
ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ 371(ಜೆ) ಕಾಯ್ದೆಯಡಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನ ಕೊಟ್ಟು ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಮ್ಯಾಚಿಂಗ್ ಗ್ರ್ಯಾಂಟ್ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಟೀಕಿಸಿದರು.
‘ವಿದರ್ಭ ಮಾದರಿಯಲ್ಲಿ ಕೆಕೆಆರ್‌ಡಿಬಿ ಮೂಲಕ ಕಲ್ಯಾಣ ಕರ್ನಾಟಕಕ್ಕೂ ಮ್ಯಾಚಿಂಗ್ ಗ್ರ್ಯಾಂಟ್ ಕೊಡುವಂತೆ ಒತ್ತಡ ಹೇರಲು ಸರ್ಕಾರದಿಂದ ನಿರ್ಣಯ ಅಂಗೀಕರಿಸಲಾಗಿದೆ. ಈ ಕುರಿತು ಹಿಂದೆಯೇ ಮುಖ್ಯಮಂತ್ರಿ ಮೂಲಕ ಪ್ರಧಾನಿ ಅವರಿಗೆ ಕೆಕೆಆರ್‌ಡಿಬಿಯಿಂದ ಮನವಿಯನ್ನೂ ಮಾಡಲಾಗಿದೆ’ ಎಂದು ನಗರದ ಕೆಕೆಆರ್‌ಡಿಬಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘371(ಜೆ) ಕಾಯ್ದೆಯ ಫಲವಾಗಿ 2013ರಿಂದ 2025ರ ತನಕ ರಾಜ್ಯ ಸರ್ಕಾರದಿಂದ ₹24,878 ಕೋಟಿ ಅನುದಾನ ಮಂಜೂರಾಗಿದೆ. ರಾಜ್ಯದಲ್ಲಿ ಕಳೆದ 20 ವರ್ಷಗಳಲ್ಲಿ ಬಿಜೆಪಿಯವರು 11 ವರ್ಷ ಆಡಳಿತ ನಡೆಸಿದ್ದಾರೆ. ನಾವು 9 ವರ್ಷ ಆಡಳಿತ ನಡೆಸಿದ್ದೇವೆ. ₹24.878 ಸಾವಿರ ಕೋಟಿ ಪೈಕಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹17 ಸಾವಿರ ಕೋಟಿಗೂ ಹೆಚ್ಚು ಅನುದಾನ ಕೊಟ್ಟರೆ, ಬಿಜೆಪಿ ₹6 ಸಾವಿರ ಕೋಟಿಗಳಷ್ಟು ಅನುದಾನ ಕೊಟ್ಟಿದೆ. ಒಂದೊಮ್ಮೆ ಕೇಂದ್ರ ಸರ್ಕಾರವೂ ವಿದರ್ಭ ಮಾದರಿಯಲ್ಲಿ ನಮ್ಮ ಭಾಗಕ್ಕೆ ₹25 ಸಾವಿರ ಕೋಟಿ ಅನುದಾನ ಕೊಟ್ಟಿದ್ದರೆ, ಅಭಿವೃದ್ಧಿಯಲ್ಲಿ ಮಿಂಚುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.
‘ಮ್ಯಾಚಿಂಗ್ ಗ್ರ್ಯಾಂಟ್ ಪಡೆಯಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ನಡೆಸಿದೆ. ಈ ಕುರಿತು ಪ್ರಧಾನಿ, ಕೇಂದ್ರ ಹಣಕಾಸು ಸಚಿವರು ಹಾಗೂ ವೇತನ ಆಯೋಗಕ್ಕೆ ಮನವಿ ಕೊಡಲಾಗಿದೆ. ಆದರೂ, ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಲು ಪಕ್ಷಾತೀತವಾಗಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಚಿಂತಿಸಿದ್ದು, ಇದನ್ನು ಮುಖ್ಯಮಂತ್ರಿ ಅವರು ನಿರ್ಧರಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಶಿಕ್ಷಣ ತಜ್ಞೆ ಛಾಯಾ ದೇಗಾಂವಕರ್ ನೇತೃತ್ವದ ತಜ್ಞರ ಸಮಿತಿ ಈಗಾಗಲೆ ಡಿಸೆಂಬರ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ವರದಿ ಸಲ್ಲಿಸಿದೆ. ಶಿಕ್ಷಣದ ಗುಣಮಟ್ಟ ಸುಧಾರಣಾ ಕ್ರಮಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಅಜಯ್ ಸಿಂಗ್ ಹೇಳಿದರು.
‘ಪ್ರಸ್ತುತ ರಾಜ್ಯದಲ್ಲಿ 247 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಕಲ್ಯಾಣದಲ್ಲಿ ಕೇವಲ 60 ಶಾಲೆಗಳಿವೆ. ಮುಂದಿನ ಒಂದು ವರ್ಷದಲ್ಲಿ ಮಂಡಳಿಯಿಂದ 200, ಶಿಕ್ಷಣ ಇಲಾಖೆಯಿಂದ 100 ಕೆಪಿಎಸ್ ಶಾಲೆಗಳು ಈ ಭಾಗದಲ್ಲಿ ತಲೆ ಎತ್ತಲಿವೆ. ಈ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಧಾರಣೆಗೆ ₹3.44 ಕೋಟಿ ಖರ್ಚು ಮಾಡಲಾಗುತ್ತಿದೆ’ ಎಂದರು.
ಮಲತಾಯಿ ಧೋರಣೆ: ‘ಕೇಂದ್ರ ಸರ್ಕಾರವು 15ನೇ ಹಣಕಾಸು, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ರಾಜ್ಯಕ್ಕೆ ಹಂಚಿಕೆಯಾದ ₹1.25 ಲಕ್ಷ ಕೋಟಿ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ, ಬೆಂಗಳೂರು ಅಭಿವೃದ್ದಿ, 15ನೇ ಹಣಕಾಸು ಅಡಿ ಘೋಷಣೆ ಮಾಡಿದ ಅನುದಾನದಲ್ಲಿ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ’ ಎಂದು ಡಾ.ಅಜಯ್ ಸಿಂಗ್ ಟೀಕಿಸಿದರು.
ಕೆಕೆಆರ್‌ಡಿಬಿಗೆ ಬರುವ ಯಾವುದೇ ಅನುದಾನ ಲ್ಯಾಪ್ಸ್ ಆಗಲ್ಲ. 2025-26ನೇ ಸಾಲಿನಲ್ಲಿ ಮಾರ್ಚ್ 31ರೊಳಗೆ ₹4000 ಕೋಟಿ ಅನುದಾನ ವಿನಿಯೋಗಿಸುವ ಗುರಿಯಿದೆಡಾ.ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ
‘ಹೆಸರು ಬದಲಿಸುವ ಮೈತ್ರಿಕೂಟ’
‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಬರೀ ಯುಪಿಎ ಆಡಳಿತಾವಧಿಯಲ್ಲಿ ಜಾರಿಗೊಂಡ ಯೋಜನೆಗಳ ಹೆಸರು ಬದಲಾವಣೆಯಲ್ಲೇ ತೊಡಗಿದೆ. ಎನ್‌ಡಿಎ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಅಲ್ಲ ಅದು ಬರೀ ನೇಮ್ ಡೆವಲಪಿಂಗ್ ಏಜೆನ್ಸಿಯಾಗಿದೆ’ ಎಂದು ಡಾ. ಅಜಯ್ ಸಿಂಗ್ ಟೀಕಿಸಿದರು. ‘ಮಹಾತ್ಮ ಗಾಂಧಿ ನರೇಗಾ ಯೋಜನೆ ಹೆಸರು ಬದಲಿಸಿ ವಿಬಿ–ಜಿ–ರಾಮ್–ಜಿ ಹೆಸರಿಡುವ ಮೂಲಕ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಅವರನ್ನು ಅವಮಾನಿಸಿದೆ. ಬಿಜೆಪಿಯವರ ಮಾತಿನಲ್ಲಷ್ಟೇ ಗಾಂಧಿ ಹೆಸರಿದೆ. ಮನಸಲ್ಲಿ ಮಾತ್ರ ಗೋಡ್ಸೆ ಹೆಸರಿದೆ’ ಎಂದು ವ್ಯಂಗ್ಯವಾಡಿದರು.
ಜನ್ಮದಿನ ಇಂದು
ದಿ.ಧರ್ಮ್‌ಸಿಂಗ್ ಅವರ 89ನೇ ಜನ್ಮದಿನ ಆಚರಣೆ ಅಂಗವಾಗಿ ಜೇವರ್ಗಿ ಹೊರವಲಯದ ಕಟ್ಟಿಸಂಗಾವಿ ಹತ್ತಿರ ಗುರುವಾರ ಮ್ಯೂಸಿಯಂ ಹಾಗೂ ಧರ್ಮ್‌ಸಿಂಗ್ ಅವರ ಪುತ್ಥಳಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಕುಟುಂಬ ಸದಸ್ಯರು ಹಾಗೂ ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಮುಖಂಡರು ಭಾಗವಹಿಸುವರು ಎಂದು ಡಾ. ಅಜಯ್ ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.