ADVERTISEMENT

ಕಲಬುರಗಿ | ಕೆರೆ ಒತ್ತುವರಿ ತೆರವಿಗೆ ಅಧಿಕಾರಿಗಳ ನಿರಾಸಕ್ತಿ: ಬಿ.ಎಸ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:05 IST
Last Updated 6 ಜನವರಿ 2026, 4:05 IST
   

ಕಲಬುರಗಿ: ‘ಜಿಲ್ಲೆಯಲ್ಲಿರುವ 254 ಕೆರೆಗಳ ಪೈಕಿ ನಗರದಲ್ಲಿರುವ ಏಳು ಕೆರೆಗಳು ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಲು ಆರು ತಿಂಗಳ ಹಿಂದೆಯೇ ಸೂಚನೆ ನೀಡಿದ್ದರೂ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಬೇಸರ ವ್ಯಕ್ತಪಡಿಸಿದರು.

ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸದಿಂತೆ ಸೋಮವಾರ ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒತ್ತುವರಿಯಾದ ಕೆರೆಗಳನ್ನು ನಿಜಾಮ್ ಕಾಲದಲ್ಲಿ ಬೇರೆಯವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ ಎಂದು ಹೇಳಿಕೆ ನೀಡಿದರು. ನಿಜಾಮರು ಹಂಚಿಕೆ ಮಾಡಿದ ಆದೇಶ ಪತ್ರಗಳನ್ನು ತರುವಂತೆ ಸೂಚಿಸಿದಾಗ ಅವು ಹೈದರಾಬಾದ್‌ನಲ್ಲಿದ್ದು, ಅರೇಬಿಕ್ ಭಾಷೆಯಲ್ಲಿವೆ. ಅನುವಾದ ಮಾಡಿಸಬೇಕು ಎಂದರು. ಇದಾಗಿ ಹಲವು ತಿಂಗಳು ಕಳೆದರೂ ಇನ್ನೂ ಆ ಬಗ್ಗೆ ಮಾಹಿತಿ ನೀಡಿಲ್ಲ’ ಎಂದರು.

‘ಕೆರೆಗಳ ಸರ್ವೆ ನಡೆಸಿ ಅದರ ನಕ್ಷೆಯನ್ನು ನೀಡುವಂತೆ ಡಿಡಿಎಲ್‌ಆರ್‌ಗೆ ಸೂಚಿಸಲಾಗಿದೆ. ಕಟ್ಟಡಗಳನ್ನು ಹೊರತುಪಡಿಸಿ ಉಳಿದ ಜಾಗವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 2010–11ನೇ ಸಾಲಿನಲ್ಲಿ ತಲಾ ₹ 10 ಲಕ್ಷ ವೆಚ್ಚ ಮಾಡಿ 510 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ 336 ಘಟಕಗಳು ದುರಸ್ತಿಗೆ ಬಂದಿವೆ. ಕಳ್ಳರು ಅದರಲ್ಲಿನ ಉಪಕರಣಗಳನ್ನು ಕದ್ದುಕೊಂಡು ಹೋಗಿದ್ದಾರೆ. ಇಷ್ಟಾಗಿಯೂ ಪಂಚಾಯಿತಿ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಷ್ಟು ವರ್ಷಗಳಿಂದ ಈ ಘಟಕಗಳು ದುರಸ್ತಿಯಾಗಿಯೇ ಇಲ್ಲ. ಇದರಿಂದಾಗಿ ಗ್ರಾಮಸ್ಥರು ಫ್ಲೋರೈಡ್ ಅಂಶವಿರುವ ಅಶುದ್ಧ ನೀರನ್ನು ಕುಡಿಯುತ್ತಿದ್ದಾರೆ. ಜನರ ತೆರಿಗೆ ಹಣದಲ್ಲಿ ಅಳವಡಿಸಲಾದ ಘಟಕಗಳನ್ನು ದುರಸ್ತಿ ಮಾಡಿ ನಿರ್ವಹಣೆ ಮಾಡುವುದೂ ಪಂಚಾಯಿತಿಗಳಿಂದ ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

‘ಮೊದಲ ಹಂತದಲ್ಲಿ 16 ಪಂಚಾಯಿತಿಗಳ ಘಟಕಗಳನ್ನು ದುರಸ್ತಿ ಮಾಡಬೇಕು. ಅದಕ್ಕೆ ಅಗತ್ಯವಾದ ಹಣವನ್ನು ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿರುವ ಇಂತಹ ಘಟಕಗಳನ್ನು ದುರಸ್ತಿ ಮಾಡಲು ಹತ್ತಾರು ಕೋಟಿ ಖರ್ಚು ಬರುತ್ತದೆ. ಅಷ್ಟು ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ’ ಎಂದರು.

ಲೋಕಾಯುಕ್ತ ಎಡಿಜಿಪಿ ಮನೀಷ್ ಖರ್ಬೀಕರ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಡಿಸಿ ರಾಯಪ್ಪ ಹುಣಸಗಿ, ಲೋಕಾಯುಕ್ತ ಕಾರ್ಯದರ್ಶಿ ಶ್ರೀನಾಥ ಕೆ., ಹೆಚ್ಚುವರಿ ನಿಬಂಧಕ (ವಿಚಾರಣೆ), ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ. ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.