ADVERTISEMENT

ಕೆಕೆಆರ್‌ಡಿಬಿ ವತಿಯಿಂದ ₹ 1100 ಕೋಟಿ ವೆಚ್ಚದಲ್ಲಿ 350 KPS ಶಾಲೆ: ಅಜಯ್ ಸಿಂಗ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:11 IST
Last Updated 15 ಸೆಪ್ಟೆಂಬರ್ 2025, 5:11 IST
ಅಜಯ್ ಸಿಂಗ್‌
ಅಜಯ್ ಸಿಂಗ್‌   

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಸುಮಾರು ₹ 1100 ಕೋಟಿ ವೆಚ್ಚದಲ್ಲಿ 350 ಕರ್ನಾಟಕ ಪಬ್ಲಿಕ್ ಸ್ಕೂಲ್‌ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ತಿಳಿಸಿದರು.

ಮಂಡಳಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಾಗಬೇಕಾದರೆ ಮಕ್ಕಳಿಗೆ ಎಲ್‌ಕೆಜಿಯಿಂದಲೇ ಉತ್ತಮ ಶಿಕ್ಷಣ ಕೊಡಿಸುವುದು ಅವಶ್ಯವಾಗಿದೆ. ಆದ್ದರಿಂದ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಕೆಪಿಎಸ್ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ ಮಂಡಳಿಯಿಂದ 200 ಕೆಪಿಎಸ್ ಶಾಲೆಗಳನ್ನು ನಿರ್ಮಿಸಲಾಗುವುದು. ಎರಡು ಗ್ರಾ.ಪಂ.ಗಳಿಗೆ ಒಂದರಂತೆ ಶಾಲೆಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ₹ 3ರಿಂದ ₹ 5 ಕೋಟಿ ವೆಚ್ಚ ಮಾಡಲಾಗುವುದು. ಕಳೆದ ಸೆ 4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಣ ಇಲಾಖೆಯಿಂದ 500 ಕೆಪಿಎಸ್‌ ಶಾಲೆಗಳನ್ನು ಏಷಿಯನ್ ಡೆವಲಪ್‌ಮೆಂಟ್‌ ಬ್ಯಾಂಕ್‌ನ ಸಾಲದಲ್ಲಿ 500 ಹೊಸ ಶಾಲೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಅದರಲ್ಲಿ 150 ಕೆಪಿಎಸ್‌ ಶಾಲೆಗಳು ಕಲ್ಯಾಣ ಕರ್ನಾಟಕದಲ್ಲಿಯೇ ನಿರ್ಮಾಣವಾಗಲಿವೆ. ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಕಡೆ ಮಕ್ಕಳು ಓದಿದಂತಾಗುತ್ತದೆ. ಮಂಡಳಿ ವತಿಯಿಂದ ಮಕ್ಕಳನ್ನು ಕರೆತರಲು ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗುವುದು’ ಎಂದರು.

ಮೂರು ವರ್ಷ ಶಿಕ್ಷಕರಿಗೆ ವೇತನ: ಕೆಪಿಎಸ್ ಶಾಲೆಗಳಿಗೆ ನೇಮಕವಾಗುವ ಶಿಕ್ಷಕರಿಗೆ ಮೊದಲ ಮೂರು ವರ್ಷದ ವೇತನವನ್ನು ಮಂಡಳಿಯೇ ಭರಿಸಲಿದೆ. ಅಕ್ಷರ ಆವಿಷ್ಕಾರ ಯೋಜನೆಯನ್ನು ಇನ್ನೂ ಐದು ವರ್ಷ ವಿಸ್ತರಿಸಲಾಗುವುದು’ ಎಂದು ಪ್ರಕಟಿಸಿದರು.  

ADVERTISEMENT

‘ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ ಸರಾಸರಿ 4ರಿಂದ 6 ಶಾಲೆಗಳು ಮಂಜೂರಾಗಲಿವೆ’ ಎಂದರು.

ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ರಚಿಸಲಾದ ಪ್ರೊ.ಛಾಯಾ ದೇಗಾಂವಕರ್ ನೇತೃತ್ವದ ಸಮಿತಿಗೆ ಮತ್ತೊಂದು ಮಧ್ಯಂತರ ವರದಿಯನ್ನು ಶೀಘ್ರ ನೀಡುವಂತೆ ಕೋರಲಾಗಿದೆ
ಡಾ. ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ
ಮಂಡಳಿಯಿಂದ ₹ 6224 ಕೋಟಿ ಖರ್ಚು
ಕೆಕೆಆರ್‌ಡಿಬಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರ್ಕಾರ ₹ 13 ಸಾವಿರ ಕೋಟಿ ಅನುದಾನ ಘೋಷಿಸಿದೆ. ಇದರಲ್ಲಿ ₹ 8 ಸಾವಿರ ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಒಪ್ಪಿಗೆ ಪಡೆಯಲಾಗಿದೆ. ನಾನು ಅಧಿಕಾರ‌ ವಹಿಸಿಕೊಂಡ 27 ತಿಂಗಳ ಅವಧಿಯಲ್ಲಿ ₹ 6224 ಕೋಟಿ ಅನುದಾನ ಖರ್ಚು ಮಾಡಲಾಗಿದೆ ಎಂದು ಅಜಯ್ ಸಿಂಗ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.