ADVERTISEMENT

ಕಲಬುರಗಿ | ಕೆಕೆಆರ್‌ಡಿಬಿ ಹಾರ್ಟ್‌ಲೈನ್‌ಗೆ ಚಾಲನೆ ನಾಳೆ

ಸಿ.ಎಂ. ಸಿದ್ದರಾಮಯ್ಯರಿಂದ ಸೇವೆಗೆ ಚಾಲನೆ – ಡಾ.ಅಜಯ್‌ಸಿಂಗ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 6:03 IST
Last Updated 16 ಸೆಪ್ಟೆಂಬರ್ 2025, 6:03 IST
ಡಾ. ಅಜಯ್‌ ಸಿಂಗ್‌
ಡಾ. ಅಜಯ್‌ ಸಿಂಗ್‌   

ಕಲಬುರಗಿ: ‘ಇತ್ತೀಚೆಗೆ ಹೆಚ್ಚುತ್ತಿರುವ ಹೃದ್ರೋಗ ಪ್ರಕರಣಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ‌ಪ್ರದೇಶಾಭಿವೃದ್ಧಿ ಮಂಡಳಿಯಿಂದ ಆರೋಗ್ಯ ಆವಿಷ್ಕಾರ ಯೋಜನೆಯಡಿ ಹಾರ್ಟ್‌ಲೈನ್‌ ಯೋಜನೆ ಜಾರಿಗೊಳಿಸಲಾಗುವುದು’ ಎಂದು ಮಂಡಳಿಯ ಅಧ್ಯಕ್ಷ ಡಾ.ಅಜಯ್‌ ಸಿಂಗ್‌ ಹೇಳಿದರು.

‘ಹೃದಯಾಘಾತ ಸಂಭವಿಸಿದಾಗ ರೋಗಿಯ ಜೀವ ಉಳಿಸಲು ಮೊದಲ 60 ನಿಮಿಷ (ಗೋಲ್ಡನ್‌ ಅವರ್‌) ಬಹಳ ಮುಖ್ಯವಾಗುತ್ತದೆ. ಆ ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ಸಿಕ್ಕರೆ ಶೇ 80ರಷ್ಟು ಜನರ ಜೀವ ಉಳಿಸಬಹುದು. ಗ್ರಾಮೀಣ ಭಾಗದ ಜನರಲ್ಲಿ ಹೃದಯಾಘಾತವಾದರೆ ಸ್ಪಂದಿಸಲು ಈ ಹಾರ್ಟ್‌ಲೈನ್‌ ಯೋಜನೆ ಜಾರಿಗೊಳಿಸಲಾಗುತ್ತಿದೆ’ ಎಂದು ನಗರದ ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಕೆಕೆಆರ್‌ಡಿಬಿ, ಆರೋಗ್ಯ ಇಲಾಖೆಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಹಾರ್ಟ್‌ಲೈನ್‌ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.17ರಂದು ಚಾಲನೆ ನೀಡಲಿದ್ದಾರೆ. ಕೆಕೆಆರ್‌ಡಿಬಿ ₹9.60 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ 32 ಆಂಬುಲೆನ್ಸ್‌ಗಳನ್ನು ಖರೀದಿಸಿದೆ. ಇದರಲ್ಲಿ ಕಲಬುರಗಿ ಜಿಲ್ಲೆಗೆ 9, ಕೊಪ್ಪಳಕ್ಕೆ 5, ರಾಯಚೂರಿಗೆ 5, ಬೀದರಗೆ 4, ಬಳ್ಳಾರಿಗೆ 4, ವಿಜಯನಗರಕ್ಕೆ 3, ಯಾದಗಿರಿ ಜಿಲ್ಲೆಗೆ 2 ಆಂಬುಲೆನ್ಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಈ ಸುಸಜ್ಜಿತ ಆಂಬುಲೆನ್ಸ್‌ಗಳು ಕಾರ್ಡಿಯಾಕ್ ಮಾನಿಟರ್, ಡೆಫಿಬ್ರಿಲೇಟರ್, ಪೋರ್ಟೇಬಲ್ ವೆಂಟಿಲೇಟರ್, ಅಂಬು ಬ್ಯಾಗ್, ಜೀವ ರಕ್ಷಕ ಔಷಧಗಳನ್ನು ಒಳಗೊಂಡಿರಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕಳೆದ ಮೂರು ವರ್ಷಗಳಲ್ಲಿ ಜಯದೇವ ಆಸ್ಪತ್ರೆಯಿಂದ 61,299 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ 1,004 ಮಂದಿ ಹೃದಯಾಘಾತದಿಂದ ಅಸುನೀಗಿದ್ದಾರೆ. ಅದರಲ್ಲಿ 477 ಮಂದಿ 45ಕ್ಕೂ ಕಡಿಮೆ ವಯಸ್ಸಿನವರು. ಒತ್ತಡ, ಜೀವನಶೈಲಿ ಸೇರಿದಂತೆ ಹಲವು ಕಾರಣಗಳಿಂದ ಇತ್ತೀಚೆಗೆ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಈಗಾಗಲೇ ಸ್ಟೆಮ್‌ಐ ಯೋಜನೆ ಜಾರಿಗೊಳಿಸಿದೆ. ಅದನ್ನು ಬಳಸಿಕೊಂಡು ಈ ಆಂಬುಲೆನ್ಸ್‌ಗಳ ನೆರವಿನಿಂದ ಕೆಕೆಆರ್‌ಡಿಬಿ ಹಾರ್ಟ್‌ಲೈನ್‌ ಕಾರ್ಯನಿರ್ವಹಿಸಲಿದೆ’ ಎಂದರು.‌

‘ಮಂಡಳಿಯಿಂದ ಕಳೆದ‌ ಎರಡು ವರ್ಷಗಳಲ್ಲಿ ‘ಆರೋಗ್ಯ ಆವಿಷ್ಕಾರ’ ಯೋಜನೆಯಡಿ ₹2 ಸಾವಿರ ಕೋಟಿಗಳಷ್ಟು ಅನುದಾನ ಒದಗಿಸಿದ್ದೇವೆ. ಕಲ್ಯಾಣ ಭಾಗದ ಆರೋಗ್ಯ ಇಲಾಖೆಯ ಹಲವು ಕಾಮಗಾರಿಗಳಿಗೆ ವೆಚ್ಚದ ಮೂರನೇ ಒಂದು ಭಾಗ ಅನುದಾನವನ್ನು ಕೆಕೆಆರ್‌ಡಿಬಿ ನೀಡಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್‌ ಅತುಲ್‌, ಉಪಕಾರ್ಯದರ್ಶಿ ಮಂಜುನಾಥ ಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ, ಉಪನಿರ್ದೇಶಕ ಡಾ.ಅಂಬರಾಯ ರುದ್ರವಾಡಿ, ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ ಇದ್ದರು.

ಹಾರ್ಟ್‌ಲೈನ್‌ ಯೋಜನೆಯ ಯಶಸ್ಸು ಆಧರಿಸಿ ಭವಿಷ್ಯದಲ್ಲಿ ಈ ಸೇವೆಯನ್ನು ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟಕ್ಕೆ ವಿಸ್ತರಿಸುವ ಗುರಿಯಿದೆ
ಡಾ.ಅಜಯ್‌ ಸಿಂಗ್‌ ಕೆಕೆಆರ್‌ಡಿಬಿ ಅಧ್ಯಕ್ಷ
‘ಹಬ್‌ ಅಂಡ್‌ ಸ್ಫೋಕ್ಸ್‌’
ಮಾದರಿ ಕೆಲಸ’ ‘ಕೆಕೆಆರ್‌ಡಿಬಿ ಹಾರ್ಟ್‌ಲೈನ್‌ ಯೋಜನೆಯು ಹಬ್‌ ಅಂಡ್‌ ಸ್ಫೋಕ್‌ ಮಾದರಿಯಲ್ಲಿ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆಯಿಲ್ಲ. ‘108’ಗೆ ಕರೆ ಮಾಡಿದರೆ ಸಾಕು ಅದು ಬೆಂಗಳೂರಿನ ಕೇಂದ್ರ ಕಚೇರಿಗೆ ರವಾನೆಯಾಗುತ್ತದೆ. ಅಲ್ಲಿ ಹೃದ್ರೋಗ ಸಮಸ್ಯೆಯ ತೀವ್ರತೆಯ ಆಧಾರದಲ್ಲಿ ಕ್ರಿಟಿಕಲ್‌ ಮಾಡರೇಟ್‌ ಹಾಗೂ ಸಬ್‌ ಸ್ಟೇಬಲ್‌ ವಿಭಾಗಗಳಾಗಿ ವಿಂಗಡಿಸಿ ಚಿಕಿತ್ಸೆಗೆ ಮಾರ್ಗದರ್ಶನ ನೀಡುತ್ತಾರೆ’ ಎಂದು ಡಾ.ಅಜಯ್‌ ಸಿಂಗ್ ವಿವರಿಸಿದರು. ‘100ರಿಂದ 120 ಕಿ.ಮೀ ವ್ಯಾಪ್ತಿಯಲ್ಲಿ ಆಂಬುಲೆನ್ಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಕಲಬುರಗಿ ಬೀದರ್‌ ಯಾದಗಿರಿ ರಾಯಚೂರಿನ ಆಂಬುಲೆನ್ಸ್‌ಗಳಿಗೆ ಕಲಬುರಗಿ ಜಯದೇವ ಆಸ್ಪತ್ರೆ ಹಬ್‌ ಆಗಿರಲಿದೆ. ಅಂತೆಯೇ ಕೊಪ್ಪಳ ಜಿಲ್ಲೆಗೆ ಬಾಗಲಕೋಟೆಯ ನಿಜಲಿಂಗಪ್ಪ ಮೆಡಿಕಲ್‌ ಕಾಲೇಜು ಆಸ್ಪತ್ರೆ ವಿಜಯನಗರ ಬಳ್ಳಾರಿಗೆ ಬಳ್ಳಾರಿ ಆಸ್ಪತ್ರೆ ಚಿಕಿತ್ಸಾ ಹಬ್‌ ಆಗಿರಲಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.