ADVERTISEMENT

ಮುಷ್ಕರ: ಬಸ್ ನಿಲ್ದಾಣದ ಎದುರು ಕಾರ್ಮಿಕರು, ರೈತ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 4:19 IST
Last Updated 12 ಫೆಬ್ರುವರಿ 2026, 4:19 IST
   

ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ‌ ಎಂದು ಆರೋಪಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕರೆ ನೀಡಿದ್ದ ಸಾರ್ವತ್ರಿಕ ‌ಮುಷ್ಕರದ ಅಂಗವಾಗಿ ವಿವಿಧ ಕಾರ್ಮಿಕ ಸಂಘಟನೆಗಳ ‌ಮುಖಂಡರು ನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ, ಐಎನ್ ಟಿಯುಸಿ ಸೇರಿದಂತೆ ಎಡಪಕ್ಷ ಬೆಂಬಲಿತ ಕಾರ್ಮಿಕ ಸಂಘಟನೆಗಳು, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘ, ರೈತ ಕೃಷಿ ಕಾರ್ಮಿಕರ ಸಂಘಟನೆ, ಅಂಗನವಾಡಿ ನೌಕರರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಸ್ ನಿಲ್ದಾಣದಲ್ಲಿ ಬೇರೆ ಊರಿಗೆ ಹೊರಟಿದ್ದ ಬಸ್ ಗಳನ್ನು ಕೆಲ ಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಪಾಲಿಗೆ ಮರಣಶಾಸನವಾಗಿದ್ದು, ಅವುಗಳನ್ನು ವಾಪಸ್ ಪಡೆಯಬೇಕು. ನೌಕರರಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆ ಒದಗಿಸಬೇಕು. ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂಬ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಸಿಯುಟಿಯು ಕಾರ್ಮಿಕ ಸಂಘಟನೆ ಮುಖಂಡ ಎಂ.ಬಿ.ಸಜ್ಜನ್, ರೈತ ಹೋರಾಟ ಕರ್ನಾಟಕ ಸಂಘಟನೆ ಮುಖಂಡ ಶರಣಬಸಪ್ಪ‌ ಮಮಶೆಟ್ಟಿ, ರೈತ ನಾಯಕ ನಾಗೇಂದ್ರಪ್ಪ ಥಂಬೆ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಅಧ್ಯಕ್ಷೆ ಪದ್ಮಿನಿ ಕಿರಣಗಿ, ಕಾರ್ಯದರ್ಶಿ ಶಾಂತಾ ಸರಡಗಿ ಹಾಗೂ ರೈತ, ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.