ADVERTISEMENT

ಕೃಷಿ ಕಾಯ್ದೆಯ ಗಿಫ್ಟ್ ನೀವೇ ಇಟ್ಟುಕೊಳ್ಳಿ ಮೋದಿಜಿ: ಯೋಗೇಂದ್ರ ಯಾದವ್

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 10:46 IST
Last Updated 5 ಮಾರ್ಚ್ 2021, 10:46 IST
   

ಕಲಬುರ್ಗಿ: 'ನೀವು ರೈತರಿಗಾಗಿ ನೀಡುತ್ತಿರುವ ಮೂರು ಕೃಷಿ ಕಾಯ್ದೆಯ ಗಿಫ್ಟ್ ನಮಗೆ ಬೇಕಿಲ್ಲ. ಅದನ್ನು ನೀವು ಇಟ್ಟುಕೊಳ್ಳಿ' ‌ಮೋದಿಜಿ ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಹಾಗೂ ಕಿಸಾನ್ ಸಂಯುಕ್ತ ಮೋರ್ಚಾ ರಾಷ್ಟ್ರೀಯ ಮುಖಂಡ ಯೋಗೇಂದ್ರ ಯಾದವ್ ಹೇಳಿದರು.

ನಗರದ ಗಂಜ್ ಪ್ರದೇಶದಲ್ಲಿ ಶುಕ್ರವಾರ ರೈತ ಸಂಘಟನೆಗಳ ‌ಒಕ್ಕೂಟ ಆಯೋಜಿಸಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಜನರು ಏನೇ ಕೇಳಿದರೂ ಈ ಹಿಂದೆ ಕಾಂಗ್ರೆಸ್ ಮಾಡಿತ್ತೇ ಎಂದು ಪ್ರಧಾನಿ ಮೋದಿ ಅವರು ಪ್ರಶ್ನೆ ಮಾಡುತ್ತಾರೆ. ಕಾಂಗ್ರೆಸ್‌ನವರೇ ಎಲ್ಲವನ್ನೂ ಮಾಡಿದ್ದರೆ ನೀವು (ಮೋದಿ) ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಛೇಡಿಸಿದರು.

ADVERTISEMENT

ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಕೊಡಿ ಎಂದು ರೈತರು ಮೋದಿ ಸರ್ಕಾರವನ್ನು ಕೇಳುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ನವರು ಕೊಟ್ಟಿದ್ದರೆ ನೀವು ಅಧಿಕಾರಕ್ಕೂ ಬರುತ್ತಿರಲಿಲ್ಲ. ಅಧಿಕಾರದಲ್ಲೂ ಇರುತ್ತಿರಲಿಲ್ಲ ಎಂದು ಗುಡುಗಿದರು.

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ನಾಲ್ಕು ದಿಕ್ಕುಗಳಲ್ಲಿ ರೈತರು ಕುಳಿತು ನೂರು ದಿನಗಳು ತುಂಬಿವೆ. ಈ ಆಂದೋಲನ ಮುಂದಿನ ಪೀಳಿಗೆಗಾಗಿ ನಡೆಯುತ್ತಿದೆ. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕೃಷಿ ಇರುತ್ತದೋ, ಇಲ್ಲವೋ ಎಂದು ಹೇಳಲಾಗದ ಸ್ಥಿತಿಯಲ್ಲಿ ನಾವು ಇದ್ದೇವೆ ಎಂದರು.

ಕಡಲೆಗೆ ₹ 5,100 ಬೆಂಬಲ ಬೆಲೆ ಸಿಗಬೇಕು. ಆದರೆ, ಇಲ್ಲಿ ಈಗ ₹ 4,800 ಕ್ಕೆ ಕಡಲೆ ಮಾರಾಟವಾಗುತ್ತಿದೆ. ಇದನ್ನು ನಾವು ಬೆಂಬಲ ಬೆಲೆ ಎಂದು ಕರೆಯಬೇಕಾ? ಮೋದಿ ಅವರೇ ನಿಜವಾದ ಬೆಂಬಲ ಬೆಲೆ ಕೊಡಿ. ಇದನ್ನು ಕಾನೂನು ಮಾಡಿ ಜಾರಿಗೊಳಿಸಿ. ಈ ಕಾನೂನು ಹಕ್ಕು ನಮಗೆ ಕೊಡಿ ಎಂದು ಆಗ್ರಹಿಸಿದರು.

2011ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ನೀವು (ನರೇಂದ್ರ ಮೋದಿ) ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಗೆ ಬೆಂಬಲ ಬೆಲೆ ಕಾನೂನು ಮಾಡಿ ಎಂದು ಪತ್ರ ಬರೆದಿದ್ದೀರಿ. ಆಗ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನೀವು ಹೇಳಿದ್ದ ಮಾತನ್ನೇ ನೀವು ಇಂದು ಕೇಳಿಕೊಳ್ಳಿ. ನಮ್ಮ ಮಾತು ನೀವೆ ಕೇಳಿ. 'ಸಿಎಂ' ನರೇಂದ್ರ ಮೋದಿ ಮಾತು 'ಪಿಎಂ' ನರೇಂದ್ರ ಮೋದಿ ಕೇಳಲಿ ಎಂದು ವ್ಯಂಗ್ಯವಾಡಿದರು.

ಎಂಎಸ್ ಪಿ ಇದೆ. ಇರುತ್ತದೆ, ಇರಲಿದೆ ಎನ್ನುವುದೇ ಆದರೆ, ಅದುಕಾಗದದಲ್ಲಿ ಇರುವುದು ಬೇಡ. ನಮಗೆ ಕಾನೂನು ರೂಪದಲ್ಲಿ ಕೊಡಿ. ಅದು ಬಿಟ್ಟು ಬೇರೆ ಯಾವ ಬೇಡಿಕೆಯೂ ನಿಮ್ಮ ಬಳಿ ಇಟ್ಟಿಲ್ಲ. ನೀವು ಬಾಯಲ್ಲಿ ಹೇಳುವುದನ್ನು ನಮ್ಮ ಜೇಬಿಗೆ ಬರುವಂತೆ ಮಾಡಿ ಸಾಕು ಎಂದರು.

ಮಾಜಿ ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ಕಲಬುರ್ಗಿ ಜಿಲ್ಲೆಯ ಕುಡಗಿ ಗ್ರಾಮದಲ್ಲಿ ನೇರವಾಗಿ ರಿಲಯನ್ಸ್ ಕಂಪನಿಯವರು ಖರೀದಿ ಶುರು ಮಾಡಿದ್ದಾರೆ. ಹೀಗೆ ಪ್ರತಿ ಹಳ್ಳಿಯಲ್ಲಿ ಖಾಸಗಿ ಕಂಪನಿಗಳು ಖರೀದಿ ಮಾಡಿದರೆ, ಎಪಿಎಂಸಿಗೆ ಯಾರು ಬರುತ್ತಾರೆ.? ಎಪಿಎಂಸಿ ಮುಚ್ಚುತ್ತವೆ. ಆಗ ರೈತರು ಮಾತ್ರವಲ್ಲದೆ ಕೂಲಿ ಕಾರ್ಮಿಕರು, ಹಮಾಲಿಗಳು ಬೀದಿಗೆ ಬೀಳುತ್ತಾರೆ. ಅದೇ ರೀತಿ ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ 108 ಎಕರೆ ಕೃಷಿ ಜಮೀನನ್ನು ಯಾರಾದರೂ ಖರೀದಿಸಬಹುದು. 108 ಎಕರೆ ಭೂಮಿ ಖರೀದಿಸುವ ಶಕ್ತಿ ಯಾವ ರೈತರಿಗೆ ಇದೆ? ಆಗ ಕೃಷಿ ಜಮೀನು ಪಾಲಾಗುವುದು ಉಳ್ಳವರು ಪಾಲು ಆಗುವುದು ಖಚಿತ ಎಂದರು.

ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್‌.ಪ್ರಕಾಶ ಕಮ್ಮರಡಿ ಮಾತನಾಡಿ, ಈಗ ಎಪಿಎಂಸಿಗೆ ಒಂದು ಗೋಡೆ ನಿರ್ಮಾಣವಾಗಿದೆ. ಎಪಿಎಂಸಿ ಒಳಗೆ ಒಂದು ವ್ಯವಸ್ಥೆಯಡಿ ಖರೀದಿ ಇದೆ. ಎಂಪಿಎಸಿ ಹೊರಗೆ ಯಾರಾದರೂ ಖರೀದಿ ಮಾಡಬಹುದು. ಅಲ್ಲಿ ಯಾರು ಖರೀದಿ ಮಾಡುತ್ತಾರೆ ಎಂಬುವುದೇ ಗೊತ್ತಾಗಲ್ಲ. ಅಲ್ಲಿನ ಮೋಸ ರೈತರಿಗೂ ತಿಳಿಯುವುದಿಲ್ಲ ಎಂದು ಎಚ್ಚರಿಸಿದರು.

ಬಿಹಾರದ ದೀಪಕ್ ಲಂಬಾ, ಪಂಜಾಬ್ ನ ಸತ್ನಾಮ್ ಸಿಂಗ್, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಎಚ್ ಕೆಸಿಸಿಐ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿಪಾಟೀಲ, ಎಚ್. ವಿ.ದಿವಾಕರ, ಯು.ಬಸವರಾಜ, ಕೆ.ನೀಲಾ, ನಾಗರತ್ನಾ, ಶರಣಬಸಪ್ಪ ಮಮಶೆಟ್ಟಿ, ಶೌಕತ್ ಅಲಿ ಆಲೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.