ಕಾಳಗಿ ತಾಲ್ಲೂಕಿನ ಭೂತ್ಪೂರ- – ರುದ್ನೂರ ಮಧ್ಯೆ ರಾಜ್ಯಹೆದ್ದಾರಿ ಕಿತ್ತು ಹೋಗಿರುವುದು
ಕಾಳಗಿ: ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಪ್ರಾರಂಭವಾದ ಗುಡುಗು, ಬಿರುಗಾಳಿ ಸಹಿತ ಮಳೆಯು ಬುಧವಾರವು ಮುಂದುವರೆದಿದ್ದು, ಕೆಲವೆಡೆ ನೀರಿನ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲ್ಲೂಕಿನ ಚಿಂಚೋಳಿ (ಎಚ್), ಭೂತ್ಪೂರ-ರುದ್ನೂರ ಹಾದುಹೋಗುವ ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ ಸೇತುವೆ ಮೇಲೆ ನೀರು ಬಂದು ಮಂಗಳವಾರ, ಬುಧವಾರ ಕೆಲಕಾಲ ಸಂಚಾರ ಕಡಿತಗೊಂಡಿತ್ತು. ಅಲ್ಲದೆ ನೀರಿನ ರಭಸಕ್ಕೆ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಕೆಲ ಭಾಗ ಕೊಚ್ಚಿ ಹೋಗಿದೆ.
ಸೇಡಂ, ಕಾಳಗಿ, ಚಿಂಚೋಳಿ ಮತ್ತು ಕಲಬುರಗಿ ಮಾರ್ಗದ ಮೂಲಕ ಶಾಲಾ ಕಾಲೇಜು, ಆಸ್ಪತ್ರೆ ಮತ್ತು ದಿನನಿತ್ಯದ ಕೆಲಸಕ್ಕೆ ಹೋಗುವವರು ಸಂಚಾರ ಕಡಿತದಿಂದ ತೊಂದರೆ ಅನುಭವಿಸುವಂತಾಗಿದೆ.
‘ಸೇತುವೆ ಸುತ್ತಲಿನ ರುದ್ನೂರ, ಭೂತ್ಪೂರ, ಚಿಂತಪಳ್ಳಿ, ರಾಯಕೋಡ ರೈತರಿಗೆ ಸೇತುವೆ ಅತಿ ಅವಶ್ಯಕವಾಗಿದ್ದು, ಇಲ್ಲಿನ ಜನರ ಬೇಡಿಕೆಗೆ ಸ್ಪಂದಿಸಿ ಹೊಸದಾಗಿ ಸೇತುವೆ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲಿಕಾರ್ಜುನ ಕೊಡದೂರ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.