ADVERTISEMENT

ಕಾಲಮಿತಿಯೊಳಗೆ ಕಾಮಗಾರಿ ಮುಗಿಸಿ

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ತಾಕೀತು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 5:38 IST
Last Updated 18 ನವೆಂಬರ್ 2022, 5:38 IST
ಅಫಜಲಪುರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಗುರುವಾರ ಶಾಸಕ ಎಂ.ವೈ.ಪಾಟೀಲ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು
ಅಫಜಲಪುರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಗುರುವಾರ ಶಾಸಕ ಎಂ.ವೈ.ಪಾಟೀಲ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು   

ಅಫಜಲಪುರ: ವಿವಿಧ ಇಲಾಖೆಗಳಿಗೆ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ನನಗೆ ಬೇಸರ ತಂದಿದೆ, ಬಹುತೇಕ ಗ್ರಾಮಗಳಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ, ಪ್ರಗತಿಯ ವರದಿ ನೀಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಶಿವರಾಜ್‌ಕುಮಾರಗೆ ಸೂಚಿಸಿದರು.

ಉತ್ತರಿಸಿದ ಶಿವರಾಜಕುಮಾರ ಕೆಲಸ ಮಾಡದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಲಾಗುವುದು, ಜಲ ಜೀವನ ಮಿಷನ್‌ನ ಮೊದಲ ಹಂತದಲ್ಲಿ 33 ಕಾಮಗಾರಿ ಕೈಗೆತ್ತಿಕೊಂಡಿದ್ದು ಅದರಲ್ಲಿ 20 ಕಾಮಗಾರಿಗಳು ಮುಗಿದಿವೆ, 13 ಪ್ರಗತಿಯಲ್ಲಿವೆ, 2ನೇ ಹಂತದಲ್ಲಿ 38 ಕಾಮಗಾರಿಗಳಿದ್ದು ಅದರಲ್ಲಿ 3 ಮುಗಿದಿವೆ, 27 ಪ್ರಗತಿಯಲ್ಲಿವೆ, 8 ಟೆಂಡರ್‌ ಕರೆಯಲಾಗಿದೆ, 3ನೇ ಹಂತದಲ್ಲಿ 27 ಕಾಮಗಾರಿಗಳಿದ್ದು ಟೆಂಡರ್‌ ಕರೆಯಲಾಗುತ್ತಿದೆ, 4ನೇ ಹಂತದಲ್ಲಿ 25 ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ADVERTISEMENT

ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಹೆಚ್ಚಳದ ಕುರಿತು ಏನು ಕ್ರಮಕೈಗೊಂಡಿದ್ದೀರಿ? ಶಾಲಾ ಕೋಣೆಗಳ ದುರಸ್ತಿ ಬಗ್ಗೆ ಮಾಹಿತಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರಿಗೆ ಶಾಸಕರು ಪ್ರಶ್ನಿಸಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಫಲಿತಾಂಶ ಹೆಚ್ಚಳಕ್ಕೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಗುಂಪು ಮಾಡಿ ದಿನಾಲು ಶಾಲಾ ಆರಂಭದ ಅವಧಿ ಮುಂಚೆ, ಶಾಲೆ ಬಿಟ್ಟ ನಂತರ ವಿಶೇಷ ತರಗತಿಗಳು ನಡೆಸಲಾಗುತ್ತಿದೆ, ಶಾಲಾ ಕೋಣೆ ದುರಸ್ತಿ ಮಾಡುವ ಕುರಿತು ಸರ್ಕಾರದ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಕೃಷಿ ನಿರ್ದೇಶಕ ಎಸ್.ಎಚ್.ಗಡಗಿಮನಿ, ಪ್ರಸಕ್ತ ವರ್ಷದ ಕೃಷಿ ಪರಿಕರಗಳ ಬಗ್ಗೆ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಎಂಟು ಜನ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ ಸಭೆಗೆ ಮಾಹಿತಿ ನೀಡಿ, ನಮ್ಮ ಇಲಾಖೆ ವ್ಯಾಪ್ತಿಗೆ 9 ಬ್ರಿಜ್‌ ಕಂ ಬ್ಯಾರೇಜ್‌ ಬರುತ್ತವೆ, ಅವುಗಳಿಗೆ ಗೇಟ್‌ ಹಾಕಲಾಗುತ್ತಿದೆ ಮುಂದಿನ ಮೂರು ತಿಂಗಳವರೆಗೆ ನೀರು ನಿಲ್ಲುತ್ತದೆ ಎಂದು ತಿಳಿಸಿದರು.

ತೋಟಗಾರಿಕೆ ಅಧಿಕಾರಿ ಸುನೀಲ್ ಕುಮಾರ, ಪ್ರಸಕ್ತ ವರ್ಷದಲ್ಲಿ ₹40 ಲಕ್ಷ ಅನುದಾನ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಶಾಸಕರು ಮಾತನಾಡಿ ತೋಟಗಾರಿಕೆ ಬೆಳೆಗಳಲ್ಲಿ ದ್ರಾಕ್ಷಿ ಬೆಳೆಗೆ ಹೆಚ್ಚು ಒತ್ತು ನೀಡಿ ಎಂದು ತಿಳಿಸಿದರು.

ಸಿಡಿಪಿಒ ಇಲಾಖೆ ಅಧಿಕಾರಿ ಶಾರದಾ ಅವಟೆ‌, ಪೂರಕ ಪೌಷ್ಟಿಕ ಆಹಾರ ಯೋಜನೆಯಡಿ ಇಲ್ಲಿಯವರೆಗೆ 99% ಸಾಧನೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಒಟ್ಟು ಅಂಗನವಾಡಿ ಕೇಂದ್ರಗಳ ಸಂಖ್ಯೆ 260 ಇದ್ದು ಅವುಗಳಲ್ಲಿ 213 ಕ್ಕೆ ಸ್ವಂತ ಕಟ್ಟಡ ಹೊಂದಿದ್ದು, ಉಳಿದವುಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಹಶೀಲ್ದಾರ್‌ ಸಂಜೀವಕುಮಾರ ದಾಸರ, ಇಒಗಳಾದ ರಮೇಶ ಸುಲ್ಪಿ, ವೀರಣ್ಣ ಕವಲಗಿ, ಅಧಿಕಾರಿಗಳಾದ ನಾಗರಾಜ ಕುಸಮಾ, ಬಾಲಕೃಷ್ಣ, ಹೊನ್ನೇಶ್‌ ಬಾಸಗಿ, ಸಂತೋಷ ಇಂಡಿ, ದೇವೇಂದ್ರ ಸಜ್ಜನ, ರವಿಕಿರಣ, ಸಂಜೀವ ಚವ್ಹಾಣ, ರಮೇಶ ಪಾಟೀಲ, ಬಸಪ್ಪ ನಾಟೀಕಾರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.