು ಅಷ್ಟಗಿ ಉಪಸ್ಥಿತರಿದ್ದರು.
ರಾಷ್ಟ್ರಧ್ವಜದೊಂದಿಗೆ ಸಂಭ್ರಮ: ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ಮತ್ತು ಜೆ.ಆರ್. ನಗರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದ ವತಿಯಿಂದ ಕಾರ್ಗಿಲ್ ವಿಜಯ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕ ಶಿವಶರಣಪ್ಪ ಎಸ್.ತಾವರಖೇಡ್, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಕ್ಸಸ್ ಕೇಂದ್ರದ ಅಧ್ಯಕ್ಷ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಮುಸ್ಕಾನ್ ಶೇಖ್, ಕಾವೇರಿ ಹೌದೆ, ಪೂಜಾ ಹೂಗಾರ, ಭಾಗ್ಯಶ್ರೀ ಕಾರಬಾರಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಮಾಜಿ ಸೈನಿಕರ ಸಂಘದಿಂದ ಪಥಸಂಚಲನ
ಕಾರ್ಗಿಲ್ ವಿಜಯೋತ್ಸವ ಆಚರಣೆ ಪ್ರಯುಕ್ತ ಕಲಬುರಗಿ ಜಿಲ್ಲೆ ಮಾಜಿ ಸೈನಿಕರ ಅಭಿವೃದ್ಧಿ ಪರ ಸಂಘದ ನೇತೃತ್ವದಲ್ಲಿ ನಗರದ ಸುಭಾಷಚಂದ್ರ ಬೋಸ್ ಪ್ರತಿಮೆಯಿಂದ ಜಗತ್ ವೃತ್ತದವರೆಗೆ ಪಥಸಂಚಲನ ನಡೆಯಿತು. ಸಂಜೆ ಆಳಂದ ರಸ್ತೆಯ ಡಿ.ಲೆ.ಪಾಟೀಲ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.