ADVERTISEMENT

ಅಫಜಲಪುರ | ಕೆಕ್ಕರಸಾವಳಗಿ ಶಾಲೆ ಮಕ್ಕಳ ಹೆಗ್ಗಳಿಕೆ

ಪಠ್ಯ, ಸಹಪಠ್ಯ ಚಟುವಟಿಕೆಗಳಲ್ಲೂ ಸಾಧನೆ, 2 ಬಾರಿ ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

ಶಿವಾನಂದ ಹಸರಗುಂಡಗಿ
Published 11 ಮಾರ್ಚ್ 2020, 20:15 IST
Last Updated 11 ಮಾರ್ಚ್ 2020, 20:15 IST
ಅಫಜಲಪುರ ತಾಲ್ಲೂಕಿನ ಕೆಕ್ಕರಸಾವಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ–ಕಲಿ ತರಗತಿಯ ನೋಟ
ಅಫಜಲಪುರ ತಾಲ್ಲೂಕಿನ ಕೆಕ್ಕರಸಾವಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ–ಕಲಿ ತರಗತಿಯ ನೋಟ   

ಅಫಜಲಪುರ: ತಾಲ್ಲೂಕಿನಕೆಕ್ಕರಸಾವಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಾದರಿಯಾಗಿ ಬೆಳೆಯುತ್ತಿದೆ. ಮಕ್ಕಳ ದಾಖಲಾತಿ, ಹಾಜರಾತಿ, ಗುಣಮಟ್ಟದ ಶಿಕ್ಷಣ, ಒಳ್ಳೆಯ ಪರಿಸರ, ಶಿಕ್ಷಕರಿಗೆ– ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಶಾಲೆ ಬಗ್ಗೆ ಇರುವ ಕಾಳಜಿ ಇದಕ್ಕೆ ಕಾರಣ.

1962ರಲ್ಲಿ ಪ್ರಾರಂಭಗೊಂಡ ಈ ಶಾಲೆಯಲ್ಲಿ ಈಗ ಸುಮಾರು 204 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ತಾಲ್ಲೂಕು ಕೇಂದ್ರದಿಂದ 40 ಕಿ.ಮೀ. ದೂರವಿರುವ ಈ ಶಾಲೆಯ ಆವರಣವು ಹಸಿರಿನಿಂದ ಕಂಗೊಳಿಸುತ್ತಿದೆ. ಅಂದವಾದ ಬಣ್ಣದಿಂದ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ಮಿನುಗುತ್ತಿದೆ. ಶಿಕ್ಷಕರಾದ ಪರಮಾನಂದ ಸರಸಂಬಿ, ಶಬ್ಬೀರ ಅಲಿ ದೊಡ್ಡಮನಿ, ಸಂಗೀತಾ ಬುಳ್ಳಾ, ಮುಕ್ತುಂಸಾಬ ಎಸ್, ಜಾವೀದ ಹುಂಡೇಕಾರ, ಅತಿಥಿ ಶಿಕ್ಷಕರಾದ ಸಿದ್ದು ಹೂಗಾರ, ಪ್ರಭಾವತಿ ಕುಂಬಾರ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದಾರೆ.

ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳು ಶಾಲೆಯ ಹೆಸರನ್ನು ಬೆಳಗುತ್ತಿದ್ದಾರೆ. 2016ರಲ್ಲಿ ಪರಮಾನಂದ ಸರಸಂಬಿಯವರು ಆಂಗ್ಲ ಭಾಷಾ ಮೇಳವನ್ನು ಹಮ್ಮಿಕೊಂಡಿದ್ದರು. ಮೂರು ಬಾರಿ ಕಲಬುರ್ಗಿಯ ಆಕಾಶವಾಣಿಯಲ್ಲಿ ಕಾರ್ಯಕ್ರಮ ವೈವಿಧ್ಯ ನೀಡಿದ ಖ್ಯಾತಿ ಇವರದು. ಸ್ವಾಮಿ ವಿವೇಕಾನಂದ ಹೆಸರಿನ ಸ್ಕೌಟ್ ಮತ್ತು ಗೈಡ್ ಶಾಖೆ ಸಕ್ರಿಯವಾಗಿದೆ. ಹಲವು ಸ್ಕೌಟ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

ADVERTISEMENT

ಮಕ್ಕಳು ಸಾಹಿತ್ಯ ರಚನೆಯಲ್ಲೂ ತೊಡಗಿರುವುದು ಇಲ್ಲಿನ ಒಂದು ವಿಶೇಷ. ಮಕ್ಕಳು ಹಲವಾರು ಕಥೆಗಳನ್ನು ಬರೆದಿದ್ದು ‘ಹಕ್ಕಿ ಹಿಂಡು’ ಕಥಾಸಂಕಲನ ರೂಪದಲ್ಲಿ ಹೊರಬಂದಿದೆ. ಶೌಚಾಲಯ ಕುರಿತು ಅರಿವು ಮೂಡಿಸುವ ಬೀದಿನಾಟಕ ಮಾಡಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿಯೂ ಮಕ್ಕಳು ಸಾಧನೆ ಮಾಡಿದ್ದಾರೆ. ಆಟೋಟ ಸ್ಪರ್ಧೆಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಈಚೆಗೆ ತಾಲ್ಲೂಕು ಮಟ್ಟದ ಬಾಲಕಿಯರ ಥ್ರೋಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಜಾನಪದ ಕಲರವ, ಯೋಗ ದಿನಾಚರಣೆ, ಪವಾಡ ರಹಸ್ಯ ಬಯಲು, ಮಕ್ಕಳ ಹಬ್ಬ ಮತ್ತು ಮಕ್ಕಳು ಬರೆದಿರುವ ಕವಿತೆಗಳ ವಾಚನಕ್ಕಾಗಿ ‘ಪುಟಾಣಿ ಕವಿಗೋಷ್ಠಿ’ ಇತ್ಯಾದಿ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ತಿಂಗಳಿಗೆ ಒಂದು ಬಾರಿ ಬ್ಯಾಗ್‌ ರಹಿತ ದಿನದಂದು ರಸಪ್ರಶ್ನೆ, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚಿನ ಪ್ರೇರಣೆ ನೀಡಲಾಗುತ್ತಿದೆ.

ಪರಿಸರ ಅರಿವು ಮೂಡಿಸಲು ಮಕ್ಕಳಿಗೆ ತಲಾ ಒಂದರಂತೆ 100 ಸಸಿಗಳನ್ನು ಶಾಲಾ ಶಿಕ್ಷಕರೇ ನೀಡಿದ್ದಾರೆ. ಎರಡು ಬಾರಿ ಈ ಶಾಲೆಯ ಮಕ್ಕಳು ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ ಆಗಿದ್ದಾರೆ.

ಗುರುಶಾಂತ ಮಾಹುರ, ಶ್ರೀಮಂತ ಬೊಳಶೆಟ್ಟಿ, ಪರಮೇಶ್ವರ ಇಟಗಿ ಅವರು ₹75 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಶಾಲೆಗೆ ದಾನದ ರೂಪದಲ್ಲಿ ನೀಡಿದ್ದಾರೆ. ಗ್ರಾಮಸ್ಥರು ಪ್ರತಿವರ್ಷವೂ ಶಾಲೆಗೆ ದಾನದ ರೂಪದಲ್ಲಿ ಏನಾದರೊಂದು ಪರಿಕರನೀಡುತ್ತಾರೆ. ಶಾಲೆಯ ಎಲ್ಲಾ ಕೋಣೆಗಳಿಗೆ ವಿದ್ಯುತ್ ಮತ್ತು ಫ್ಯಾನ್‍ಗಳ ಸೌಕರ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.