ADVERTISEMENT

ಕಲಬುರಗಿ: ಡಯಾಲಿಸಿಸ್‌ ಕೇಂದ್ರಗಳಿಗೆ ಬೇಕಿದೆ ಚಿಕಿತ್ಸೆ

ನಿರ್ವಹಣೆ ಕಾಣದ ಯಂತ್ರಗಳು; ರೋಗಿಗಳ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 4:29 IST
Last Updated 27 ಆಗಸ್ಟ್ 2024, 4:29 IST
ಕಲಬುರಗಿಯ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಕೆಟ್ಟು ನಿಂತ ಯಂತ್ರಗಳು
ಕಲಬುರಗಿಯ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಕೆಟ್ಟು ನಿಂತ ಯಂತ್ರಗಳು   

ಕಲಬುರಗಿ: ಸಾರ್ವಜನಿಕ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್ ಕೇಂದ್ರಗಳಲ್ಲಿನ ಹಳೆಯ ಯಂತ್ರಗಳು ನಿರ್ವಹಣೆಗಾಗಿ ಕಾಯುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ 14 ಡಯಾಲಿಸಿಸ್‌ಗಳ ಸಂಖ್ಯೆ 9ಕ್ಕೆ ಇಳಿದಿದೆ. ಅವುಗಳಲ್ಲಿ ಐದು ಈಚೆಗಷ್ಟೆ ಹೊರ ಜಿಲ್ಲೆಗಳಿಂದ ತರಿಸಿಕೊಳ್ಳಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಯಾಲಿಸಿಸ್ ಸೇವೆಯನ್ನು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಒದಗಿಸುತ್ತಿದೆ. ಆದರೆ, ಅಸಮರ್ಪಕ ನಿರ್ವಹಣೆಯಿಂದಾಗಿ ಡಯಾಲಿಸಿಸ್ ಯಂತ್ರಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಡಯಾಲಿಸಿಸ್ ಸೇವೆಯನ್ನು ಉಚಿತವಾಗಿ ಒದಗಿಸುವ ಸರ್ಕಾರದ ಆಶಯಕ್ಕೂ ಹಿನ್ನೆಡೆಯಾಗುತ್ತಿದೆ.

‘ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ 14 ಡಯಾಲಿಸಿಸ್ ಯಂತ್ರಗಳಿದ್ದವು. ಎರಡು ತಿಂಗಳ ಹಿಂದೆ ಏಳು ಯಂತ್ರಗಳು ಕೆಟ್ಟು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೆವು. ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗಲಿಲ್ಲ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ (ಸಿಕೆಡಿ) ತುತ್ತಾಗಿ ನಿಯಮಿತವಾಗಿ ಡಯಾಲಿಸಿಸ್‌ಗೆ ಬರುವ ರೋಗಿಗಳಿಗೆ ಬೆಳಿಗ್ಗೆ 5ರಿಂದ ರಾತ್ರಿ 12ರ ವರೆಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಈಚೆಗೆ ಐದು ಯಂತ್ರಗಳನ್ನು ಹೊರ ಜಿಲ್ಲೆಗಳಿಂದ ತರಿಸಿಕೊಳ್ಳಲಾಗಿದೆ’ ಎಂದು ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಹೇಳಿದರು.

ADVERTISEMENT

‘ಡಯಾಲಿಸಿಸ್ ಯಂತ್ರಗಳ ಕೊರತೆಯು ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ಹೋದ ಬಳಿಕ ವಿಜಯಪುರದಿಂದ 3 ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಯಿಂದ ಎರಡು ಯಂತ್ರಗಳನ್ನು ತರಿಸಿ, ಬಳಸಿಕೊಳ್ಳಲಾಗುತ್ತಿದೆ. ಉಳಿದ ಯಂತ್ರಗಳು ಸಹ ಹಳೆಯದಾಗಿದ್ದು ಯಾವುದೇ ಕ್ಷಣದಲ್ಲಿ ಕೈಕೊಡಬಹುದು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘14 ಯಂತ್ರಗಳ ಪೈಕಿ 7 ಯಂತ್ರಗಳು ಸ್ಥಗಿತವಾಗಿದ್ದಾಗ ಪರಿಸ್ಥಿತಿ ಗಂಭೀರವಾಗಿತ್ತು. ಕೆಲವು ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾದರು. ಬಡವರು ವಾಪಸ್‌ ಹೋಗಿ ಮತ್ತೆ ಬೆಳಿಗ್ಗೆ ಬಾರಲು ಹಣ ಖರ್ಚಾಗುತ್ತದೆ ಎಂದು ಆಸ್ಪತ್ರೆಯ ಆವರಣದಲ್ಲಿಯೇ ಮಲಗಿ ಮರುದಿನ ಡಯಾಲಿಸಿಸ್ ಮಾಡಿಸಿಕೊಂಡಿದ್ದರು. ಐದು ಯಂತ್ರಗಳು ಬಂದ ಬಳಿಕ ಸ್ವಲ್ಪ ಸುಧಾರಣೆ ಕಂಡಿದೆ. 15 ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ’ ಎಂದು ವಿವರಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ರತಿಕಾಂತ ಸ್ವಾಮಿ, ‘ಐದು ಹೊಸ ಯಂತ್ರಗಳನ್ನು ತರಿಸಿಕೊಂಡು ಚಿಕಿತ್ಸೆ ಕೊಡಲಾಗುತ್ತಿದೆ. ಹೊಸದಾಗಿ ಟೆಂಡರ್ ಕರೆಯುತ್ತಿದ್ದು, ಡಯಾಲಿಸಿಸ್‌ಗಳ ಕೊರತೆ ದೂರಾಗಲಿದೆ. ಆಳಂದ ಮತ್ತು ಸೇಡಂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದು ಹಾಗೂ ಉಳಿದ ತಾಲ್ಲೂಕುಗಳಲ್ಲಿ ತಲಾ ಎರಡು ಯಂತ್ರಗಳಿವೆ. ಯಂತ್ರಗಳು ದುರಸ್ತಿಗೆ ಬಂದಾಗ ಅಥವಾ ರೋಗಿಗಳ ಸಂಖ್ಯೆ ಹೆಚ್ಚಾದಾಗ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಕಲಬುರಗಿಯ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ದಾಖಲಾದ ರೋಗಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.