
ಕಲಬುರಗಿ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಕೆಆರ್‌ಟಿಸಿ) ತನ್ನ ಸಿಬ್ಬಂದಿಗೆ ₹1.20 ಕೋಟಿ ಪ್ರೀಮಿಯಂ ರಹಿತ ಅಪಘಾತ ವಿಮಾ ಯೋಜನೆ ಜಾರಿಗೆ ತಂದಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆ ಕೆಕೆಆರ್‌ಟಿಸಿ ಒಡಂಬಡಿಕೆ ಮಾಡಿಕೊಂಡಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲಿ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಹಾಗೂ ಯೂನಿಯನ್ ಬ್ಯಾಂಕ್ ಕರ್ನಾಟಕ ವಲಯ ಮುಖ್ಯಸ್ಥ ನವನೀತ್ ಕುಮಾರ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಆ ಬಳಿಕ ಪತ್ರಗಳನ್ನು ಹಸ್ತಾಂತರ ಮಾಡಿಕೊಂಡರು.
ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ‘ಈ ಯೋಜನೆಯಡಿ ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಅವರ ಅವಲಂಬಿತರಿಗೆ ₹1.20 ಕೋಟಿ ಅಪಘಾತ ವಿಮೆ ಪರಿಹಾರ ಸಿಗಲಿದೆ. ನೌಕರರು ಶಾಶ್ವತ ಅಂಗ ನ್ಯೂನತೆ, ಭಾಗಶಃ ಅಂಗ ನ್ಯೂನತೆ
ಒಳಗಾಗಿದ್ದಲ್ಲಿ ₹1 ಕೋಟಿ ವಿಮೆ ಪಡೆಯಬಹುದು. ಡೆಬಿಟ್ ಕಾರ್ಡ್ ಮೇಲೆ ₹15 ಲಕ್ಷ ಅಪಘಾತ ವಿಮಾ ಸೌಲಭ್ಯ ಇರಲಿದ್ದು, ಸ್ವಾಭಾವಿಕ ಮರಣಕ್ಕೆ ₹5 ಲಕ್ಷ ವಿಮೆ ಸಿಗಲಿದೆ’ ಎಂದು ವಿವರಿಸಿದರು.
‘ದೇಶದ ಸಾರಿಗೆ ಸಂಸ್ಥೆಗಳಲ್ಲಿ ಮೊದಲ ಬಾರಿಗೆ ಕೆಕೆಆರ್‌ಟಿಸಿಯು ₹ 1.20 ಕೋಟಿ ಅಪಘಾತ ವಿಮೆಯನ್ನು ತನ್ನ ನೌಕರರಿಗಾಗಿ ಜಾರಿಗೆ ತರುತ್ತಿದೆ’ ಎಂದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್, ಕೆಎಸ್‌ಆರ್‌ಟಿಸಿ ನಿರ್ದೇಶಕಿ ಕೆ.ನಂದಿನಿ ದೇವಿ, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥ ವೆಂಕಟ್ ಸುಧೀರ್
ಚಿದೆಲ್ಲ, ಸಿಆರ್‌ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಿ. ಆರ್. ನಾಗಭೂಷಣ, ಮುಖ್ಯ ವ್ಯವಸ್ಥಾಪಕ ನಾಗರಾಜ್ ದೇಶನೂರು ಪಾಲ್ಗೊಂಡಿದ್ದರು.
ಪ್ರತಿಯೊಬ್ಬರಿಗೂ ವಿಮೆ ಅನ್ವಯ: ರಾಚಪ್ಪ
‘ಕೆಕೆಆರ್‌ಟಿಸಿಯ ಎಂಡಿಯಿಂದ ಹಿಡಿದು ಪ್ರತಿಯೊಬ್ಬರಿಗೂ ₹1.20 ಕೋಟಿ ಪ್ರೀಮಿಯಂ ರಹಿತ ಅಪಘಾತ ವಿಮಾ ಅನ್ವಯವಾಗಲಿದೆ. ಯಾವುದೇ ಅಪಘಾತದಲ್ಲಿ ಮೃತಪಟ್ಟರೂ ನೌಕರರು ಸೂಚಿಸಿದ ಕುಟುಂಬದ ಸದಸ್ಯರಿಗೆ ವಿಮಾ ಮೊತ್ತ ಸಿಗಲಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸಂಸ್ಥೆಯಲ್ಲಿ ಸುಮಾರು 18500 ಸಿಬ್ಬಂದಿ ಇದ್ದಾರೆ. 3000 ನೌಕರರು ಯೂನಿಯನ್ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಈ ವಿಮೆ ಪಡೆಯಲು ಇಚ್ಛಿಸುವವರು ತಮ್ಮ ವೇತನ ಖಾತೆಯನ್ನು ಯೂನಿಯನ್ ಬ್ಯಾಂಕ್‌ಗೆ ವರ್ಗಾಯಿಸಬೇಕು. ಜತೆಗೆ ಸಂಸ್ಥೆ ನೀಡುವ ಅರ್ಜಿಯನ್ನು ಎಲ್ಲರೂ ಭರ್ತಿ ಮಾಡಿ ಕೊಡಬೇಕು. ಪ್ರತಿ ಘಟಕದಲ್ಲಿ ವ್ಯವಸ್ಥಾಪಕರ ಮೂಲಕ ಅರ್ಜಿಗಳನ್ನು ನೀಡಲಾಗುವುದು. ನೌಕರರ ಮಕ್ಕಳಿಗೆ ₹ 15 ಸಾವಿರ ಶೈಕ್ಷಣಿಕ ಸಹಾಯಧನವೂ ಸಿಗಲಿದೆ. ಸಾರಿಗೆ ಸಚಿವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಬೇರೆ ನಿಗಮಗಳು ಸಹ ಇಂತಹ ಯೋಜನೆ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.