ADVERTISEMENT

KKRTC | ಮೊದಲ ಬಾರಿಗೆ ‘ಕಲ್ಯಾಣರಥ’ ಆರಂಭ: ಸಿಂಧನೂರಿನಿಂದ ಬೆಂಗಳೂರಿಗೆ ಸಂಚಾರ

28ರಿಂದ ಸಿಂಧನೂರು–ಬೆಂಗಳೂರು ಮಧ್ಯೆ ವೋಲ್ವೊ ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಬಸ್ ಸಂಚಾರ

ಮನೋಜ ಕುಮಾರ್ ಗುದ್ದಿ
Published 27 ಆಗಸ್ಟ್ 2023, 5:48 IST
Last Updated 27 ಆಗಸ್ಟ್ 2023, 5:48 IST
ನಾಳೆಯಿಂದ ಸಂಚಾರ ಆರಂಭಿಸಲಿರುವ ಕಲ್ಯಾಣ ರಥ ಹೆಸರಿನ ವೋಲ್ವೊ ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಬಸ್
ನಾಳೆಯಿಂದ ಸಂಚಾರ ಆರಂಭಿಸಲಿರುವ ಕಲ್ಯಾಣ ರಥ ಹೆಸರಿನ ವೋಲ್ವೊ ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಬಸ್   

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ವು ಆರಂಭವಾದ 23 ವರ್ಷಗಳ ಬಳಿಕ ಮೊದಲ ಬಾರಿಗೆ ಇದೇ 28ರಿಂದ ಐಷಾರಾಮಿ ವೋಲ್ವೊ ಮಲ್ಟಿ ಆ್ಯಕ್ಸೆಲ್ ಎ.ಸಿ. ಸ್ಲೀಪರ್ ಬಸ್ (ಕಲ್ಯಾಣ ರಥ) ಸೇವೆಯನ್ನು ಆರಂಭಿಸಲಿದ್ದು, ಪ್ರಯಾಣಿಕರಿಗೆ ‘ಹಿತಾನುಭವ’ ನೀಡಲು ಮುಂದಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು–ಬೆಂಗಳೂರು ಮಧ್ಯೆ ಅಂದು ಮಧ್ಯಾಹ್ನ 12ಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೂತನ ಬಸ್‌ ಲೋಕಾರ್ಪಣೆ ಮಾಡಲಿದ್ದು, ಅಂದು ರಾತ್ರಿ 10ಕ್ಕೆ ತನ್ನ ಮೊದಲ ಪ್ರಯಾಣವನ್ನು ಆರಂಭಿಸಲಿದೆ.

ಕೆಕೆಆರ್‌ಟಿಸಿಯು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ₹ 40 ಕೋಟಿ ಅನುದಾನ ಹಾಗೂ ಬ್ಯಾಂಕಿನಿಂದ ಸಾಲ ಪಡೆದು ₹ 330 ಕೋಟಿ ವೆಚ್ಚದಲ್ಲಿ ಆರು ವೋಲ್ವೊ, 30 ನಾನ್ ಎ.ಸಿ. ಸ್ಲೀಪರ್ ಸೇರಿದಂತೆ 802 ಬಸ್‌ಗಳನ್ನು ಖರೀದಿಸುತ್ತಿದೆ. ಮೊದಲ ಹಂತದಲ್ಲಿ 380ಕ್ಕೂ ಅಧಿಕ ಎಕ್ಸ್‌ಪ್ರೆಸ್ ಬಸ್ ಹಾಗೂ ಎರಡು ವೋಲ್ವೊ ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಬಸ್‌ಗಳು ನಿಗಮಕ್ಕೆ ಬಂದಿವೆ.

ADVERTISEMENT

ಮೊದಲಿಗೆ ನಿಗಮದ ಕೇಂದ್ರ ಕಚೇರಿ ಇರುವ ಕಲಬುರಗಿಯಿಂದಲೇ ಬೆಂಗಳೂರಿಗೆ ವೋಲ್ವೊ ಬಸ್ ಸೇವೆಯನ್ನು ಆರಂಭಿಸಲು ಚಿಂತನೆ ನಡೆದಿತ್ತು. ಆದರೆ, ಕಲಬುರಗಿಯಿಂದ ಬೆಂಗಳೂರಿಗೆ ನಿಗಮದಿಂದ ಎ.ಸಿ. ಬಸ್ ಸೇವೆ ಈಗಾಗಲೇ ಇದೆ. ಜೊತೆಗೆ, ವಿಮಾನ, ರೈಲುಗಳ ಸಂಚಾರವೂ ಇರುವುದರಿಂದ ಇನ್ನೊಂದು ತಿಂಗಳಲ್ಲಿ ಬರುವ ಮತ್ತೆರಡು ವೋಲ್ವೊ ಬಸ್‌ಗಳನ್ನು ಇಲ್ಲಿಂದ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ರಾಯಚೂರು ಜಿಲ್ಲೆಯಿಂದ ಸದ್ಯಕ್ಕೆ ನಿಗಮದಿಂದ ಎ.ಸಿ. ಬಸ್ ಸೇವೆ ಇಲ್ಲ. ಹೀಗಾಗಿ, ಮೊದಲ ಎರಡು ಬಸ್‌ಗಳು ರಾಯಚೂರಿನ ಸಿಂಧನೂರಿನಿಂದ ಸಂಚರಿಸಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸದ್ಯಕ್ಕೆ ಎರಡು ವೋಲ್ವೊ ಬಸ್‌ಗಳನ್ನು ರಾಯಚೂರು ಜಿಲ್ಲೆಗೆ ನಿಯೋಜಿಸಲಾಗಿದ್ದು, 28ರಿಂದ ರಾತ್ರಿ ಒಂದು ಬಸ್ ಸಿಂಧನೂರಿನಿಂದ ಹೊರಟರೆ, ಮತ್ತೊಂದು ಬಸ್ ಬೆಂಗಳೂರಿನಿಂದ ಸಿಂಧನೂರಿಗೆ ಬರಲಿದೆ. ಒಂದು ತಿಂಗಳಲ್ಲಿ ನಾಲ್ಕು ವೋಲ್ವೊ ಬಸ್‌ಗಳು ನಿಗಮಕ್ಕೆ ಸೇರ್ಪಡೆಯಾಗಲಿದ್ದು, ಅವುಗಳನ್ನು ಕಲಬುರಗಿ ಹಾಗೂ ವಿಜಯಪುರದಿಂದ ಓಡಿಸುವ ಸಾಧ್ಯತೆ ಇದೆ.

ಎಂ. ರಾಚಪ್ಪ
ಅಂಕಿ ಅಂಶಗಳು ₹ 1.70 ಕೋಟಿ ವೋಲ್ವೊ ಮಲ್ಟಿ ಆ್ಯಕ್ಸೆಲ್‌ ಬಸ್‌ನ ದರ 40 ಬಸ್‌ನಲ್ಲಿರುವ ಸೀಟುಗಳು 6 ನಿಗಮಕ್ಕೆ ಸೇರ್ಪಡೆಯಾಗಲಿರುವ ವೋಲ್ವೊ ಬಸ್‌ ಸಂಖ್ಯೆ 2 ಮೊದಲ ಹಂತದಲ್ಲಿ ಸೇವೆ ಪ್ರಾರಂಭಿಸುವ ವೋಲ್ವೊ ಬಸ್‌ಗಳು
ನಿಗಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವೋಲ್ವೊ ಮಲ್ಟಿ ಆ್ಯಕ್ಸೆಲ್ ಬಸ್ ಸಂಚಾರ ಸಿಂಧನೂರಿನಿಂದ ಆರಂಭಗೊಳ್ಳಲಿದೆ. ಕೆಲ ದಿನಗಳಲ್ಲಿ ಕಲಬುರಗಿಯಿಂದಲೂ ಸೇವೆ ಆರಂಭಗೊಳ್ಳಲಿದೆ
ಎಂ. ರಾಚಪ್ಪ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ
ಹಲವು ವೈಶಿಷ್ಟ್ಯಗಳ ವೋಲ್ವೊ ಬಸ್
ನಿಗಮದ ವ್ಯಾಪ್ತಿಯಲ್ಲಿ ಇದೇ 28ರಿಂದ ಕಾರ್ಯಾಚರಣೆ ನಡೆಸುವ ವೋಲ್ವೊ ಮಲ್ಟಿ ಆ್ಯಕ್ಸೆಲ್ ಎ.ಸಿ. ಸ್ಲೀಪರ್ ಬಸ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅತ್ಯಾಧುನಿಕ ಬಿಎಸ್‌–6 ಎಂಜಿನ್ ಹೊಂದಿರುವ ಈ ಬಸ್‌ನಲ್ಲಿ 40 ಸ್ಲೀಪರ್‌ ಸೀಟುಗಳಿವೆ. ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಜೊತೆಗೆ ಲ್ಯಾಪ್‌ಟಾಪ್‌ ಬ್ಯಾಗ್ ಇರಿಸಲು ಪ್ರತ್ಯೇಕ ಜಾಗವನ್ನು ವಿನ್ಯಾಸಗೊಳಿಸಲಾಗಿದೆ. ಬೆಂಕಿ ನಂದಿಸುವ ಉಪಕರಣ ಜಿಪಿಎಸ್‌ ವ್ಯವಸ್ಥೆ ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ ಸ್ವಯಂ ಚಾಲಿತ ಹಿಂಬದಿ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ಕೆಟ್ಟ ರಸ್ತೆಯಲ್ಲಿಯೂ ಬಸ್ ಅಲುಗಾಡುವುದನ್ನು ನಿಯಂತ್ರಿಸಲು ವಿಶಿಷ್ಟ ಸಸ್ಪೆನ್ಸರ್‌ಗಳನ್ನು ಅಳವಡಿಸಲಾಗಿದೆ. ಬಸ್‌ನಲ್ಲಿ ಮಂದವಾದ ಬೆಡ್‌ಲೈಟ್ ಇರಲಿದೆ. ಪ್ರತಿ ದಿನ ರಾತ್ರಿ 10ಕ್ಕೆ ಸಿಂಧನೂರಿನಿಂದ ಹೊರಡುವ ಬಸ್ ಮರುದಿನ ಬೆಳಿಗ್ಗೆ 5.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ನಿತ್ಯ 10.15ಕ್ಕೆ ಹೊರಟು ಮರುದಿನ ಬೆಳಿಗ್ಗೆ 5.45ಕ್ಕೆ ಸಿಂಧನೂರು ತಲುಪಲಿದೆ. ಸಿಂಧನೂರಿನಿಂದ ಬೆಂಗಳೂರಿಗೆ ₹ 1250 ಪ್ರಯಾಣದರ ನಿಗದಿಪಡಿಸಲಾಗಿದೆ. ಶರಣರು ಬದುಕಿದ್ದ ಕಲ್ಯಾಣವನ್ನು ಬಿಂಬಿಸಲು ಬಸ್‌ಗೆ ಕಲ್ಯಾಣ ರಥ ಎಂದು ಹೆಸರಿಡಲಾಗಿದ್ದು ಹಂಪಿ ಕಲ್ಲಿನ ರಥದ ಚಿತ್ರವನ್ನು ಬಸ್ ಮೇಲೆ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.