ADVERTISEMENT

ಕಾಂಗ್ರೆಸ್ ಬಿಟ್ಟಾಗ ಖರ್ಗೆ ಅವರೂ ಹಣ ಪಡೆದಿದ್ದರೇ? ಸಂಸದ ಉಮೇಶ ಜಾಧವ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 10:06 IST
Last Updated 9 ಡಿಸೆಂಬರ್ 2021, 10:06 IST
ಉಮೇಶ ಜಾಧವ್ ಹಾಗೂ ಮಲ್ಲಿಕಾರ್ಜುನ ಖರ್ಗೆ
ಉಮೇಶ ಜಾಧವ್ ಹಾಗೂ ಮಲ್ಲಿಕಾರ್ಜುನ ಖರ್ಗೆ   

ಕಲಬುರಗಿ: ‘ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಕ್ಕೆ ₹ 25 ಕೋಟಿ ಹಣ ಪಡೆದಿದ್ದೇನೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಆರೋಪಿಸಿದ್ದಾರೆ. 1963ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾ ಗಾಂಧಿ ಅವರ ಕಾಂಗ್ರೆಸ್ ಬಿಟ್ಟು ದೇವರಾಜ ಅರಸು ಅವರೊಂದಿಗೆ ಕೈಜೋಡಿಸಿದ್ದರು. ಹಾಗಿದ್ದರೆ ಆಗಲೂ ಹಣ ಪಡೆದಿದ್ದರೇ’ ಎಂದು ಸಂಸದ ಡಾ. ಉಮೇಶ ಜಾಧವ್ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಬಿಜೆಪಿ ಸೇರಲು ಹಣ ಪಡೆದಿದ್ದೇನೆ ಎಂದು ಪ್ರಿಯಾಂಕ್ ಅವರು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಅದನ್ನು ಹೇಳಿಯೇ ಎರಡು ಚುನಾವಣೆಗಳನ್ನು ಎದುರಿಸಿದರು. ಜನರು ಇವರ ಮಾತನ್ನು ನಂಬಲಿಲ್ಲ. ನಾನು ಹಣ ಪಡೆದಿದ್ದು ನಿಜವಾದರೆ ಅದಕ್ಕೆ ಪೂರಕ ದಾಖಲೆಗಳನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

‘ಪ್ರಿಯಾಂಕ್ ಅವರಿಗೆ ಇದೇ ಮೊದಲ ಬಾರಿಗೆ ಅವರು ನಿಂತ ನೆಲ ಸರಿದಂತೆ ಅನಿಸುತ್ತಿದೆ. ನನ್ನ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದೇನೆ ಎಂದು ಕೇಳುತ್ತಿದ್ದಾರೆ. ಅವರ ತಂದೆ 50 ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಅವರು ಏನು ಮಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ. ಬೆಂಗಳೂರಿನಲ್ಲಿ ಖರ್ಗೆ ಕುಟುಂಬದವರು ಶಾಲೆಗಳನ್ನು ನಡೆಸುತ್ತಿದ್ದಾರೆ. ಆದರೆ, ಅವರು 9 ಬಾರಿ ಶಾಸಕರಾಗಿದ್ದ ಗುರುಮಠಕಲ್ ಕ್ಷೇತ್ರದಲ್ಲಿ ಒಂದು ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಿಸಲು ಆಗಿಲ್ಲ’ ಎಂದರು.

ADVERTISEMENT

‘ಪ್ರಿಯಾಂಕ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ಕೆಡಿಪಿ ಸಭೆ ನಡೆಸಿದ್ದಾರೆ. ಅದೂ ಅರ್ಧಕ್ಕೇ ಮುಕ್ತಾಯವಾಯಿತು. ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಚಿಂಚೋಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಬಂಜಾರ ಪೀಠದ ಕುಲಗುರು ರಾಮರಾವ್ ಮಹಾರಾಜರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು ನಿಜ. ಆದರೆ, ನಾವು ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕೊಡಿ ಎಂದು ಕೇಳಿಲ್ಲ. ಅದರ ಬದಲಾಗಿ ಅರಣ್ಯ ಹಕ್ಕು ಕಾಯ್ದೆಯಡಿ ಕಾಡಿನಲ್ಲಿ ವಾಸಿಸುತ್ತಿರುವ ಸಮುದಾಯದವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ಪಡೆಯಲು ಅನುಕೂಲವಾಗುವಂತೆ ಎಸ್ಟಿಯ ಒಂದು ನಿಯಮವನ್ನು ಐದು ವರ್ಷಗಳವರೆಗೆ ಸಡಿಲಿಸುವಂತೆ ಮನವಿ ಮಾಡಿದ್ದೇವೆ. ಇದನ್ನು ನಾನು ಸಂಸತ್ತಿನಲ್ಲೇ ಪ್ರಸ್ತಾಪಿಸಿದ್ದೇನೆಯೇ ಹೊರತು ಎಸ್ಟಿಗೆ ಸೇರಿಸಲು ಮನವಿ ಮಾಡಿಲ್ಲ’ ಎಂದರು.

‘ಪ್ರಿಯಾಂಕ್ ಖರ್ಗೆ ಅವರು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿತರಿಸಿದ ಪತ್ರದಲ್ಲಿರುವ ಸಹಿ ರಾಮರಾವ ಮಹಾರಾಜರದ್ದಲ್ಲ. ಅವರದೇ ಸಹಿ ಎಂದು ಸಾಬೀತುಮಾಡಿದರೆ ನಾನು ತಕ್ಷಣವೇ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲು ಹಾಕಿದರು.

‘ಕಲಬುರಗಿಯಲ್ಲಿ ರೈಲ್ವೆ ವಿಭಾಗವನ್ನು ತರುವ ಬಗ್ಗೆ ಪ್ರಯತ್ನ ಮುಂದುವರಿದಿದೆ. ಅಲ್ಲದೇ, ಟೆಕ್ಸ್‌ಟೈಲ್ ಪಾರ್ಕ್, ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಒಂದು ಕೇಂದ್ರೀಯ ವಿದ್ಯಾಲಯ (ಕೆ.ವಿ) ಆರಂಭಿಸಲು ಮನವಿ ಮಾಡಿದ್ದೇನೆ. ಯಾದಗಿರಿಯಲ್ಲಿ ಕೆ.ವಿ. ಆರಂಭಿಸಲು ಎಲ್ಲ ಪ್ರಕ್ರಿಯೆಗಳು ಮುಗಿದಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.