ADVERTISEMENT

ಸರ್ಕಾರದಿಂದ ಒಟಿಟಿ | ಕಲಬುರಗಿಯಲ್ಲಿ ಫಿಲಂ ಸಿಟಿ: ಮೆಹಬೂಬ್ ಪಾಶಾ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:30 IST
Last Updated 21 ಡಿಸೆಂಬರ್ 2025, 6:30 IST
   

ಕಲಬುರಗಿ: ‘ರಾಜ್ಯ ಸರ್ಕಾರದಿಂದ ಶೀಘ್ರದಲ್ಲಿಯೇ ಒಟಿಟಿ (ಓವರ್-ದಿ-ಟಾಪ್) ವೇದಿಕೆ ಪ್ರಾರಂಭಿಸಲಾಗುತ್ತಿದ್ದು, ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲೂ ಫಿಲಂ ಸಿಟಿ ಶುರುವಾಗಲಿವೆ’ ಎಂದು ಕಂಠೀರವ ಸ್ಟೂಡಿಯೋಸ್ ನಿಯಮಿತದ ಅಧ್ಯಕ್ಷ ಮೆಹಬೂಬ್ ಪಾಶಾ ತಿಳಿಸಿದರು.

ಶನಿವಾರ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕನ್ನಡ ಚಲನಚಿತ್ರಗಳ ಪ್ರದರ್ಶನ, ಉಳಿವು ಮತ್ತು ಬೆಳವಣಿಗೆ, ಕಲಾವಿದರಿಗೆ ಅವಕಾಶ ಹಾಗೂ ನಿರುದ್ಯೋಗ ಹೋಗಲಾಡಿಸಲು ರಾಜ್ಯ ಸರ್ಕಾರದಿಂದ ಒಟಿಟಿ ಪ್ರಾರಂಭಿಸಲಾಗುತ್ತಿದೆ. ಕಲಾವಿದರು, ಪ್ರವಾಸೋದ್ಯಮ, ವಾಣಿಜ್ಯೋದ್ಯಮಕ್ಕೆ ಪ್ರೋತ್ಸಾಹ ನೀಡುವುದು ಮುಖ್ಯ ಉದ್ದೇಶ. ಕಲಬುರಗಿಯಲ್ಲಿ 50 ಎಕರೆ ಜಾಗ ಕೇಳಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ತೋರಿ, ಪರಿಶೀಲಿಸುವುದಾಗಿ ಹೇಳಿದ್ದಾರೆ. ಇನ್ನೊಂದು ತಿಂಗಳಲ್ಲಿ ಹೇಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ’ ಎಂದರು.

‘ಕನ್ನಡವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು ಇದರ ಉದ್ದೇಶ. ಖಾಸಗಿ ಒಟಿಟಿಗಳಲ್ಲಿ ಪ್ರದರ್ಶನ ಕಂಡ ಸಿನಿಮಾಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಸರ್ಕಾರದ ಒಟಿಟಿಯಲ್ಲಿ ಕಲಾತ್ಮಕ ಸೇರಿದಂತೆ ಎಲ್ಲ ಚಲನಚಿತ್ರಗಳಿಗೂ ಅವಕಾಶ ಇರಲಿದೆ. ಕೇರಳ ಸರ್ಕಾರದಿಂದ ಈಗಾಗಲೇ ಸಿಸ್ಪೇಸ್‌ ಮತ್ತು ಕೇಂದ್ರ ಸರ್ಕಾರದಿಂದಲೂ ಒಟಿಟಿ ಶುರುವಾಗಿದೆ. ಕರ್ನಾಟಕ ರಾಜ್ಯ ಸರ್ಕಾರದಿಂದ 2026ರ ಫೆಬ್ರವರಿಯಲ್ಲಿ ಒಟಿಟಿ ಶುರುವಾಗುವ ಸಾಧ್ಯತೆ ಇದೆ. ಯುವಕರು, ಕಲಾವಿದರು, ಆಸಕ್ತಿ ಇರುವವರಿಗೆ ಅವಕಾಶ ನೀಡುವುದು ನಮ್ಮ ಪ್ರಯತ್ನ’ ಎಂದು ಅವರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.