ADVERTISEMENT

ಕಾರ್ಮಿಕ ನೆನಪುಗಳಲ್ಲಿ ಅನಂತ ಜೀವಂತ: ಮಾಜಿ ಸಚಿವ ಎಸ್‌.ಕೆ.ಕಾಂತಾ

ದಿ. ಎಚ್.ವಿ.ಅನಂತ ಸುಬ್ಬರಾವ್‌ ನುಡಿ ನಮನ; ಮುಖಂಡರಿಂದ ಗುಣಗಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:40 IST
Last Updated 7 ಫೆಬ್ರುವರಿ 2026, 2:40 IST
ಕಲಬುರಗಿಯ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಯೂನಿಯನ್‌ ವತಿಯಿಂದ ಹಮ್ಮಿಕೊಂಡಿದ್ದ ನುಡಿನಮನದಲ್ಲಿ ಕಾರ್ಮಿಕ ಮುಖಂಡ ದಿ.ಎಚ್‌.ವಿ.ಅನಂತಸುಬ್ಬರಾವ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಮಾಜಿ ಸಚಿವ ಎಸ್‌.ಕೆ.ಕಾಂತಾ, ಕೆಕೆಆರ್‌ಟಿಸಿ ಎಂ.ಡಿ ಡಾ.ಬಿ.ಸುಶೀಲಾ ಹಾಗೂ ಇತರರು ಇದ್ದಾರೆ 
–ಪ್ರಜಾವಾಣಿ ಚಿತ್ರ
ಕಲಬುರಗಿಯ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಯೂನಿಯನ್‌ ವತಿಯಿಂದ ಹಮ್ಮಿಕೊಂಡಿದ್ದ ನುಡಿನಮನದಲ್ಲಿ ಕಾರ್ಮಿಕ ಮುಖಂಡ ದಿ.ಎಚ್‌.ವಿ.ಅನಂತಸುಬ್ಬರಾವ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಮಾಜಿ ಸಚಿವ ಎಸ್‌.ಕೆ.ಕಾಂತಾ, ಕೆಕೆಆರ್‌ಟಿಸಿ ಎಂ.ಡಿ ಡಾ.ಬಿ.ಸುಶೀಲಾ ಹಾಗೂ ಇತರರು ಇದ್ದಾರೆ  –ಪ್ರಜಾವಾಣಿ ಚಿತ್ರ   

ಕಲಬುರಗಿ: ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್‌ ವರ್ಕರ್ಸ್ ಯೂನಿಯನ್ ಕಲಬುರಗಿ ‌ವಿಭಾಗ 1 ಹಾಗೂ 2ರಿಂದ ನಗರದ ಈಶಾನ್ಯ ರಂಗಮಂದಿರದಲ್ಲಿ ಶುಕ್ರವಾರ ‌ಹಮ್ಮಿಕೊಂಡಿದ್ದ ಕಾರ್ಮಿಕ ಮುಖಂಡ ದಿ.ಎಚ್.ವಿ. ಅನಂತಸುಬ್ಬರಾವ್‌ ನುಡಿ ನಮನ ಕಾರ್ಯಕ್ರಮವು ಅನಂತ ಸುಬ್ಬರಾವ್ ಗುಣಗಾನಕ್ಕೆ ವೇದಿಕೆಯಾಯಿತು.

ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಸುಶೀಲಾ ಬಿ., ಮಾಜಿ ಕಾರ್ಮಿಕ‌ ಸಚಿವ ಎಸ್.ಕೆ.ಕಾಂತಾ ಸೇರಿದಂತೆ ಹಲವು ಗಣ್ಯರು ಅನಂತ ಸುಬ್ಬರಾವ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಎಸ್‌.ಕೆ.ಕಾಂತಾ, ‘ನಾನು ಕಾರ್ಮಿಕ ಸಚಿವನಾಗಿದ್ದಾಗ ಅನಂತಸುಬ್ಬರಾವ್ ಅವರನ್ನು ಎಂ.ಎಸ್. ಕೃಷ್ಣನ್‌ ಹಾಗೂ ಎಂ.ಸಿ. ನರಸಿಂಹನ್‌ ಪರಿಚಯಿಸಿದ್ದರು. ಅವರು ತುಂಬಾ ಸ್ನೇಹಜೀವಿ. ಅವರು ಇದೀಗ ನಮ್ಮೊಂದಿಗೆ ಇಲ್ಲ. ಆದರೆ, ಕೆಎಸ್‌ಆರ್‌ಟಿಸಿಯಲ್ಲಿ ಅವರು ಮಾಡಿದ ಕೆಲಸಗಳು ಎಂದಿಗೂ ಉಳಿಯಲಿವೆ. ಕಾರ್ಮಿಕರಾಗಿ ಮನದಲ್ಲಿ, ನೆನಪುಗಳಲ್ಲಿ ಸ್ಮರಣೀಯರಾಗಿ ಉಳಿಯಲಿದ್ದಾರೆ’ ಎಂದರು.

ADVERTISEMENT

ಚಿಂತಕ ಆರ್‌.ಕೆ.ಹುಡಗಿ ಮಾತನಾಡಿ, ‘ಅನಂತ ಸುಬ್ಬರಾವ್ ನೈಜ ಕಮ್ಯುನಿಸ್ಟರಾಗಿದ್ದರು. ಕಾರ್ಮಿಕ ವರ್ಗದ ನೇತಾರರು ನಡೆಯಬೇಕಾದ ದಾರಿ, ಇಡಬೇಕಾದ ಹೆಜ್ಜೆ, ದಿಕ್ಕು–ದೆಸೆಯನ್ನು ಬಿಟ್ಟು ಹೋಗಿದ್ದಾರೆ. ಅವರ ಬದುಕಿನ ಮಹತ್ತರ ಸಾಧನೆಗಳು, ಧ್ಯೇಯ–ಧೋರಣೆಗಳು, ಗುರಿಗಳು, ತಾತ್ವಿಕ ನೆಲೆಗಳು ನಮ್ಮೆಲ್ಲರಿಗೂ ಮಾರ್ಗದರ್ಶಕ ಆಗಬೇಕು’ ಎಂದರು.

‘1848ರಲ್ಲಿ ಜಗತ್ತಿನ ಕಾರ್ಮಿಕರೇ ಒಂದಾಗಿ ಎಂಬ ಘೋಷಣೆ ಮೊಳಗಿತ್ತು. ಕಾರ್ಮಿಕರು, ದುಡಿಯುವ ಜನರಿಗೆ ಜ್ಞಾನೋದಯವಾಗಿ ಒಗ್ಗೂಡಿದ್ದರು. ಅದರಂತೆ 1990ರ ದಶಕದಲ್ಲಿ ಶೋಷಕರಿಗೂ ಜ್ಞಾನೋದಯವಾಯಿತು. ಅವರೂ ಒಗ್ಗೂಡಿ ‘ಜಾಗತೀಕರಣ’ದ ಪ್ರಕ್ರಿಯೆ ಆರಂಭಿಸಿದರು. ವಿಶ್ವದಾದ್ಯಂತ ಕಾರ್ಮಿಕ ವರ್ಗ ಏನೆಲ್ಲ ಗಳಿಸಿತ್ತೋ, ಯಾವ ಮುನ್ನಡೆ ಸಾಧಿಸಿತ್ತೋ ಅದನ್ನು ಒಂದೊಂದಾಗಿ ಕಸಿಯುತ್ತ ಇಂದಿನ ಸ್ಥಿತಿಗೆ ತಂದು ಮುಟ್ಟಿಸಿದ್ದಾರೆ. ಇಂಥ ದುರ್ಬರ ಸ್ಥಿತಿಯಲ್ಲಿ ಅನಂತಸುಬ್ಬರಾವ್ ಅಗಲಿಕೆ ನಿಜಕ್ಕೂ ನಷ್ಟ’ ಎಂದರು.

ಅಧಿಕಾರಿಗಳ ಪರವಾಗಿ ಕೆಕೆಆರ್‌ಟಿಸಿ ಕಲಬುರಗಿ 1ನೇ ಡಿಪೊ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಪ್ಪ ಜಿ. ಗಂಗಾಧರ, ಕಾರ್ಮಿಕರ ಪರವಾಗಿ ಚಂದ್ರಕಾಂತ ಗದ್ದಗಿ, ವೆಂಕಟೇಶ ಜನಾದ್ರಿ ಮಾತನಾಡಿದರು.

ಕಾರ್ಮಿಕ ಮುಖಂಡ ಸಿದ್ದಪ್ಪ ಪಾಲಕಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಅನಂತ ಸುಬ್ಬರಾವ್ ಆರಂಭದಲ್ಲಿ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿದ್ದರು. ಬಳಿಕ ಅವರು ಕಾರ್ಲ್‌ ಮಾರ್ಕ್ಸ್‌ ಚಿಂತನೆಗಳಿಗೆ ಆಕರ್ಷಿತರಾದರು. 1974ರಲ್ಲಿ ಕೆಎಸ್‌ಆರ್‌ಟಿಸಿ ಯೂನಿಯನ್‌ ಕಟ್ಟಿ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಅವಿರತವಾಗಿ ಹೋರಾಡಿದರು’ ಎಂದರು.

ವೇದಿಕೆಯಲ್ಲಿ ಚಂದ್ರಕಾಂತ ಪುಲೇಕರ, ಮಹೇಶಕುಮಾರ ರಾಠೋಡ, ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಅಶೋಕ ಘೂಳಿ, ಜಗದೀಶ ನಾಯಕ, ಅಯಾಜ್‌, ಪದ್ಮಾಕರ ಜಾನಿಬ್‌, ಪದ್ಮಾವತಿ ಮಾಲಿಪಾಟೀಲ ಸೇರಿದಂತೆ ಹಲವರು ಇದ್ದರು.

ಅನಂತಸುಬ್ಬರಾವ್‌ ಅವರಿಗೆ ಸ್ವಯಂ ಸ್ವಾರ್ಥ ಇರಲಿಲ್ಲ; ಬರೀ ಕಾರ್ಮಿಕರ ಸ್ವಾರ್ಥ ಸಾರಿಗೆ ಸಂಸ್ಥೆ ಸ್ವಾರ್ಥ ಮಾತ್ರವೇ ಇತ್ತು. ಸರ್ಕಾರಿ ಸಂಸ್ಥೆಗಳು ಬೆಳೆಯಬೇಕೆಂಬ ನಿಲುವು ಹೊಂದಿದ್ದರುಮುಖಂಡ
ಸಿದ್ದಪ್ಪ ಪಾಲ್ಕಿ ಕಾರ್ಮಿಕ

‘ಜನಪರ ಕಾಳಜಿಯ ನಾಯಕರು ಅಗತ್ಯ’

ಎಡಪಂಥಿಯ ಚಿಂತಕ ಮಾರುತಿ ಗೋಖಲೆ ಮಾತನಾಡಿ ‘1940ರ ದಶಕದಲ್ಲಿ ಜರ್ಮನಿ ಯಾವ ಸ್ಥಿತಿಯಲ್ಲಿತ್ತೋ ಅಂಥ ಸ್ಥಿತಿಯಲ್ಲಿ ಇಂದು ಭಾರತವಿದೆ. ನಮ್ಮಲ್ಲೂ ಫ್ಯಾಸಿಸಂನ ತೀಕ್ಷ್ಣತೆ ನಿಧಾನಕ್ಕೆ ಅನುಭವಕ್ಕೆ ಬರುತ್ತಿದೆ.

ಗಾಜಾದಲ್ಲಿ ನರಮೇಧ ನಡೆಯುತ್ತಿದ್ದಾಗ ಸಣ್ಣಸಣ್ಣ ರಾಷ್ಟ್ರಗಳಲ್ಲೇ ದೊಡ್ಡ ಪ್ರತಿಭಟನೆಗಳಾದವು. ಆದರೆ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುವ ಭಾರತದಲ್ಲಿ ಸಣ್ಣ ಪುಟ್ಟ ಪ್ರತಿಭಟನೆಗಳು ಮಾತ್ರವೇ ನಡೆದವು. ಕ್ರಮೇಣ ನಮ್ಮ ವಿಚಾರಶೀಲತೆಯನ್ನು ಪ್ರಭುತ್ವ ನಿಯಂತ್ರಿಸುತ್ತಿದೆ. ಇಂಥ ಸಂದರ್ಭದಲ್ಲಿ ಜನಪರವಾಗಿ ಜನರನ್ನು ಮುನ್ನಡೆಸುವ ಅನಂತ ಸುಬ್ಬರಾವ್‌ ಅವರಂಥ ನಾಯಕರ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.