ADVERTISEMENT

ಕಲಬುರ್ಗಿ: ಪಾಲಿಕೆ ಚುನಾವಣೆಯಲ್ಲಿ ಕೆಆರ್‌ಎಸ್‌ ಕಣಕ್ಕೆ

ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಪತ್ರಿಕಾಗೋಷ್ಠಿ; ಜಿ.ಪಂ, ತಾ.ಪಂ. ಚುನಾವಣೆಗೂ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 13:00 IST
Last Updated 2 ಫೆಬ್ರುವರಿ 2021, 13:00 IST
ಎಸ್‌.ಎಚ್‌.ಲಿಂಗೇಗೌಡ
ಎಸ್‌.ಎಚ್‌.ಲಿಂಗೇಗೌಡ   

ಕಲಬುರ್ಗಿ: ಮುಂಬರುವ ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯು (ಕೆಆರ್‌ಎಸ್‌) ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್‌.ಎಚ್‌. ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರಾಷ್ಟ್ರ ಸಮಿತಿಗೆ ರಾಜ್ಯದಲ್ಲಿ 3 ಸಾವಿರ ಸದಸ್ಯರಿದ್ದು, ಕಲಬುರ್ಗಿಯಲ್ಲಿ 200 ಸದಸ್ಯರಿದ್ದಾರೆ. ಇನ್ನೂ ಹಲವಾರು ಜನ ಪಕ್ಷದ ಬೆಂಬಲಿಗಲಿದ್ದಾರೆ. ಅವರ ನೆರವಿನಿಂದ ಚುನಾವಣೆಗಳಲ್ಲಿ ಸ್ಪರ್ಧಿಸಲಿದ್ದೇವೆ. ಅಭ್ಯರ್ಥಿಗಳಾಗಿ ಕಣಕ್ಕಿಳಿಯುವವರು ತಮ್ಮ ಅಹಂಕಾರ ತ್ಯಜಿಸಿ ಜನರಿಂದ ಹಣ ಸಂಗ್ರಹಿಸಬೇಕು. ಅಂದಾಗಲೇ ಜನರ ಪರವಾಗಿ ಹೋರಾಟ ಮಾಡುವ ಮನಸ್ಸು ಗಟ್ಟಿಯಾಗುತ್ತದೆ’ ಎಂದು ಹೇಳಿದರು.

‘ಜನತಾ ದಳ, ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಮುಂದಿನ ಎಲ್ಲ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಮೂರೂ ಪಕ್ಷಗಳಿಗೆ ಪರ್ಯಾಯವಾಗಿ ರಾಜಕಾರಣ ಮಾಡಲಿದ್ದೇವೆ’ ಎಂದರು.

ADVERTISEMENT

‘ಮೂರು ಪಕ್ಷಗಳೂ ಈಗಾಗಲೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮುಳುಗಿಹೋಗಿ ಜನರ ಕಲ್ಯಾಣವನ್ನೇ ಮರೆತಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ಅತಿಯಾಗಿದ್ದು, ಜನರು ಸಂಕಷ್ಟದಲ್ಲಿದ್ದರೂ ಅವರನ್ನು ಕೇಳುವವರು ಇಲ್ಲದಂತಾಗಿದೆ. ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ಈಗಾಗಲೇ ಅತಿಯಾದ ಸಾಲದ ಭಾರದಿಂದ ನಲುಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೂ ಸಂಬಳ ನೀಡಲು ಹಣವಿಲ್ಲದ ಪರಿಸ್ಥಿತಿ ಬರಲಿದೆ. ಜನರಿಂದ ನಾನಾ ರೀತಿಯ ತೆರಿಗೆ ಮತ್ತು ಶುಲ್ಕಗಳನ್ನು ವಸೂಲಿ ಮಾಡಲಾಗುತ್ತಿದೆ. ಪೆಟ್ರೋಲ್–ಡೀಸೆಲ್ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು, ಈ ಏರಿಕೆಗೆ ಕೊನೆಯೇ ಇಲ್ಲದಂತಾಗಿದೆ’ ಎಂದು ಟೀಕಿಸಿದರು.

ಒಟ್ಟಾರೆ ಕಲ್ಯಾಣ ಕರ್ಣಾಟಕ ಭಾಗವು ಅತಿ ಹಿಂದುಳಿದ ಪ್ರದೇಶವಾಗಿದ್ದು, ದಶಕಗಳು ಕಳೆದರೂ ಅಭಿವೃದ್ಧಿ ಮಾಡಲು ಇಲ್ಲಿನ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಈ ಭಾಗದಲ್ಲಿ ಅತಿ ನಿರ್ಲಕ್ಷಿತ ವಿಚಾರಗಳಾಗಿದ್ದು, ಸರ್ಕಾರ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೈಬಣ್ಣ ಜಮಾದಾರ, ರಾಜ್ಯ ಜಂಟಿ ಕಾರ್ಯದರ್ಶಿ ಸೋಮಶೇಖರ ಕೆ.ಎಸ್‌., ರಾಜ್ಯ ಯುವ ಘಟಕದ ಕಾರ್ಯದರ್ಶಿ ಶಿವಕುಮಾರ್ ಕೊಡ್ಲಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.