
ಪ್ರಜಾವಾಣಿ ವಾರ್ತೆ
ಕಲಬುರಗಿ: ನಗರದ ಹೊರವಲಯದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಪ್ರಬುದ್ಧ ಅಕಾಡೆಮಿಯ ಕಟ್ಟಡ ಪಕ್ಕದ ಉಪಾಹಾರ ಗೃಹದ ತಾರಸಿಯ ಸಿಮೆಂಟ್ ಪದರು ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಐಡಿಎಲ್ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಎಇಇ ಸೌರಭ್ ಭೀಮನ್ ಅವರನ್ನು ಸೋಮವಾರ ರಾತ್ರಿಯೇ ಅಮಾನತುಗೊಳಿಸಲಾಗಿದೆ.
ಈ ಕುರಿತು ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪ್ರಬುದ್ಧ ಅಕಾಡೆಮಿ ಕಟ್ಟಡ ಪಕ್ಕದ ಉಪಾಹಾರ ಗೃಹದ ತಾರಸಿಯ ಸಿಮೆಂಟ್ ಪದರು ಕುಸಿದು ಬಿದ್ದಿರುವ ಸುದ್ದಿ ತಿಳಿದು ವೈಯಕ್ತಿಕವಾಗಿ ಬೇಸರವಾಗಿದೆ. ನಾನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ ಬಹಳ ಕಷ್ಟಪಟ್ಟು ಕೇಂದ್ರ ಮಂಜೂರು ಮಾಡಿಸಲಾಗಿತ್ತು. ಹಲವಾರು ಯುವಕರ ಕನಸು ಕನಸಾಗಲು ಈ ಸಂಸ್ಥೆ ಕಟ್ಟಿದ್ದೇವೆ. ಸಿಮೆಂಟ್ ಪದರು ಕಳಚಿ ಬಿದ್ದಿದ್ದರಿಂದ ನಮಗೂ ಮುಜುಗರವಾಗಿದೆ. ಈಗಾಗಲೇ ಇಲಾಖೆಯ ಎಇಇ ಅವರನ್ನು ಸೋಮವಾರವೇ ಅಮಾನತು ಮಾಡಲಾಗಿದೆ' ಎಂದು ತಿಳಿಸಿದರು.