ಕಲಬುರಗಿ: ಕೋಲಿ, ಕಬ್ಬಲಿಗ ಹಾಗೂ ತಳವಾಳ ಸಮಾಜಗಳವರು ಒಗ್ಗಟ್ಟಾಗಬೇಕು ಮತ್ತು ಪಕ್ಷಭೇದ ಮರೆತು ಹೋರಾಟ ರೂಪಿಸಬೇಕು ಎಂದು ಇಲ್ಲಿ ನಡೆದ ಸಭೆ ಭಾನುವಾರ ನಿರ್ಣಯ ಅಂಗೀಕರಿಸಿದೆ.
ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿ ಇಲ್ಲಿ ಏರ್ಪಡಿಸಿದ್ದ ಸಭೆಯು, ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಮೊಗವೀರ ಪದಗಳನ್ನು ಎಸ್‌ಟಿಗೆ ಸೇರಿಸಲು ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು.
ಎಸ್‌ಟಿ ಮತ್ತು ಸಿಂಧುತ್ವ ಪ್ರಮಾಣಪತ್ರ ನೀಡುವಲ್ಲಿ ಆದ ಅನ್ಯಾಯದ ವಿರುದ್ಧ ಹೋರಾಟ ರೂಪಿಸಲು ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಬಗ್ಗೆ ಯಾದಗಿರಿ ಜಿಲ್ಲೆಯಲ್ಲಿ ಹಗುರವಾಗಿ ಮಾತನಾಡಿದ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಲು ಈ ಸಭೆ ಕರೆಯಲಾಗಿತ್ತು.
ಸಭೆ ಉದ್ಘಾಟಿಸಿದ ಮೇಲ್ಮನೆ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ನಮ್ಮ ಸಮಾಜವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಈವರೆಗೆ ಎಸ್‌ಟಿಗೆ ಸೇರ್ಪಡೆಯಾಗಿಲ್ಲ’ ಎಂದರು.
‘ಸ್ಥಳೀಯವಾಗಿ ಹೋರಾಟ ನಡೆಸಿ. ಬೇಡಿಕೆಗೆ ಸ್ಪಂದಿಸದಿದ್ದರೆ ಬೆಂಗಳೂರಿನಲ್ಲಿಒಗ್ಗೂಡಿ ಹೋರಾಟ ಮಾಡೋಣ. ಸಮಾಜಕ್ಕಾಗಿ ರಾಜೀನಾಮೆ ನೀಡಲು ಸಿದ್ಧ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.