ಕಲಬುರಗಿ: ‘ಲೇಖಕನಾದವನಿಗೆ ತನ್ನ ಹುಟ್ಟಿದ ಊರು ಹಾಗೂ ಅಲ್ಲಿನ ಪರಿಸರ ಬಹಳ ಮಹತ್ವದ್ದು. ಅವು ಲೇಖಕನ ಕಥೆಗಳಲ್ಲಿ ಸಹಜವಾಗಿಯೇ ಅನಾವರಣಗೊಳ್ಳುತ್ತವೆ’ ಎಂದು ಸಾಹಿತಿ ಬಾಳಾಸಾಹೇಬ ಲೋಕಾಪುರ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಶ್ವ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೃಷ್ಣ ನಾಯಕ ಅವರ ಸಮಗ್ರ ಕಥಾಸಂಕಲನ ‘ಕ್ರೌಂಚ ಪ್ರಲಾಪ’ವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಕೃಷ್ಣ ನಾಯಕ ಅವರಿಗೆ ವಿಜಯಪುರ ಜಿಲ್ಲೆಯ ಇಂಡಿ, ಕಲಬುರಗಿ, ಜೇವರ್ಗಿಯ ಸಹಜ ಆಚರಣೆಗಳ ಬಗ್ಗೆ ಮಾಹಿತಿ ಇದೆ. ಜೊತೆಗೆ ತಮ್ಮ ಬಂಜಾರ ಸಮುದಾಯದ ಆಚರಣೆಗಳ ಬಗ್ಗೆಯೂ ತಿಳಿದಿದೆ. ಅವುಗಳನ್ನು ಕಥೆಗಳಲ್ಲಿ ತಂದಿದ್ದಾರೆ. ಒಂದು ವಿಚಾರಧಾರೆಗೆ ಪ್ರತಿಯಾಗಿ ಇನ್ನೊಂದು ವಿಚಾರಧಾರೆಯನ್ನು ಇಟ್ಟು ಮಾತನಾಡುವುದು ಲೇಖಕನ ಕೆಲಸ ಅಲ್ಲ. ಸಮಕಾಲೀನ ಬದುಕಿನ ಸತ್ಯಗಳನ್ನು ಲೇಖಕ ಕಥೆಗಳಲ್ಲಿ ತರಬೇಕು. ಕಥೆ ಹೇಗೆ ಕಲ್ಪಿಸಿಕೊಂಡೆ ಎಂಬುದು ಮುಖ್ಯವಲ್ಲ. ಅದನ್ನು ಹೇಗೆ ಹೇಳುತ್ತೇನೆ ಎಂಬುದು ಮುಖ್ಯ. ನಾವು ಮಾತನಾಡುವಂತೆಯೇ ಬರೆದರೆ ಕಥೆಯಾಗುವುದಿಲ್ಲ. ಭಾಷೆಯನ್ನು ಕಲಾತ್ಮಕಗೊಳಿಸಬೇಕು ಎಂದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವು ಮಹಿಳಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ನಾರಾಯಣ ಬಿ. ಪವಾರ ಮಾತನಾಡಿ, ‘ಕೃಷ್ಣ ನಾಯಕ ಅವರ ಕಥೆಗಳಲ್ಲಿ ಪ್ರಗತಿಶೀಲ ಅಂಶಗಳಿವೆ. ತಾವು ನಡೆದಾಡಿದ ಸ್ಥಳಗಳ ನಂಟನ್ನು ಕಥೆಗಳಲ್ಲಿ ಅನಾವರಣಗೊಳಿಸಿದ್ದಾರೆ. ಇಂದು ಕಾದಂಬರಿ, ಬೃಹತ್ ಕಥೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕಿರು ಕಥೆಗಳನ್ನು ಬರೆಯುವ ಅನಿವಾರ್ಯತೆ ಎದುರಾಗಿದೆ’ ಎಂದರು.
ವಿಶ್ವ ಪ್ರಕಾಶನದ ಮುಖ್ಯಸ್ಥೆ ಉಷಾ ನಾಯಕ, ಪಾಂಡು ರಾಠೋಡ, ಸಂಜೀವ ಚವ್ಹಾಣ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ವೇದಿಕೆಯಲ್ಲಿದ್ದರು. ಸಾಹಿತಿ ಸಿ.ಎಸ್. ಆನಂದ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.