ADVERTISEMENT

ವಿದ್ಯುತ್‌ ದರ ಪರಿಷ್ಕರಣೆಗೆ ತೀವ್ರ ವಿರೋಧ

ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರ ಮುಂದೆ ಸಮಸ್ಯೆಗಳ ನಿವೇದನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 12:02 IST
Last Updated 11 ಫೆಬ್ರುವರಿ 2019, 12:02 IST
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ ಮೀನಾ ಅವರು ಕಲಬುರ್ಗಿಯಲ್ಲಿ ಸೋಮವಾರ ಗ್ರಾಹಕರ ಅಹವಾಲು ಆಲಿಸಿದರು
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ ಮೀನಾ ಅವರು ಕಲಬುರ್ಗಿಯಲ್ಲಿ ಸೋಮವಾರ ಗ್ರಾಹಕರ ಅಹವಾಲು ಆಲಿಸಿದರು   

ಕಲಬುರ್ಗಿ: ವಿದ್ಯುತ್‌ ದರ ಪರಿಷ್ಕರಣೆ ಮಾಡುವ ಪ್ರಸ್ತಾವಕ್ಕೆ, ನಗರದಲ್ಲಿ ಸೋಮವಾರ ನಡೆದ ‘ಜೆಸ್ಕಾಂ’ ಗ್ರಾಹಕರ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ ಮೀನಾ ಅವರು ಕರೆದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ, ಹೈದರಾಬಾದ್‌ ಕರ್ನಾಟಕ ಭಾಗದ ಆರೂ ಜಿಲ್ಲೆಗಳ ಗ್ರಾಹಕ ಮುಖಂಡರು, ರೈತ ಮುಖಂಡರು, ಆರ್‌ಟಿಐ ಕಾರ್ಯಕರ್ತರು ಭಾಗವಹಿಸಿದ್ದರು. ‘ವಿದ್ಯುತ್‌ ಸರಬರಾಜು ಕಂಪನಿಯನ್ನು ಬಂದ್‌ ಮಾಡಿ. ಆದರೆ, ದರ ಹೆಚ್ಚಿಸಬೇಡಿ’ ಎಂದು ಆಕ್ರೋಶ ಹೊರಹಾಕಿದರು.

ನೀರಾವರಿ ಪಂಪ್‌ಸೆಟ್‌ಗಳ ಪ್ರತಿ ಯೂನಿಟ್‌ಗೆ ₹ 1.35, ಸಾಮಾನ್ಯ ಗ್ರಾಹಕರಿಗೆ 98 ಪೈಸೆ ಹಾಗೂ ಎಚ್‌.ಟಿ ಕೈಗಾರಿಕೆಗಳಿಗೆ 85 ಪೈಸೆ ದರ ಹೆಚ್ಚಳ ಮಾಡಲು ಜೆಸ್ಕಾಂ ಪ್ರಸ್ತಾವ ಸಲ್ಲಿಸಿದೆ.

ADVERTISEMENT

ಜೆಸ್ಕಾಂಗೆ ಕಳೆದ ಸಾಲಿನಲ್ಲಿ ₹ 351.58 ಕೋಟಿ ಕಂದಾಯ ಕೊರತೆ ಉಂಟಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ₹ 616.83 ಕೋಟಿ ಕೊರತೆ ಆಗುವ ಸಾಧ್ಯತೆ ಇದ್ದು, ಎರಡೂ ಸೇರಿ ₹ 968.41 ಕೋಟಿಯಷ್ಟು ಕಂದಾಯ ಕೊರತೆ ನಿರೀಕ್ಷಿಸಲಾಗಿದೆ. ಕಂಪನಿಯ ಮೇಲಿನ ಈ ಹೊರೆ ಇಳಿಸುವ ಸಲುವಾಗಿ ವಿದ್ಯುತ್‌ ದರ ಪರಿಷ್ಕರಣೆ ಅನಿವಾರ್ಯ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ಇದಕ್ಕೆ ತೀವ್ರ ಅಸಮಾದಾನ ವ್ಯಕ್ತಪಡಿಸಿದ ಗ್ರಾಹಕರು, ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಕಂಪನಿಯ ಅವೈಜ್ಞಾನಿಕ ನಡೆಯಿಂದ ಕಂದಾಯ ಕೊರತೆ ಉಂಟಾಗಿದೆ. ಪ್ರಸಕ್ತ ಸಾಲಿನಲ್ಲಿ ₹ 5,830.59 ಕೋಟಿ ಆದಾಯ ಕಂಪನಿಗೆ ಬರಬೇಕಿತ್ತು. ಆದರೆ, ₹ 5,213.58 ಕೋಟಿ ಮಾತ್ರ ವಸೂಲಾಗಿದೆ. ಬಾಕಿ ಇರುವ ಎಲ್ಲ ಬಿಲ್‌ಗಳನ್ನೂ ಪೂರ್ಣಪ್ರಮಾಣದಲ್ಲಿ ವಸೂಲಿ ಮಾಡಬೇಕಾದುದು ಅಧಿಕಾರಿಗಳ ಕರ್ತವ್ಯ. ಅದನ್ನು ಬಿಟ್ಟು, ಕೊರತೆ ಸರಿದೂಗಿಸಲು ಹೊರೆಯನ್ನು ಗ್ರಾಹಕರ ಮೇಲೆ ಹೇರುವುದು ಯಾವ ನ್ಯಾಯ? ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಅನಿಯಮಿತ ವಿದ್ಯುತ್‌ ಕಡಿತ, ಗ್ರಾಹಕರ ನಿರ್ಲಕ್ಷ್ಯ, ಕಳಪೆಯಾದ ದುರಸ್ತಿ ಕಾಮಗಾರಿಗಳು, ಮೀಟರ್ ಅಳವಡಿಕೆ, ವಿದ್ಯುತ್‌ ಪರಿವರ್ತಕಗಳ ಬದಲಾವಣೆ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳನ್ನು ಆಯೋಗದ ಮುಂದೆ ಇಟ್ಟರು.

ಆಯೋಗದ ಸದಸ್ಯರಾದ ಎಚ್‌.ಡಿ.ಅರುಣಕುಮಾರ, ಎಚ್‌.ಎಂ.ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.