ಚಿಂಚೋಳಿ: ದಕ್ಷಿಣ ಭಾರತದ ಶುಷ್ಕ ವಲಯದ ಏಕೈಕ ವನ್ಯಜೀವಿ ಧಾಮ ಎಂಬ ಖ್ಯಾತಿ ಪಡೆದ ಮಿನಿ ಮಲೆನಾಡು ಬೇಸಿಗೆಯಲ್ಲಿ ಸುರಿದ ಮಳೆಯಿಂದ ಜೀವಕಳೆ ಪಡೆದುಕೊಳ್ಳುತ್ತಿದ್ದು ಹಸಿರು ಮೈದುಂಬಿಕೊಳ್ಳುತ್ತಿದೆ.
ಎಲೆ ಉದುರುವ ಕಾಡುಗಳ ಶ್ರೇಣಿಗೆ ಸೇರಿದ ಚಿಂಚೋಳಿ ವನ್ಯಜೀವಿ ಧಾಮದ ಕಾಡು ತಿಂಗಳ ಹಿಂದೆ ಸಂಪೂರ್ಣ ಬರಡು ಬರಡಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದ ಬರಡು ಗಿಡಗಳಲ್ಲಿ ಹಸಿರು ಚಿಗುರಿದ್ದು ದಿನದಿಂದ ದಿನಕ್ಕೆ ಕಾಡು ಆಕರ್ಷಿಸುತ್ತಿದೆ.
ಬಿರು ಬೇಸಿಗೆಯ ಸುಡು ಬಿಸಿಲಿನಲ್ಲಿ ಕಾಡು ಹಸಿರು ಹೊದ್ದು ತಂಗಾಳಿ ಸೂಸುತ್ತಿರುವುದು ಸಮಾಧಾನದ ಸಂಗತಿ. ದಿಂಡಿಲು, ತೇಗ(ಸಾಗವಾನಿ) ಬಿಟ್ಟಲು, ಮತ್ತಿ, ಹಿಪ್ಪೆ, ಸಿಸ್ಸು, ಮುತ್ತುಗ, ಕವಲು, ಸ್ವಾಮಿ, ಚನ್ನಂಗಿ, ರಕ್ತಚಂದನ, ರಕ್ತಹೊನ್ನೆ, ತುಮರಿ, ಬಿಳಿ ಬುರುಗ, ಬಿಲ್ವಪತ್ರೆ ಮೊದಲಾದ ಗಿಡಗಳು ಚಿಗುರೊಡೆದಿದ್ದು ಇಡಿ ಹಸಿರಿನ ಸಿರಿಯತ್ತ ಹೊರಳುತ್ತಿದೆ.
ಇಲ್ಲಿನ ವನ್ಯಜೀವಿಗಳಿಗೆ ಕುಡಿವ ನೀರಿನ ದಾಹ ತೀರಿಸಿಕೊಳ್ಳಲು ಪರದಾಡುವಂತಾಗಿವೆ. ಚಿಂಚೋಳಿ ವನ್ಯಜೀವಿ ಧಾಮದ ವೈಶಿಷ್ಟ್ಯ ಬಿಂಬಿಸುವ ಮುಕಾಕ್ ಮುಲೆಟ್ ಜಾತಿಗೆ ಸೇರಿದ ಕೋತಿಗಳು ಕುಡಿಯುವ ನೀರು ಹಾಗೂ ತಿನ್ನಲು ಆಹಾರ ಸಿಗದೇ ಸೊರಗಿ ಹೋಗಿವೆ. ಇವುಗಳನ್ನು ಕಂಡು ದಾರಿಯಲ್ಲಿ ಸಾಗುವವರು ತರಕಾರಿ, ಹಣ್ಣು ಹಾಗೂ ಬ್ರೆಡ್ ಸಹಿತ ವಿವಿಧ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಇಲ್ಲಿನ ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ತತ್ವಾರ ಎದುರಾಗಿದ್ದು ಮಳೆ ಸುರಿದು ಗುಂಡಿಗಳಲ್ಲಿ ನಿಂತ ನೀರು ಸೇವಿಸುತ್ತಿರುವುದು ಮನ ಕಲಕುವಂತಿದೆ. ರಸ್ತೆ ಬದಿಯಲ್ಲಿ ಪ್ರತಿ ಅರ್ಧ ಕಿ.ಮೀಗೆ ಒಂದರಂತೆ ತೊಟ್ಟಿಗಳನ್ನು ಇಡಲಾಗಿದೆ. ಆದರೆ ಇವುಗಳು ಬಾಯಾರಿಕೆಯಿಂದ ಬಳಲುತ್ತಿವೆ.
ರಸ್ತೆಯ ಅಕ್ಕಪಕ್ಕದ ಗುಂಡಿಗಳಲ್ಲಿ ನಿಂತ ಮಳೆ ನೀರು ಬಿಸಿಲಿನಿಂದ ತನ್ನ ಗುಣ ಕಳೆದುಕೊಳ್ಳುವುದಲ್ಲದೇ ಅದರಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವ ಸಾಧ್ಯತೆ ಅಧಿಕವಿರುತ್ತದೆ. ಇಂತಹ ನೀರನ್ನು ವನ್ಯಜೀವಿಗಳು ಕುಡಿದರೆ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎನ್ನುತ್ತಾರೆ ಪಶುಪಾಲನಾ ಇಲಾಖೆ ಸಹಾಯಕ ನಿರ್ದೆಶಕ ಡಾ.ಮಲ್ಲಿಕಾರ್ಜುನ ಗುತ್ತೇದಾರ.
ವನ್ಯಜೀವಿಗಳಿಗೆ ನೀರಿನ ಕೊರತೆಯಿಲ್ಲ ರಸ್ತೆ ಬದಿಯಲ್ಲಿ ತೊಟ್ಟಿಗಳಿಗೆ ನೀರು ಹಾಕುವುದು 2 ವರ್ಷದಿಂದ ನಿಲ್ಲಿಸಲಾಗಿದೆ. ಬಿಸಿಲು ಹೆಚ್ಚುತ್ತಿರುವುದರಿಂದ ಮುಂದಿನ ವಾರದಿಂದ ನೀರು ಪೂರೈಕೆ ಆರಂಭಿಸಲು ಉದ್ದೇಶಿಸಿದ್ದೇವೆಭಾಗಪ್ಪಗೌಡ ವಲಯ ಅರಣ್ಯಾಧಿಕಾರಿ ವನ್ಯಜೀವಿ ಧಾಮ ಚಿಂಚೋಳಿ
ಚಿಂಚೋಳಿ ವನ್ಯಜೀವಿ ಧಾಮದ ಕಾಡಿನಲ್ಲಿರುವ ಪ್ರಾಣಿಗಳಿಗೆ ಆಹಾರ ನೀರಿನ ಕೊರತೆ ಉಂಟಾಗದAತೆ ವನ್ಯಧಾಮದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಕನಿಷ್ಠ ಪಕ್ಷ ತೊಟ್ಟಿಗಳಲ್ಲಿ 2 ದಿನಕ್ಕೊಮ್ಮೆ ನೀರು ತುಂಬಬೇಕುಶಿವಯೋಗಿ ರುಸ್ತಂಪುರ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.