ADVERTISEMENT

ನದಿ ತೀರದ ಹಳ್ಳಿಗಳಲ್ಲಿ ತಲಾ 15 ಯುವಕರ ತಂಡ

ಪ್ರವಾಹ ಸಂದರ್ಭದಲ್ಲಿ ರಕ್ಷಣೆಗೆ ಧಾವಿಸಲು ಸ್ಥಳೀಯ ಈಜುಗಾರರಿಗೆ ತರಬೇತಿ: ಜಿಲ್ಲಾಧಿಕಾರಿ ಜ್ಯೋತ್ಸ್ನಾ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 3:36 IST
Last Updated 19 ಜೂನ್ 2021, 3:36 IST
ಜ್ಯೋತ್ಸ್ನಾ
ಜ್ಯೋತ್ಸ್ನಾ   

ಕಲಬುರ್ಗಿ: ‘ಪ್ರವಾಹ ಬಂದ ಹೊತ್ತಿನಲ್ಲಿ ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿ ರಕ್ಷಣೆ ಮಾಡುವ ಸಲುವಾಗಿ ಪ್ರತಿಯೊಂದು ಹಳ್ಳಿಯಲ್ಲಿ 15 ಈಜುಗಾರ ಯುವಕರನ್ನು ಸಿದ್ಧಗೊಳಿಸಲಾಗುವುದು. ಇವರಿಗೆ ವಿವಿಧ ಇಲಾಖೆಗಳಿಂದ ಸೂಕ್ತ ತರಬೇತಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

‘ಜಿಲ್ಲೆಯಲ್ಲಿ ಕಳೆದ ಬಾರಿ ಪ್ರವಾಹದಿಂದ ಉಂಟಾದ ಹಾನಿ, ಸಂಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲಾಡಳಿತ ಈ ಉಪಾಯ ಮಾಡುತ್ತಿದೆ. ಜನರ ಪ್ರಾಣ ರಕ್ಷಣೆ ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಸ್ಥಳೀಯ ಯುವಕರನ್ನೇ ಸಜ್ಜುಗೊಳಿಸಲಾಗುತ್ತದೆ. ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತಲುಪುವುದು ತಡವಾದ ಸಂದರ್ಭದಲ್ಲಿ ಈ ಯುವಕರೇ ಮುಂದಾಗಿ ರಕ್ಷಣಾ ಕೆಲಸ ಮಾಡಲಿದ್ದಾರೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

‘ಭೀಮಾ, ಕಾಗಿಣಾ, ಮುಲ್ಲಾಮಾರಿ, ರೌದ್ರಾವತಿ ನದಿಯೂ ಸೇರಿ ನದಿ ಪಾತ್ರದಲ್ಲಿ ಜಿಲ್ಲೆಯ 200 ಗ್ರಾಮಗಳು ಬರುತ್ತವೆ. ಎಲ್ಲ ಗ್ರಾಮಗಳಲ್ಲೂ ಆಸಕ್ತ ಯುವಕರ ತಂಡ ರಚಿಸಲಾಗುವುದು. ‌ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಹಾಗೂ ಮಾಸ್ಟರ್‌ ಟ್ರೇನರ್‌ಗಳು ಈ ಯುವಕರ ತಂಡಗಳಿಗೆ ತಕ್ಷಣಕ್ಕೆ ತರಬೇತಿ ನೀಡಲಾಗುವುದು. ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಕೆಲವೆಡೆ ತರಬೇತಿ ಶುರು ಮಾಡಿದ್ದಾರೆ’ ಎಂದರು.

ADVERTISEMENT

‘ಯುವರು ಸ್ವಯಂ ಸೇವಕರಾಗಿ ನಮ್ಮೊಂದಿಗೆ ಕೈ ಜೋಡಿಸಲಿದ್ದಾರೆ. ಯಾವುದೇ ತರದ ಹಣಕಾಸಿನ ನೆರವು ಅವರಿಗೆ ಇರುವುದಿಲ್ಲ’ ಎಂದೂ ಜಿಲ್ಲಾಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ: ‘ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿದೆ. ಅಲ್ಲಿನ ನದಿಗಳ ಹರಿವೂ ಹೆಚ್ಚಾಗಿದೆ. ಆದರೆ, ಉಜಿನಿ ಅಥವಾ ವೀರ್‌ ಜಲಾಶಯಗಳಿಂದ ಇನ್ನೂ ನೀರು ಬಿಡುವ ಯಾವುದೇ ಲಕ್ಷಣಗಳು ಇಲ್ಲ. ಹಾಗಾಗಿ ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ’ ಎಂದೂ ಸ್ಪಷ್ಟಪಡಿಸಿದರು.

‘ಜಿಮ್ಸ್‌ನಲ್ಲಿ ಈಚೆಗೆ ನಡೆದ ಮಹಿಳೆ ಮೇಲಿನ ಅತ್ಯಾಚಾರ ಯತ್ನ ಹಾಗೂ ಅವರ ಸಾವು ಪ್ರಕರಣ ಮತ್ತು ಬ್ಲ್ಯಾಕ್‌ ಫಂಗಸ್‌ನ ಚುಚ್ಚುಮದ್ದನ್ನು ಸಿಬ್ಬಂದಿ ಕಳವು ಮಾಡಿದ ಪ್ರಕರಣ; ಈ ಮೂರೂ ವಿಷಯಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವರದಿ ತರಿಸಿಕೊಂಡು ಮಾಹಿತಿ ನೀಡಲಾಗುವುದು’ ಎಂದೂ ಹೇಳಿದರು.

ಅಪೌಷ್ಟಿಕ ಮಕ್ಕಳ ಮರು ಸಮೀಕ್ಷೆ
‘ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಎಲ್ಲ ತಾಲ್ಲೂಕಿನಲ್ಲಿ ಒಂದು ಅಥವಾ ಎರಡು ಎನ್‌ಆರ್‌ಸಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ ಅಪೌಷ್ಟಿಕತೆಯಿಂದ ಎಷ್ಟು ಮಕ್ಕಳು ಬಳಲುತ್ತಿದ್ದಾರೆ ಎಂಬುದನ್ನು ಖಚಿತ ಮಾಡಿಕೊಳ್ಳಲು ಮರು ಸಮೀಕ್ಷೆ ಆರಂಭಿಸಲಾಗಿದೆ. ಇದರಲ್ಲಿ ಯಾವೊಂದು ಮಗುವೂ ಹೊರಗುಳಿಯುವುದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕರಿ ಡಾ.ದಿಲೀಷ್‌ ಶಶಿ ತಿಳಿಸಿದರು.

‘ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ಹಾಗೂ ಆಯಾ ತಾಲ್ಲೂಕಿನಲ್ಲಿ ಒಂದು ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರಗಳು ಕೆಲಸ ಮಾಡುತ್ತಿವೆ. ಈಗಾಗಲೇ ಕೆಲವು ಮಕ್ಕಳನ್ನು ಕರೆತಂದು ದಾಖಲು ಮಾಡಿಕೊಳ್ಳಲಾಗಿದೆ. ಅವರ ಆರೋಗ್ಯ ಸುಧಾರಣಾ ಕ್ರಮ ಅನುಸರಿಸಲಾಗುತ್ತಿದೆ’ ಎಂದರು.

ಬೀಜ– ಗೊಬ್ಬರ ಕೊರತೆ ಇಲ್ಲ
ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ಬೀಜ ಮತ್ತು ರಸಗೊಬ್ಬರ ಕೊರತೆ ಇಲ್ಲ. ಬೇಡಿಕೆಯಷ್ಟು ಸರಬರಾಜು ಅಗುತ್ತಿದೆ. ವಾರದ ಹಿಂದೆ ಸೋಯಾ ಬೀಜದ ಕೊರತೆ ಉಂಟಾಗಿತ್ತು. ಈಗ ಅದನ್ನೂ ತರಿಸಿಕೊಂಡು ನೀಡಲಾಗುತ್ತಿದೆ ಎಂದು ಜ್ಯೋತ್ಸ್ನಾ ತಿಳಿಸಿದರು.

ಚಿಂಚೋಳಿ, ಆಳಂದ ಭಾಗದಲ್ಲಿ ಹೆಚ್ಚಿನ ರೈತರು ಸೋಯಾ ಬಿತ್ತನೆ ಮಾಡುತ್ತಿದ್ದಾರೆ. ನಾವು ಜಿಲ್ಲೆಗೆ 4 ಸಾವಿರ ಕ್ವಿಂಟಲ್‌ ಸಾಕಾಗುತ್ತದೆ ಎಂದುಕೊಂಡಿದ್ದೇವು. ಆದರೆ, ಈ ಬಾರಿ ಬಿತ್ತನೆ ಮಾಡುವವರ ಸಂಖ್ಯೆ ಹೆಚ್ಚಿದ್ದರಿಂಣದ 7 ಸಾವಿರ ಕ್ವಿಂಟಲ್‌ ಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.