ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮಹಾಗಾಂವ ಗ್ರಾಮದಲ್ಲಿ ಕರ್ನಾಟಕ ಯುವಶಕ್ತಿ ಸೈನ್ಯದಿಂದ ಶನಿವಾರ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ವೈವಿಧ್ಯಮಯ ಹಾಸ್ಯದ ಚಟಾಕಿಗಳ ಮೂಲಕ ನೆರೆದಿದ್ದವರನ್ನು ನಗಿಸಿದರು. ಸಂಗೀತ ಕಲಾವಿದ ಮರಿಯಪ್ಪ ಭಜಂತ್ರಿ ಸಂಗೀತ ಸುಧೆ ಹರಿಸಿದರು. ಕಲಾವಿದ ರಾಚಯ್ಯ ಸ್ವಾಮಿ ಖಾನಾಪುರ ಮಿಮಿಕ್ರಿ ಮಾಡಿ ರಂಜಿಸಿದರು. ರಾಜು ಹೆಬ್ಬಾಳ ಜಾನಪದ ಶೈಲಿಯಿಂದ ನೆರೆದಿದ್ದ ಜನರಲ್ಲಿ ನಗೆ ಉಕ್ಕಿಸಿದರು. ಬಾಲಕಿ ಕೃತಿಕಾ ಭಜಂತ್ರಿ ಕನ್ನಡ ಗೀತೆಗಳನ್ನು ಹಾಡಿ ಕನ್ನಡಾಂಬೆಗೆ ನಮನ ಸಲ್ಲಿಸಿದರು. ಅಭಿಷೇಕ ಪಾಟೀಲ ಏಕಪಾತ್ರಾಭಿನಯದ ಮೂಲಕ ಜನಮನಸೂರೆಗೊಂಡರು.
ಕೆಪಿಸಿಸಿ ಸದಸ್ಯ ವಿಜಯಕುಮಾರ ಜಿ.ರಾಮಕೃಷ್ಣ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೈನ್ಯದ ಸಂಸ್ಥಾಪಕ ಅಧ್ಯಕ್ಷ, ವಕೀಲ ಲಿಂಗರಾಜ ಬಿ.ಗುಂಡುರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದನಕೇರಾದ ರಾಚೋಟೇಶ್ವರ ಶಿವಾಚಾರ್ಯ ಹಾಗೂ ಕಳ್ಳಿಮಠದ ವಿರೂಪಾಕ್ಷ ದೇವರು ಸಾನ್ನಿಧ್ಯ ವಹಿಸಿದ್ದರು.
ಅನಿಲಕುಮಾರ ಕೋರೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಹಾಗಾಂವ, ಮಹಾಗಾಂವ ಕ್ರಾಸ್, ಕುರಿಕೋಟಾ, ಅಂಕಲಗಾ ಸೇರಿದಂತೆ ಸುತ್ತಲಿನ ಗ್ರಾಮಸ್ಥರು, ಕನ್ನಡಪರ ಹೋರಾಟಗಾರರು, ವಿಚಾರವಂತರು, ವಿದ್ಯಾರ್ಥಿಗಳು, ಮಹಿಳೆಯರು ಪಾಲ್ಗೊಂಡು ಕನ್ನಡ ಪ್ರೇಮ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.