ADVERTISEMENT

ಪಡಿತರದಲ್ಲಿ ಬೇಳೆ | ತೊಗರಿಗೆ ಹೆಚ್ಚಿನ ದರ: ಸಚಿವ ಡಾ.ಶರಣಪ್ರಕಾಶ್ ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 3:03 IST
Last Updated 12 ಅಕ್ಟೋಬರ್ 2025, 3:03 IST
ಶರಣಪ್ರಕಾಶ್ ಪಾಟೀಲ
ಶರಣಪ್ರಕಾಶ್ ಪಾಟೀಲ   

ಕಲಬುರಗಿ: ರಾಜ್ಯದಲ್ಲಿರುವ ಒಂದು ಕೋಟಿಗೂ ಅಧಿಕ ಬಿಪಿಎಲ್ ಪಡಿತರ ಚೀಟಿಗಳಿಗೆ ಇಂದಿರಾ ಕಿಟ್‌ನಲ್ಲಿ ತಲಾ ಎರಡು ಕೆಜಿ ತೊಗರಿ ಬೇಳೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದ್ದರಿಂದ ತೊಗರಿಗೆ ಹೆಚ್ಚಿನ ಬೇಡಿಕೆ ಬರಲಿದ್ದು, ಉತ್ತಮ ಬೆಲೆಯೂ ಸಿಗಲಿದೆ. ನಮ್ಮ ಸರ್ಕಾರ ತೊಗರಿ ಬೆಳೆಯುವ ರೈತರಿಗೆ ಖುಷಿ ಸುದ್ದಿ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೊಗರಿಯು ಹೇರಳ ಪೌಷ್ಟಿಕಾಂಶಗಳನ್ನು ಹೊಂದಿದ್ದರಿಂದ ಪಡಿತರ ಚೀಟಿದಾರರಿಗೆ ತೊಗರಿ ಬೇಳೆ ನೀಡಲು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಅತಿ ಹೆಚ್ಚು ತೊಗರಿಯನ್ನು ರೈತರಿಂದ ರಾಜ್ಯ ಸರ್ಕಾರವೇ ಖರೀದಿ ಮಾಡಲಿದೆ. ಹೀಗಾಗಿ, ಬೆಲೆಯೂ ಸ್ಥಿರವಾಗಿರಲಿದೆ. ಹೆಚ್ಚು ತೊಗರಿ ಬೆಳೆಯಲೂ ಉತ್ತೇಜನ ನೀಡಿದಂತಾಗುತ್ತದೆ’ ಎಂದು ಹೇಳಿದರು.

‘ಮೂರು ತಿಂಗಳ ಒಳಗಾಗಿ ಹಂಚಿಕೆಗೆ ಬೇಕಾದಷ್ಟು ತೊಗರಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಟೆಂಡರ್ ಮೂಲಕ ಖರೀದಿಸಲಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಿನ ತೊಗರಿ ಬೆಳೆಯುತ್ತಿದ್ದು, ಪಡಿತರ ಹಂಚಿಕೆಗೆ ಬೇಕಾದಷ್ಟು ತೊಗರಿಯು ಈ ಭಾಗದ ರೈತರಿಂದ ಲಭ್ಯವಾಗದಿದ್ದಲ್ಲಿ ಮಾತ್ರ ಬೇರೆ ರಾಜ್ಯಗಳಿಂದ ಖರೀದಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚುವರಿ ಇಳುವರಿ ನೀಡುವ ತೊಗರಿ ತಳಿಗಳನ್ನು ಆವಿಷ್ಕರಿಸುವಂತೆ ಕೃಷಿ ವಿಜ್ಞಾನಿಗಳಿಗೆ ಸೂಚನೆ ನೀಡಲಾಗುವುದು. ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಗೂ ಬಲ ತುಂಬಲಾಗುವುದು’ ಎಂದರು.

ADVERTISEMENT

‘ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಆಸ್ಪತ್ರೆ, ನಿಮ್ಹಾನ್ಸ್‌ನ ಪ್ರಾದೇಶಿಕ ಶಾಖೆಯ ಕಟ್ಟಡಗಳು ನಿರ್ಮಾಣಗೊಳ್ಳಲಿವೆ. ವಿ.ವಿ.ಯ 25 ಎಕರೆ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ಅಭಿವೃದ್ಧಿ ಇಲಾಖೆಯಿಂದ ಬಹು ಕೌಶಲ ಅಭಿವೃದ್ಧಿ ಕೇಂದ್ರವೂ ನಿರ್ಮಾಣಗೊಳ್ಳಲಿದೆ. ವಿ.ವಿ.ಯ ಕಟ್ಟಡದಲ್ಲಿ ಕೇಂದ್ರ ಕಾರ್ಯಾರಂಭ ಮಾಡಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುರಿದ ಮಳೆಯಿಂದ ನಷ್ಟಕ್ಕೊಳಗಾದ ಪ್ರದೇಶಗಳನ್ನು ವೈಮಾನಿಕ ಸರ್ವೆ ನಡೆಸಿ ಪರಿಹಾರ ಘೋಷಿಸಿದ್ದಾರೆ. ಶೇ 70ರಷ್ಟು ಬೆಳೆ ಸಮೀಕ್ಷೆ ಮುಗಿದಿದ್ದು, ಜಿಲ್ಲೆಗೆ ₹ 500 ಕೋಟಿ ಬೆಳೆ ನಷ್ಟ ಪರಿಹಾರ ಬರುವ ಸಾಧ್ಯತೆ ಇದೆ. ಜೊತೆಗೆ ₹ 200 ಕೋಟಿ ಬೆಳೆ ವಿಮೆ ಪರಿಹಾರ ದೊರಕುವ ನಿರೀಕ್ಷೆ ಇದೆ ಎಂದರು.

ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಗೋಷ್ಠಿಯಲ್ಲಿದ್ದರು.

ಸಂಪುಟ ಪುನರ್ ರಚನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್‌ನೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಸಿಎಂ ಅವರು ಆಗಾಗ ಊಟಕ್ಕೆ ಕರೆಯುತ್ತಾರೆ. ಇದರಲ್ಲಿ ವಿಶೇಷವೇನೂ ಇಲ್ಲ
ಡಾ.ಶರಣಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
‘ಶಹಾಬಾದ್‌ ಇಎಸ್‌ಐ ಕಟ್ಟಡದಲ್ಲಿ ತಾಲ್ಲೂಕು ಆಸ್ಪತ್ರೆ’
ಶಹಾಬಾದ್‌ನಲ್ಲಿರುವ ಕಾರ್ಮಿಕ ಇಲಾಖೆ ಅಧೀನದ ಇಎಸ್‌ಐ ಆಸ್ಪತ್ರೆಯ ಕಟ್ಟಡವನ್ನು ಆರೋಗ್ಯ ಇಲಾಖೆಯ ಸುಪರ್ದಿಗೆ ಪಡೆದು ತಾಲ್ಲೂಕು ಆಸ್ಪತ್ರೆ ಮಾಡುವ ಚಿಂತನೆ ಇದೆ. ಈ ಬಗ್ಗೆ ಕಾರ್ಮಿಕ ಇಲಾಖೆಯೊಂದಿಗೆ ಮಾತುಕತೆ ನಡೆದಿದೆ ಎಂದು ಡಾ.ಶರಣಪ್ರಕಾಶ್ ಪಾಟೀಲ ತಿಳಿಸಿದರು. ‍ಪ‍್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಇಎಸ್‌ಐ ಆಸ್ಪತ್ರೆಯ ಕಟ್ಟಡವನ್ನು ಕೋವಿಡ್ ಸಂದರ್ಭದಲ್ಲಿ ನವೀಕರಿಸಲಾಗಿದೆ. ಹೊಸ ತಾಲ್ಲೂಕು ಕೇಂದ್ರವಾದ ಶಹಾಬಾದ್‌ಗೆ ತಾಲ್ಲೂಕು ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು ಇದೇ ಕಟ್ಟಡವನ್ನು ಬಳಸಿಕೊಳ್ಳುವ ಚಿಂತನೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.